ಯುಎಇಯಲ್ಲಿ ಮೋದಿಗೆ ಆತ್ಮೀಯ ಸ್ವಾಗತ.. ಬುರ್ಜ್ ಖಲೀಫಾದಲ್ಲಿ ಕಂಗೊಳಿಸಿದ ತ್ರಿವರ್ಣ ಧ್ವಜ, ಮೋದಿ ಭಾವಚಿತ್ರ - ಬುರ್ಜ್ ಖಲೀಫಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ
🎬 Watch Now: Feature Video
ದುಬೈ, ಯುಎಇ: ಭಾರತದ ತ್ರಿವರ್ಣ ಧ್ವಜವು ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕಂಗೊಳಿಸುತ್ತಿತ್ತು. ಅಲ್ಲಿನ ಅಧಿಕಾರಿಗಳು ಶುಕ್ರವಾರ ಬುರ್ಜ್ ಖಲೀಫಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರದೊಂದಿಗೆ ರಾಷ್ಟ್ರಧ್ವಜ ಪ್ರದರ್ಶಿಸಿ ಪ್ರಧಾನಿಯನ್ನು ಆಹ್ವಾನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಭೇಟಿಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ - ಯುಎಇಗೆ ಶನಿವಾರ ತಲುಪಿದರು. ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಆತ್ಮೀಯ ಸ್ವಾಗತ ದೊರೆಯಿತು. ಯುಎಇ ರಾಜಕುಮಾರ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಬಿನ್ ಜಾಯೆದ್ ಅವರು ಮೋದಿ ಅವರನ್ನು ಸ್ವಾಗತಿಸಿದರು.
ಇನ್ನು ಈ ಭೇಟಿಯ ವೇಳೆ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ತಮ್ಮ ಸ್ನೇಹಿತ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ ಎಂದು ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡುವ ಮುನ್ನ ಟ್ವೀಟ್ ಮಾಡಿದ್ದರು.
ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಫಿನ್‌ಟೆಕ್, ರಕ್ಷಣೆ ಮತ್ತು ಭದ್ರತೆ ಕ್ಷೇತ್ರಗಳಲ್ಲಿ ಭಾರತ ಮತ್ತು ಯುಎಇ ನಡುವಿನ ಸಂಬಂಧಗಳು ಮುಂದುವರಿದಿವೆ ಎಂದು ಅವರು ಹೇಳಿದರು. ಈ ಭೇಟಿಯ ವೇಳೆ ಇಂಧನ, ಆಹಾರ ಭದ್ರತೆ ಮತ್ತು ರಕ್ಷಣಾ ಕ್ಷೇತ್ರಗಳ ಮೇಲೆ ಪ್ರಮುಖವಾಗಿ ಗಮನ ಹರಿಸುವ ಸಾಧ್ಯತೆ ಇದೆಯಂತೆ. ಯುಎಇ ಅಧ್ಯಕ್ಷರೊಂದಿಗೆ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿನ ಪ್ರಗತಿಯನ್ನು ಪ್ರಧಾನಿ ಮೋದಿ ಪರಿಶೀಲಿಸಲಿದ್ದಾರೆ.