ಹಳಿ ಮೇಲೆ ಸಿಲುಕಿದ ಹಸು: ತುರ್ತು ಬ್ರೇಕ್ ಹಾಕಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಿದ ಚಾಲಕ - ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ
🎬 Watch Now: Feature Video
ಪಾಟ್ನಾ: ಪಾಟ್ನಾದಿಂದ ರಾಂಚಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತೆರಳುತ್ತಿದ್ದ ವೇಳೆ ಹಳಿ ಮೇಲೆ ಹಸು ಕಂಡು ಬಂದಿದ್ದು, ಚಾಲಕ ರೈಲನ್ನು ನಿಲ್ಲಿಸಿರುವ ಘಟನೆ ನಡೆದಿದೆ. ಪ್ರಾಯೋಗಿಕ ಹಂತದ ಸಂಚಾರ ನಡೆಸಿದ್ದ ರೈಲು, ಇಲ್ಲಿಯ ಬರ್ಕಾಕ್ನಾ ರೈಲು ನಿಲ್ದಾಣದಿಂದ ನಿರ್ಗಮಿಸಿದ ನಂತರ ಸ್ವಲ್ಪ ದೂರದಲ್ಲಿ ಹಳಿಯ ಮೇಲೆ ಹಸುವೊಂದು ನಿಂತಿರುವುದು ಕಂಡು ಬಂದಿದೆ.
ತಿರುವಿನಲ್ಲಿದ್ದ ಕಾರಣ ರೈಲು ನಿಧಾನವಾಗಿ ಚಲಿಸುತಿತ್ತು. ಹಸುವನ್ನು ಕಂಡ ಚಾಲಕ ತಕ್ಷಣ ತುರ್ತು ಬ್ರೇಕ್ ಹಾಕುವ ಮೂಲಕ ರೈಲನ್ನು ನಿಲ್ಲಿಸಿದ್ದಾರೆ. ಒಂದು ವೇಳೆ ರೈಲು ವೇಗದಲ್ಲಿದ್ದರೆ ಹಸುವಿಗೆ ಡಿಕ್ಕಿ ಹೊಡೆದು ಕಾರ್ಯಾರಂಭಿಸುವ ಮೊದಲೇ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಮುಂಭಾಗವು ಹಾನಿಗೊಳಗುವ ಸಾಧ್ಯತೆ ಇತ್ತು.
ಕೂಡಲೇ ರೈಲನ್ನು ನಿಲ್ಲಿಸಿದ ಬಳಿಕ 4 ಜನ ಸಿಬ್ಬಂದಿ ಸಾಕಷ್ಟು ಪ್ರಯತ್ನದ ಬಳಿಕ ಹಸುವನ್ನು ಹಿಡಿದು ರೈಲು ಹಳಿಯ ಬದಿಗೊಯ್ದು ರೈಲು ಮುಂದೆ ಸಾಗಲು ಅನುವು ಮಾಡಿಕೊಟ್ಟರು. ಎರಡೂ ಬದಿ ಬೆಟ್ಟ ಇದ್ದು ನಡುವೆ ರೈಲು ಹಳಿ ಇರುವುದರಿಂದ ಹಸು ಎಲ್ಲಿಗೂ ಹೋಗಲಾಗದೇ ಮಧ್ಯದಲ್ಲಿ ಸಿಲುಕಿಕೊಂಡು ಪರದಾಡಿದೆ.
ಪ್ರಧಾನಿ ಮೋದಿಯಿಂದ ರೈಲಿಗೆ ಚಾಲನೆ: ಪ್ರಧಾನಿ ನರೇಂದ್ರ ಮೋದಿ ಅವರು ಪಾಟ್ನಾ ರಾಂಚಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇಂದು ಚಾಲನೆ ನೀಡಿದರು. ಮೊದಲ ಮೂರು ದಿನಗಳ ರೈಲಿನ ಪ್ರಯೋಗಿಕ ಓಡಾಟ ಯಶಸ್ವಿಯಾಗಿದೆ. ಇಂದು ಈ ರೈಲು ಪತ್ರಕರ್ತರೊಂದಿಗೆ ರಾಂಚಿಗೆ ಹೊರಟಿತ್ತು. ಈ ವೇಳೆ ಹಸು ಹಳಿ ಮೇಲೆ ಪ್ರತ್ಯಕ್ಷವಾಗಿದೆ.