ವಿದ್ಯುತ್ ದರ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ನೇಕಾರರ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ - ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ
🎬 Watch Now: Feature Video
ಬೆಳಗಾವಿ: ಎಪ್ರಿಲ್ನಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್ಗೆ ಹೆಚ್ಚಿಸಿರುವ ವಿದ್ಯುತ್ ದರ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಏರಿಕೆ ಬಿಸಿ ಎಲ್ಲ ವರ್ಗದ ಜನರಿಗೂ ತಟ್ಟಿದ್ದು, ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ನಿನ್ನೆ ಉದ್ಯಮಿಗಳ ಮೌನ ಮೆರವಣಿಗೆ ಬಳಿಕ ಇಂದು ನಗರದಲ್ಲಿ ನೇಕಾರರು ಕೂಡ ವಿದ್ಯುತ್ ದರ ಇಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಉತ್ತರಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾವಿರಾರು ನೇಕಾರರು ನಗರದ ಖಾಸಬಾಗ ಬಸವೇಶ್ವರ ವೃತ್ತದಿಂದ ಬೈಕ್ ಮೆರವಣಿಗೆ ಆರಂಭಿಸಿದರು. ನಾಥಪೈ ವೃತ್ತ, ಗೋವಾವೇಸ್, ರೈಲ್ವೆ ಮೇಲ್ಸೇತುವೆ, ಸಂಭಾಜಿ ವೃತ್, ಲಿಂಗರಾಜ ಕಾಲೇಜು ರಸ್ತೆ, ಚೆನ್ಮಮ್ಮ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದ ನೇಕಾರರು, ನೇಕಾರಿಕೆ ಉದ್ಯೋಗಕ್ಕಾಗಿ ಸರ್ಕಾರವೇ ರೂಪಿಸಿದ 1:25 ದರದ ಸಬ್ಸಿಡಿ ಯೋಜನೆಯಡಿ ವಿದ್ಯುತ್ ಬಿಲ್ ಆಕರಣೆ ಮಾಡುವುದು, ನೇಕಾರಿಕೆ ಉದ್ಯೋಗಕ್ಕೆ ಮಿನಿಮಮ್ ಚಾರ್ಜ್ ಹಾಗೂ ಎಫ್ಎಸಿ ಶುಲ್ಕ ರದ್ದುಗೊಳಿಸುವುದು. ಗೃಹಬಳಕೆ ವಿದ್ಯುತ್ ದರ ಏರಿಕೆ ಕಡಿಮೆ ಮಾಡಬೇಕು. ನಮ್ಮ ಬೇಡಿಕೆ ಈಡೇರಿಸುವವರೆಗೂ, ನಾವು ಯಾರೂ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮುಖಂಡರಾದ ಗಜಾನನ ಗುಂಜೇರಿ, ನಾಗರಾಜ ಹೂಗಾರ, ಆನಂದ ಉಪರಿ, ಲೋಹಿತ್ ಮೊರಕರ್, ವೆಂಕಟೇಶ್ ಸೊಂಟಕ್ಕಿ, ಪಾಂಡುರಂಗ ಕಾಮಕರ್, ನಾರಾಯಣ ಕುಲಗೋಡ ಸೇರಿ ಮತ್ತಿತರರು ಹಾಜರಿದ್ದರು.
ಇದನ್ನೂಓದಿ:DK Shivakumar: ಪಾವಗಡ ಸೋಲಾರ್ ಪಾರ್ಕ್ಗೆ ಭೇಟಿ, ರೈತರೊಂದಿಗೆ ಸಂವಾದ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್