ಸಂವಿಧಾನ ದಿನ: ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸಿದ್ದರಾಮಯ್ಯ ಮಾಲಾರ್ಪಣೆ - Karnataka CM Siddaramaiah
🎬 Watch Now: Feature Video
Published : Nov 26, 2023, 12:45 PM IST
ಬೆಂಗಳೂರು: ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರರು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಸಿಎಂ, ಇಂದು ಸಂವಿಧಾನ ಅಂಗೀಕಾರವಾದ ದಿನ. 1949ರ ನವೆಂಬರ್ 26ರಂದು ಭಾರತದ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ.ಬಾಬುರಾಜೇಂದ್ರ ಪ್ರಸಾದ್ ಅವರಿಗೆ ಭಾರತದ ಸಂವಿಧಾನವನ್ನು ಸಲ್ಲಿಸಿದ ಬಳಿಕ ಸಂವಿಧಾನ ಅಂಗೀಕಾರವಾಯಿತು. ಆದ್ದರಿಂದ ಈ ದಿನವನ್ನು ಸಂವಿಧಾನ ದಿನವೆಂದು ಇಡೀ ದೇಶದಲ್ಲಿ ಆಚರಿಸಲಾಗುತ್ತದೆ. ಇಂದು ಡಾ.ಬಾಬು ರಾಜೇಂದ್ರ ಪ್ರಸಾದ್, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರನ್ನು ನೆನಪಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಭಾರತದ ಸಂವಿಧಾನ ಶ್ರೇಷ್ಠವಾದುದು. ಸಂವಿಧಾನ ಎಷ್ಟೇ ಶ್ರೇಷ್ಠವಾಗಿದ್ದರೂ, ಸರಿಯಾದ ಕೈಗಳಲ್ಲಿ ಸಂವಿಧಾನವಿರದಿದ್ದರೆ ಸಾರ್ಥಕವಾಗುವುದಿಲ್ಲ ಎಂದು ಅಂಬೇಡ್ಕರ್ ಅವರು ಎಚ್ಚರಿಕೆಯ ಮಾತುಗಳನ್ನು ನುಡಿದಿದ್ದರು. ಸಂವಿಧಾನದ ಪರವಾಗಿರುವ ಕೈಗಳಲ್ಲಿ ಅಧಿಕಾರ ಇದ್ದಾಗ ಮಾತ್ರ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಸಾಧಿಸಿದಂತಾಗುತ್ತದೆ ಎಂದು ಹೇಳಿದರು.
ರಾಷ್ಟ್ರಕವಿ ಕುವೆಂಪು ಹೇಳಿದಂತೆ 'ಸರ್ವ ಜನಾಂಗದ ಶಾಂತಿಯ ತೋಟ'ದಂತಹ ಸಮಾಜ ನಿರ್ಮಾಣವಾಗಬೇಕೆಂದು ಮಹಾತ್ಮಾ ಗಾಂಧಿ, ಜವಾಹರ್ ಲಾಲ್ ನೆಹರೂ ಕನಸು ಕಂಡಿದ್ದರು. ನಮ್ಮ ಸರ್ಕಾರ ಸಂವಿಧಾನದ ಆಶಯಗಳಂತೆ ನಡೆಯಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆ. ಸಂವಿಧಾನದ ಪೀಠಿಕೆಯಲ್ಲಿ ಇದರ ಸಾರವಿದೆ. ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಸರ್ಕಾರದ ಈ ಕ್ರಮದಿಂದ ಇಂದಿನ ಮಕ್ಕಳು ಮುಂದಿನ ಪ್ರಜೆಗಳಾಗಿ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ನಡೆಯಲು ಸಾಧ್ಯವಾಗುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ : ಹುತಾತ್ಮ ಪೊಲೀಸ್ ಅಧಿಕಾರಿಗಳು, ಯೋಧರಿಗೆ ಗೌರವ ನಮನ