ಬೇಕರಿ ಮಾಲೀಕ ಪೆಟ್ರೋಲಿಗೆ ಕಾಸು ಕೊಟ್ಟಿಲ್ಲವೆಂದು ಗ್ರಾಹಕನ ಉದ್ಧಟತನ - ETV Bharat kannada News
🎬 Watch Now: Feature Video
ಬೆಂಗಳೂರು : ನಗರದಲ್ಲಿ ಅಂಗಡಿ ಮಾಲೀಕರ ಮೇಲೆ ದಿನ ದಿಂದ ದಿನಕ್ಕೆ ಪುಂಡರ ಪೌರುಷ ಪ್ರದರ್ಶನ ಮುಂದುವರೆದಿದೆ. ಎಚ್ಎಎಲ್, ಜ್ಞಾನಭಾರತಿ, ಬಾಣಸವಾಡಿ ಬಳಿಕ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಮಾಳಗಾಳದಲ್ಲಿ ಮತ್ತದೇ ಮಾದರಿಯ ಪ್ರಕರಣ ಮರುಕಳಿಸಿದೆ. ಪೆಟ್ರೋಲ್ ಹಾಕಿಸಲು ಹಣ ಕೊಡಲಿಲ್ಲವೆಂದು ಗ್ರಾಹಕನೊಬ್ಬ ಬೇಕರಿ ಮಾಲೀಕನ ಮೇಲಿನ ಸಿಟ್ಟಿಗೆ ಬೇಕರಿಯ ಗಾಜುಗಳನ್ನು ಒಡೆದು ದಾಂಧಲೆ ನಡೆಸಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯ ಮಾಳಗಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೇಕರಿ ಮಾಲೀಕನ ಮೇಲಿನ ಕೋಪಕ್ಕೆ ಅಂಗಡಿಯ ಗಾಜುಗಳನ್ನ ಪುಡಿ ಮಾಡಿರುವ ಆರೋಪ ಪ್ರಕಾಶ್ ಎಂಬಾತನ ವಿರುದ್ಧ ಕೇಳಿಬಂದಿದೆ.
ಮಾಳಗಾಳ ಬಳಿ ಇರುವ ಬೇಕರಿಯೊಂದರ ದೈನಂದಿನ ಗ್ರಾಹಕನಾಗಿದ್ದ ಪ್ರಕಾಶ್, ನಿನ್ನೆ ಮಧ್ಯಾಹ್ನ ಬೇಕರಿ ಮಾಲೀಕನ ಬಳಿ ಪೆಟ್ರೋಲ್ ಹಾಕಿಸಲು ಹಣ ಬೇಕಿದೆ ಎಂದು ಕೇಳಿದ್ದಾನೆ. ಸಾಲ ನೀಡಲು ಹಣವಿಲ್ಲ ಎಂದು ಪ್ರಕಾಶನಿಗೆ ಬೇಕರಿ ಮಾಲೀಕ ರಘುನಾಥ್ ತಿಳಿಸಿದ್ದಾರೆ. ಇದಾದ ನಂತರ ತಡರಾತ್ರಿ ರಘುನಾಥ್ ವಾಸವಿರುವ ಮನೆ ಬಳಿ ಚಾಕು ಸಮೇತ ಬಂದಿದ್ದ ಆರೋಪಿ ಇದೇ ವಿಚಾರವಾಗಿ ಗಲಾಟೆ ಆರಂಭಿಸಿದ್ದಾನೆ.
ತಕ್ಷಣ ಒಟ್ಟಾದ ಅಕ್ಕಪಕ್ಕದವರು ಆರೋಪಿಗೆ ಬೈದು ಸ್ಥಳದಿಂದ ಕಳುಹಿಸಿದ್ದಾರೆ. ಆದರೆ ಇಂದು ಬೆಳಗ್ಗೆ 7 ಗಂಟೆಗೆ ಪುನಃ ಬೇಕರಿ ಬಳಿ ಬಂದಿದ್ದ ಆರೋಪಿ, ಬೇರೆಯವರಿಗಾದರೆ ಹಣ ಕೊಡುತ್ತೀಯಾ, ನನಗೆ ಕೊಡುವುದಿಲ್ಲವೇ? ಎಂದು ಮರದ ತುಂಡಿನಿಂದ ಬೇಕರಿ ಗಾಜುಗಳನ್ನು ಜಖಂಗೊಳಿಸಿ ಆವಾಜ್ ಹಾಕಿದ್ದಾನೆ. ಪುಂಡನ ಉಪಟಳದಿಂದ ಬೇಸತ್ತ ಬೇಕರಿ ಮಾಲೀಕ ರಘುನಾಥ್ ಶೆಟ್ಟಿ ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ :ನಿಲ್ಲಿಸಿದ್ದ ಕಾರುಗಳ ಮೇಲೆ ಕಲ್ಲು ತೂರಿ ಕಿಡಿಗೇಡಿಗಳಿಂದ ಪುಂಡಾಟ.. ಮತ್ತೊಂದೆಡೆ ಮುಖಕ್ಕೆ ಪಂಚ್ ಮಾಡಿ ಪರಾರಿ!