ಸೌಂದರ್ಯದ ರಾಶಿ ಚಿಕ್ಕಮಗಳೂರು ಚಾರ್ಮಾಡಿ ಘಾಟಿ.. ಕಾಫಿನಾಡಿನ ಕ್ಷೀರಧಾರೆಯ ವಿಡಿಯೋ ನೋಡಿ..

🎬 Watch Now: Feature Video

thumbnail

By

Published : Jul 29, 2023, 9:06 AM IST

Updated : Jul 29, 2023, 3:25 PM IST

ಚಿಕ್ಕಮಗಳೂರು: ಪ್ರಕೃತಿಯ ಐಸಿರಿಯೇ ಹಾಗೆ, ಮನಸೋಲದವರೇ ಇಲ್ಲ. ಕಳೆದ ಹಲವು ದಿನಗಳಿಂದ ಸುರಿದ ಮಳೆಯಿಂದ ನೂರಾರು ಜಲಪಾತಗಳ ಉದಯವಾಗಿದೆ. ಚಾರ್ಮಡಿ ಘಾಟ್​ನಲ್ಲಿ ಹತ್ತಾರು ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರಿಗೆ ಒಮ್ಮೆ ಚಾನ್ಸ್ ಸಿಕ್ಕಿದ್ರೆ ಚಾರ್ಮಾಡಿ ಘಾಟ್ ಕಡೆ ಒಮ್ಮೆ ಪಯಣ ಬೆಳೆಸಿ. ಹೌದು, ಚಿಕ್ಕಮಗಳೂರು ಅಂದ್ರೆ ಸಾಕು. ಅಲ್ಲಿನ ಸೌಂದರ್ಯ ರಾಶಿ ಕಣ್ಮುಂದೆ ಬಂದು ನಿಲ್ಲುತ್ತೆ. ಬೆಟ್ಟ-ಗುಡ್ಡಗಳ ಸಾಲು. ಬಾನಿಗೆ ಮುತ್ತಿಕ್ಕುವಂತೆ ಮಂಜಿನ ರಾಶಿ ಕಂಡುಬರುತ್ತೆ. 

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಹಸಿರ ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕಿ ಹರಿಯೋ ಜಲಧಾರೆ ಚಾರ್ಮಾಡಿ ಘಾಟಿಯ ಸೊಬಗನ್ನು ಇಮ್ಮಡಿಗೊಳಿಸಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿಯ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲದು. ಮುಂಗಾರು ಮಳೆಯ ಸಿಂಚನದಿಂದ ಜಲಪಾತಗಳು ಜೀವ ಕಳೆಯನ್ನು ಪಡೆದುಕೊಂಡಿವೆ. ಬಂಡೆಗಳ ಮೇಲಿನಿಂದ ಜುಳು-ಜುಳು ನಿನಾದ ಗೈಯುತ್ತ ಧುಮ್ಮಿಕ್ಕೋ ಜಲಧಾರೆಗಳು ಕ್ಷೀರಧಾರೆಯಂತೆ ಭಾಸವಾಗುತ್ತವೆ. ನಿರಂತರ ಮಳೆಯ ಆಗಮನಕ್ಕೆ ಬೆಟ್ಟಗಳು ಸಾಲು ಹಸಿರೊದ್ದು ಝೇಂಕರಿಸುತ್ತಿದ್ದರೆ, ಮಂಜಿನ ಕಣ್ಣಾಮುಚ್ಚಾಲೆ ಆಟ ನಿಸರ್ಗ ಪ್ರಿಯರ ಸ್ವರ್ಗವಾಗಿ ಮಾರ್ಪಟ್ಟಿದೆ.

ಬಾನೆತ್ತರದ ಶಿಖರಗಳಿಂದ ರಭಸವಾಗಿ ಚಿಮ್ಮುವ ಜಲಪಾತಗಳು ರಮಣೀಯ ನೋಟವನ್ನು ಸೃಷ್ಟಿಸಿದರೆ, ದಟ್ಟ ಕಾನನದ ನಡುವಿನ ಜುಳು-ಜುಳು ನಿನಾದೊಂದಿಗೆ ಹರಿಯೋ ಝರಿಗಳು ಮನಕ್ಕೆ ಮುದ ನೀಡುತ್ತಿವೆ. ಮುಗಿಲು ಚುಂಬಿಸೋ ಹಸಿರು ಬೆಟ್ಟದ ಮೇಲೆಲ್ಲ ಹರಡಿರೋ ಹಿಮದ ರಾಶಿ. ಯಾವಾಗಾದರು ಒಮ್ಮೊಮ್ಮೆ ಬೆಳ್ಮುಗಿಲ ಸಾಲಿಂದ ಬಂಗಾರದ ಕಿರಣಗಳನ್ನು ಹೊರಸೂಸೋ ದಿನಕರನ ಚಿತ್ತಾರ ಕಾಣಿಸುತ್ತೆ. ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ಸಾಗೋ ಜಲಧಾರೆಯ ಮಂಜುಳಗಾನ, ಪ್ರಶಾಂತತೆಯಲ್ಲೂ ಹಸಿರ ಹೊದ್ದು ಮಲಗಿರೋ ದಟ್ಟ ಕಾನನಗಳು ಮಲೆನಾಡಲ್ಲೊಂದು ಹೊಸ ಲೋಕವನ್ನೇ ಸೃಷ್ಟಿಸಿವೆ. ಹಸಿರು ಬೆಟ್ಟಗಳ ನಡುವೆ ಧುಮ್ಮಿಕ್ಕಿ ಹರಿಯೋ ಜಲಧಾರೆಯ ಕವಲು. ನೆಲಕ್ಕೆ ಮುತ್ತಿಕ್ಕಿ ಪುಟಿಯುವ ನೀರ ಹನಿಗಳೊಳಗಿನ ಜಲಪಾತಗಳ ವೈಭವ ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತಿದೆ.

ಒಟ್ಟಾರೆಯಾಗಿ ದಟ್ಟವಾದ ಮಂಜು, ಚುಮು ಚುಮು ಚಳಿ, ಮಿಸ್ಸಾಗದೇ ಬರೋ ಮಳೆಯ ಮಧ್ಯೆ ಚಾರ್ಮಾಡಿಯ ಪಯಣ ಎಂಥವರಿಗೂ ರೋಮಾಂಚನ ತರಿಸುತ್ತೆ. ಚಾರ್ಮಾಡಿ ಚಾರಣಿಗರ ಸ್ವರ್ಗ. ಹಸಿರು ಬೆಟ್ಟಗಳ ಸಾಲಿನಿಂದ ಧುಮ್ಮಿಕ್ಕೋ ಜಲಧಾರೆಯ ಕವಲು. ಪ್ರಕೃತಿ ಮಾತೆಯ ನಿಸರ್ಗ ಚೆಲುವು. ಪ್ರತಿ ನಿತ್ಯ ತನ್ನತ್ತ ಕೈಬೀಸಿ ಕರೆಯುತ್ತಿದೆ.

ಇದನ್ನೂ ಓದಿ: Gokak Water Falls: ಹಾಲ್ನೊರೆಯಂತೆ ಚಿಮ್ಮುತ್ತಿದೆ ಗೋಕಾಕ್ ಜಲಪಾತ; ಹರಿದು ಬರ್ತಿದೆ ಪ್ರವಾಸಿಗರ ದಂಡು

Last Updated : Jul 29, 2023, 3:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.