ಚಿಕ್ಕೋಡಿ: ಖತರ್ನಾಕ್ ಅಪಹರಣಕಾರರ ತಂಡ ಬಂಧಿಸಿದ ಹಾರೂಗೇರಿ ಪೊಲೀಸರು.. - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಚಿಕ್ಕೋಡಿ: ಅಪಹರಣದ ನಂತರ ವ್ಯಕ್ತಿಗೆ ಸ್ಥಳದ ಗುರುತು ಸಿಗಬಾರದು ಎಂದು ಮುಖಕ್ಕೆ ಬಟ್ಟೆ ಹಾಗೂ ಪ್ರಜ್ಞಾಹೀನ ಔಷಧ ಬಳಸಿ ಅಪಹರಣ ಮಾಡಿಕೊಂಡು ಹೋಗುವುದು ಸಾಮಾನ್ಯ. ಆದರೆ ಇಲ್ಲೊಂದು ಅಪಹರಣಕಾರರ ತಂಡ ಮುಖಕ್ಕೆ ಕನ್ನಡಕ ಹಾಕಿ ಅಪಹರಣ ಮಾಡಿದ್ದ ಖತರ್ನಾಕ್ ಗ್ಯಾಂಗ್ವೊಂದನ್ನು ಹಾರೂಗೇರಿ ಪೊಲೀಸರು ಖೆಡ್ಡಾಕ್ಕೆ ಕೆಡವಲು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಖಣದಾಳ ಗ್ರಾಮದ ಶಾಂತವ್ವ ಭೂಪಾಲ್ ಆಜೂರೆ ಎನ್ನುವರು ಕಳೆದ ದಿನಾಂಕ 11 ರಂದು ನನ್ನ ಗಂಡನನ್ನು ಅಡ್ಡಗಟ್ಟಿ ಯಾರೋ ದುಷ್ಕರ್ಮಿಗಳು ಬೆದರಿಸಿ ಮಾರಕಾಸ್ತ್ರ ತೋರಿಸಿ ಕಾರಿನಲ್ಲಿ ಬಂದು ಅಪಹರಣ ಮಾಡಿದ್ದಾರೆ. ಹಾಗೂ ಹದಿನೈದು ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಎಂದು ರಾಯಭಾಗ ತಾಲೂಕಿನ ಹಾರುಗೇರಿ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ಜಾಡು ಹಿಡಿದು ಹೊರಟ ಹಾರುಗೇರಿ ಪೊಲೀಸರಿಗೆ ನಾಲ್ಕು ಜನರ ಖತರ್ನಾಕ್ ತಂಡ ಬಲೆಗೆ ಬಿದ್ದಿದೆ.
ರಾಯಭಾಗ ತಾಲೂಕಿನ ಖಣದಾಳ ಗ್ರಾಮದ ವಾಸುದೇವ, ಸಹದೇವ ನಾಯಕ ಹಾಗೂ ಭುಜಂಗ ತುಕಾರಾಮ ಜಾಧವ್ ಮತ್ತು ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಈರಣ್ಣ ಸತ್ಯಯ್ಯ ಹಿರೇಮಠ್ ಹಾಗೂ ಅಥಣಿ ತಾಲೂಕಿನ ನಂದಗಾಂವ್ ಗ್ರಾಮದ ಶಿವಾನಂದ ನಾನಪ್ಪ ಸಲಖಾನ್ ಎಂಬ ಆರೋಪಿಗಳನ್ನು ಹಾರೂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಆರೋಪಿಗಳ ತಂಡದ ಮೇಲೆ ಹಿಂದೆ ಬಾಗಲಕೋಟೆ, ಬೆಳಗಾವಿ, ರಾಯಭಾಗ, ಅಥಣಿ, ಚಿಕ್ಕೋಡಿ, ಆಲಮೇಲಾ, ಗೋಕಾಕ್, ಜಮಖಂಡಿ ಹಲವು ಪೊಲೀಸ್ ಠಾಣೆಯಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳಿಂದ ಎರಡು ಕಾರು, ಎರಡು ಮಾರಕಾಸ್ತ್ರ, 4.10 ಲಕ್ಷ ರೂಪಾಯಿ. ಕರಿ ಬಣ್ಣದ ಕನ್ನಡಕ. ಒಟ್ಟು ಏಳು ಮೊಬೈಲ್ ವಶಕ್ಕೆ ತೆಗೆದುಕೊಂಡು ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಮಾಧ್ಯಮಗಳಿಗೆ ಹೇಳಿದರು.