ಶಾಸ್ತ್ರೋಕ್ತವಾಗಿ ಕತ್ತೆಗಳ ಮದುವೆ ಮಾಡಿ.. ಮಳೆಗಾಗಿ ಮೊರೆಯಿಟ್ಟ ಹನಸಿ ಗ್ರಾಮಸ್ಥರು
🎬 Watch Now: Feature Video
ವಿಜಯನಗರ: ರಾಜ್ಯದಲ್ಲಿ ಸದ್ಯ ಮಳೆಯಿಲ್ಲದ ಕಾರಣ ಬರಗಾಲ ಎದುರಾಗೋ ಭೀತಿ ಶುರುವಾಗಿದೆ. ಕಾಲಾನುಸಾರ ತಕ್ಕಂತೆ ಮಳೆ ಬಾರದ ಹಿನ್ನೆಲೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮಸ್ಥರೆಲ್ಲರೂ ಸೇರಿ ಕತ್ತೆಗಳನ್ನು ಮದುವೆ ಮಾಡಿ ಅದ್ಧೂರಿ ಮೆರವಣಿಗೆ ಕೈಗೊಳ್ಳುವುದರೊಂದಿಗೆ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಗ್ರಾಮದ ಎಲ್ಲ ಧರ್ಮಿಯರು ಸೇರಿಕೊಂಡು ಸಂಪ್ರದಾಯದಂತೆ ಕತ್ತೆಗಳ ಮದುವೆಯನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಗ್ರಾಮದ ಹಿರಿಯರೆಲ್ಲರು ಒಗ್ಗೂಡಿ ಸಕಾಲಕ್ಕೆ ವರ್ಷಧಾರೆ ಬರಲಿ ಎಂದು ನೂತನ ವಧು-ವರ ಕತ್ತೆಗಳ ಜೋಡಿಗಳೊಂದಿಗೆ ಗ್ರಾಮದೇವರಲ್ಲಿ ಹಾಗೂ ವರುಣ ದೇವರಲ್ಲಿ ಮೊರೆಯಿಟ್ಟಿದ್ದಾರೆ.
ದೈವಸ್ಥರು ಗ್ರಾಮದ ಗಂಡು ಮತ್ತು ಹೆಣ್ಣು ಕತ್ತೆಯನ್ನು ಹುಡುಕಿ ತಂದು, ಗಂಡು ಕತ್ತೆಗೆ ಹೊಸ ಪಂಚೆ, ಟವಲು ತೊಡಿಸಿದರೆ ಹೆಣ್ಣು ಕತ್ತೆಗೆ ಸೀರೆ, ಖಣ ತೊಡಿಸಿದರು. ಅರಿಷಿಣ, ಸುರಗಿ ಶಾಸ್ತ್ರವನ್ನು ಮಹಿಳೆಯರು ನೆರವೇರಿಸಿದರು. ಗಂಡು ಮತ್ತು ಹೆಣ್ಣು ಕತ್ತೆಗೆ ಬಾಸಿಂಗ್ ಕಟ್ಟಿ, ಕೊರಳಿಗೆ ಹೂಮಾಲೆ ಹಾಕಿ ಮದುಮಕ್ಕಳಂತೆ ಸಿಂಗರಿಸಿದ್ದರು. ಶಾಸ್ತ್ರೋಕ್ತವಾಗಿ ಮಂತ್ರಾಕ್ಷತೆಗಳೊಂದಿಗೆ, ಕತ್ತೆಗೆ ತಾಳಿ ಕಟ್ಟುವ ಶಾಸ್ತ್ರವೂ ಜರುಗಿತು.
ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ ಎಂದು, ಪುರೋಹಿತರೋರ್ವರು ಮದುವೆ ಮಂತ್ರ ಹೇಳಿದರು. ನೆರೆದವರೆಲ್ಲರು ನೂತನ ವಧು ವರ ಕತ್ತೆಗಳಿಗೆ ಅಕ್ಷತೆ ಹಾಕಿದರು. ನೂತನ ಜೋಡಿಗಳು ಮುತ್ತೈದೆಯರು ಸೋಬಾನೆ ಹಾಡು ಹೇಳಿ ಆರತಿ ಬೆಳಗಿ ಶುಭಹಾರೈಸಿದರು. ಭಾಜಾ ಭಜಂತ್ರಿ, ಹಲಗೆ ವಾದ್ಯಗಳೊಂದಿಗೆ ಮೆರವಣಿಗೆ, ಡಿಜೆ ಸೌಂಡಿನೊಂದಿಗಿನ ಹಾಡುಗಳ ಅಬ್ಬರ ಇತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜೋಡಿ ಕತ್ತೆಗಳ ಮೆರವಣಿಗೆ ಅದ್ಧೂರಿಯಾಗಿ ಸಮಾಪ್ತಿಗೊಂಡಿತು.
ಇದನ್ನೂಓದಿ:ಹಾಡು ಹಾಡುತ್ತ ಟಿಕೆಟ್ ನೀಡುವ ರಾಯಚೂರಿನ ಕಂಡಕ್ಟರ್.. ಮಹಿಳೆಯರು ಕಿಲ ಕಿಲ - ವಿಡಿಯೋ