ರಾಯಚೂರು ಕಸದ ಬುಟ್ಟಿ ಅಲ್ಲ.. ಅಜಿತ್ ರೈ ಸಿರವಾರ ವರ್ಗಾವಣೆಗೆ ಪ್ರಗತಿಪರ ಸಂಘಟನೆ ವಿರೋಧ
🎬 Watch Now: Feature Video
ರಾಯಚೂರು : ಲೋಕಾಯುಕ್ತ ಬಲೆಗೆ ಬಿದ್ದಿರುವ ತಹಶೀಲ್ದಾರ್ ಅಜಿತ್ ರೈ ಅವರನ್ನು ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ 2ನೇ ಗ್ರೇಡ್ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಿರುವುದಕ್ಕೆ ಪ್ರಗತಿಪರ ಸಂಘಟನೆಯಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಆದಾಯ ಮೀರಿ ಅಕ್ರಮ ಆಸ್ತಿ ಸಂದಾಪನೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಜಿತ್ ರೈ ಮನೆಯ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂಪಾಯಿ ನಗದು ಹಣ, ಬೇನಾಮಿ ಆಸ್ತಿ ಇರುವುದು ಪತ್ತೆಯಾಗಿತ್ತು.
ಇದೀಗ ಪ್ರಗತಿಪರ ಸಂಘಟನೆ ಮುಖಂಡರು ಸರ್ಕಾರದ ಆದೇಶದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಗತಿಪರ ಸಂಘಟನೆಯ ಮುಂಖಡರಾದ ಚಾಮರಸ ಮಾಲೀಪಾಟೀಲ್ ಅವರು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಜಿತ್ ರೈ ಅವರನ್ನು ಸಿರವಾರ ತಾಲೂಕಿಗೆ 2ನೇ ದರ್ಜೆಯ ತಹಶೀಲ್ದಾರ್ ಆಗಿ ಸರ್ಕಾರ ಆದೇಶ ಮಾಡಿದ್ದು, ರಾಯಚೂರನ್ನು ಕಸದಬುಟ್ಟಿ ಎಂದು ತಿಳಿದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಇಂತಹ ಅಧಿಕಾರಿಗಳನ್ನು ನಾನ್ ಎಕ್ಸಿಕ್ಯೂಟಿವ್ ಪೋಸ್ಟ್ ಕೊಟ್ಟು ವಿಧಾನಸೌಧದಲ್ಲೇ ಕುರ್ಚಿ ಹಾಕಿ ಸರ್ಕಾರ ಕೂರಿಸಬೇಕಾಗಿತ್ತು. ಇಲ್ಲಿಗೆ ಆ ಅಧಿಕಾರಿಯನ್ನು ಕಳಿಸಿದ್ದು, ಹೊಸದಾಗಿ ಆಗಿರುವ ಸಿರವಾರ ತಾಲೂಕಿನ ಅಭಿವೃದ್ಧಿಯನ್ನು ನಿರೀಕ್ಷೆ ಮಾಡವುದಾರು ಹೇಗೆ? ಎಂದು ಪ್ರಶ್ನಿಸಿದರು. ಅಲ್ಲದೆ, ಕೂಡಲೇ ಸರ್ಕಾರ ಹಾಗು ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇವರನ್ನು ಜಿಲ್ಲೆಯ ಯಾವುದೇ ತಾಲೂಕಿಗೆ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು.