ಅಲೋಪತಿಯಿಂದ ಅನಾರೋಗ್ಯ, ನಿರಂತರ ಔಷಧಿ ಸೇವನೆಯಿಂದ ಹಲವರಿಗೆ ಕಿಡ್ನಿ ಸಮಸ್ಯೆ: ಬಾಬಾ ರಾಮದೇವ್ - ಬಾಬಾ ರಾಮದೇವ್
🎬 Watch Now: Feature Video
ಹರಿದ್ವಾರ(ಉತ್ತರಾಖಂಡ): ಅಲೋಪತಿಗೆ ಸಂಬಂಧಿಸಿದಂತೆ ಆಗಾಗ ವಿವಾದಾತ್ಮಕ ಹೇಳಿಕೆಗಳ ಮೂಲಕ ಚರ್ಚೆಗೆ ಗ್ರಾಸವಾಗಿರುವ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ಮತ್ತೆ ಅಲೋಪತಿಯನ್ನು ಅನಾರೋಗ್ಯಕರ ಚಿಕಿತ್ಸಾ ವಿಧಾನ, ಅದರಿಂದ ಕಿಡ್ನಿ ಹಾಳಾಗುತ್ತದೆ ಎಂದು ಹೇಳುವ ಮೂಲಕ ಮತ್ತೆ ಸಂಚಲನ ಉಂಟು ಮಾಡಿದ್ದಾರೆ.
ಹರಿದ್ವಾರದ ಋಷಿಕುಲ್ ಆಯುರ್ವೇದ ಕಾಲೇಜಿನಲ್ಲಿ ನಡೆದ ಆಯುರ್ವೇದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಅಲೋಪತಿ ಚಿಕಿತ್ಸಾ ವಿಧಾನ ಕಾಯಿಲೆಯನ್ನು ಗುಣಪಡಿಸುವ ಬದಲು ಜನರನ್ನು ರೋಗಿಗಳನ್ನಾಗಿ ಮಾಡುತ್ತಿದೆ. ಈಗಾಗಲೇ ಬಹುರಾಷ್ಟ್ರೀಯ ಕಂಪನಿಗಳು ಆಯುರ್ವೇದದಲ್ಲಿ ತೊಡಗಿಸಿಕೊಳ್ಳಲು ಪೈಪೋಟಿ ನೀಡುತ್ತಿದ್ದು, ಅಲೋಪತಿಯ ಕಾಲ ಮುಗಿಯುತ್ತಿದೆ ಎಂದು ಯೋಗ ಗುರು ರಾಮದೇವ್ ಹೇಳಿದ್ದಾರೆ.
ಬಹುರಾಷ್ಟ್ರೀಯ ಕಂಪನಿಗಳೇ ಜನರಿಗೆ ಯೋಗ ಮಾಡುವಂತೆ ಸಲಹೆ ನೀಡುತ್ತಿವೆ. ಅಲೋಪತಿಯು ನಾಶವಾಗುತ್ತಿದೆ. ಅದು ರೋಗಗಳ ಮೇಲೆ ಪರಿಣಾಮ ಬೀರದೇ ಜನರ ಮೇಲೆಯೇ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ದೀರ್ಘಕಾಲದವರೆಗೆ ಔಷಧಿಗಳನ್ನು ಸೇವಿಸಿದ ನಂತರವೂ ರೋಗವು ದೇಹದಲ್ಲಿ ಉಳಿಯುತ್ತದೆ. ಇದರ ಸೇವನೆಯಿಂದ ಜಗತ್ತಿನಲ್ಲಿ ಶೇ.25 ರಷ್ಟು ಜನರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜನರ ಮೂತ್ರಪಿಂಡಗಳು ಹಾಳಾಗಿವೆ ಎಂದು ಆರೋಪಿಸಿದರು.
ಮಾರಕವಾಗಿ ಪರಿಣಮಿಸಿದ್ದ ಕೊರೊನಾ ವೈರಸ್ಗೆ ಅಲೋಪತಿ ಚಿಕಿತ್ಸೆ ಯಶಸ್ವಿಯಾಗಿಲ್ಲ. ಕೋವಿಡ್ ಲಸಿಕೆಗಳು ರೋಗ ನಿರೋಧಕತೆಯನ್ನು ಹೆಚ್ಚಿಸುವಲ್ಲಿ ವಿಫಲವಾಗಿವೆ. ಆಯುರ್ವೇದದ ಮೂಲಕ ತಯಾರಿಸಲಾದ ಮಾತ್ರೆಗಳು ಸೋಂಕಿಗೆ ಪರಿಣಾಮಕಾರಿಯಾಗಿವೆ ಎಂದು ಬಾಬಾ ಹೇಳಿದ್ದಾರೆ.
ಭಾನುವಾರ ಋಷಿಕುಲ್ ಆಯುರ್ವೇದಿಕ್ ಕಾಲೇಜಿನಲ್ಲಿ ನಡೆದ ಆಯುರ್ವೇದ, ಪಶು ವೈದ್ಯಕೀಯ ವಿಚಾರ ಸಂಕಿರಣದಲ್ಲಿ ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭಾಗವಹಿಸಿದ್ದರು. ಈ ವೇಳೆ ಯೋಗ ಗುರು ರಾಮದೇವ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿ ಅಲೋಪತಿಗೆ ಸಂಬಂಧಿಸಿದಂತೆ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: 1000 ಅಲೋಪತಿ ಡಾಕ್ಟರ್ಗಳನ್ನ ಆಯುರ್ವೇದ ವೈದ್ಯರನ್ನಾಗಿ ಮಾಡುತ್ತೇವೆ: ಬಾಬಾ ರಾಮದೇವ್