ಪಕ್ಷ ವಿರೋಧಿ ಚಟುವಟಿಕೆ ಆರೋಪ: ದೈವಗಳ ಮೊರೆ ಹೋದ ಕಾಂಗ್ರೆಸ್ ಮುಖಂಡರು
🎬 Watch Now: Feature Video
ಕಡಬ (ದಕ್ಷಿಣ ಕನ್ನಡ): ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪ. ಜಿ ಅವರ ವಿರುದ್ದ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಹೊತ್ತಿರುವ ಕಾಂಗ್ರೆಸ್ ಮುಖಂಡರು ಕೊನೆಗೆ ಪ್ರಸಿದ್ಧ ಮಜ್ಜಾರು ಕಾರ್ಣಿಕ ಕ್ಷೇತ್ರದಲ್ಲಿ ರಾಜನ್ ದೈವದ ಮೊರೆ ಹೋಗಿದ್ದಾರೆ.
ಮಂಗಳವಾರ ಕೋಡಿಂಬಾಳ ಗ್ರಾಮದ ಮಜ್ಜಾರು ರಾಜನ್ ದೈವದ ಸಾನಿಧ್ಯಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರಾದ ಬಾಲಕೃಷ್ಣ ಬಳ್ಳೇರಿ, ಸುಧೀರ್ ದೇವಾಡಿಗ, ಉಷಾ ಆಂಚನ್ ನೆಲ್ಯಾಡಿ, ಆಶಾ ಲಕ್ಷ್ಮಣ್ ಗುಂಡ್ಯ ಅವರು ದೈವಗಳ ಎದುರು ಪ್ರಾರ್ಥಿಸಿಕೊಂಡರು. "ಕೃಷ್ಣಪ್ಪ.ಜಿ ಅವರ ಕುಮ್ಮಕ್ಕಿನಿಂದಲೇ ಸಕ್ರಿಯ ಕಾರ್ಯಕರ್ತರಾದ ನಮ್ಮನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮುಂದೆಯೂ ಮಾಡಲ್ಲ. ಚುನಾವಣೆಯಲ್ಲಿ ನಾವು ಬೇರೆ ಪಕ್ಷ ಮತ್ತು ಬೇರೆ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ನಂದಕುಮಾರ್ ಅವರಿಗೆ ಸುಳ್ಯ ಕ್ಷೇತ್ರದ ವ್ಯಾಪ್ತಿಯಲ್ಲಿ ಅಪಾರ ಅಭಿಮಾನಿಗಳ ಬಣ ಇತ್ತು. ಇದನ್ನು ಗಮನಿಸದ ಜಿಲ್ಲೆಯ ಮತ್ತು ರಾಜ್ಯದ ವರಿಷ್ಠರು ಕಟ್ಟುಪಾಡಿಗೆ ಬಿದ್ದಂತೆ ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದರು. ನಂದಕುಮಾರ್ ಅವರಿಗಿದ್ದ ಜನರ ಬೆಂಬಲ ಕೃಷ್ಣಪ್ಪ ಅವರಿಗಿಲ್ಲದ ಕಾರಣ ಅವರು ಚುನಾವಣೆಯಲ್ಲಿ ಸೋತರು. ನಂದಕುಮಾರ್ ಅವರನ್ನು ನಾವು ಬೆಂಬಲಿಸಿದ್ದೇವೆ, ಅವರೇನು ಬೇರೆ ಪಕ್ಷದವರಾ?, ಕಾಂಗ್ರೆಸ್ ಪಕ್ಷದವರಲ್ಲವೇ?, ಅವರನ್ನು ಬೆಂಬಲಿಸಿದ ಕಾರಣ ಇದೀಗ ನಾವು ಪಕ್ಷ ವಿರೋಧಿಗಳಾಗಿದ್ದೇವೆ" ಎಂದು ಬೇಸರ ತೋಡಿಕೊಂಡರು.
"ನಮಗೆ ಯಾವುದೇ ಜವಾಬ್ದಾರಿಯನ್ನು ನೀಡದೇ ಇದ್ದರೂ ಚುನಾವಣಾ ಸಮಯದಲ್ಲಿ ಕಡಬ ಬ್ಲಾಕ್‌ನಲ್ಲಿ ಕಾಂಗ್ರೆಸ್ ಬಲಪಡಿಸಲು ನಾವು ಸತತವಾಗಿ ದುಡಿದಿದ್ದೇವೆ. ಆದರೂ ನಮಗೆ ಅನ್ಯಾಯ ಮಾಡಲಾಗಿದೆ. 17 ಮಂದಿಯನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಅನ್ಯಾಯ ಮಾಡಿದವರಿಗೆ ಸರಿಯಾದ ಬುದ್ದಿ ದೈವವೇ ಕರುಣಿಸಲಿ" ಎಂದು ಕಾಂಗ್ರೆಸ್ ಮುಖಂಡರು ಕಣ್ಣೀರಿಟ್ಟರು.
ಇದನ್ನೂ ಓದಿ: ಪ್ರತಿಪಕ್ಷ ನಾಯಕನ ಆಯ್ಕೆ ಕಗ್ಗಂಟು.. ವೀಕ್ಷಕರಿಂದ ಅಭಿಪ್ರಾಯ ಸಂಗ್ರಹ ಮುಕ್ತಾಯ: ಹೆಸರು ಪ್ರಕಟಣೆಗೆ ಕೌಂಟ್ಡೌನ್ ಶುರು..!