ಆರ್ಡರ್ ಸಪ್ಲೈ ತಡವಾಗಿದ್ದಕ್ಕೆ ಬಾರ್ ಸಿಬ್ಬಂದಿಯ ಹತ್ಯೆ: ಇಬ್ಬರು ಸೆರೆ - ದಕ್ಷಿಣ ವಿಭಾಗದ ಡಿಸಿಪಿ ಪಿ ಕೃಷ್ಣಕಾಂತ್
🎬 Watch Now: Feature Video
ಬೆಂಗಳೂರು : ಬಾರ್‌ನಲ್ಲಿ ಆರ್ಡರ್ ಸಪ್ಲೈ ಮಾಡುವುದು ತಡವಾಗಿದ್ದಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಆತನ ಸಾವಿಗೆ ಕಾರಣವಾಗಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಸುರೇಶ್ (29) ಮತ್ತು ವಿನೋದ್ ಕುಮಾರ್ (28) ಬಂಧಿತರು. ಮಂಡ್ಯ ಮೂಲದ ಬಸವರಾಜು (39) ಮೃತ ದುರ್ದೈವಿ.
ವಾಟರ್ ಫಿಲ್ಟರ್, ವಾಷಿಂಗ್ ಮಷಿನ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಜನವರಿ 23ರ ಸಂಜೆ ಕುಮಾರಸ್ವಾಮಿ ಲೇಔಟಿನ ಎಸ್.ಆರ್.ಆರ್ ಬಾರ್‌ಗೆ ತೆರಳಿದ್ದರು. ಈ ವೇಳೆ ಆರೋಪಿಗಳ ಆರ್ಡರ್ ಸರಬರಾಜು ಮಾಡುವುದು ವಿಳಂಬವಾಗಿತ್ತು. ಇದಕ್ಕೆ ಗಲಾಟೆ ಮಾಡಿದ್ದ ಆರೋಪಿಗಳು ಬಾರ್ನಿಂದ ಎದ್ದು ಹೋಗಿದ್ದರು. ನಂತರ ಬೇರೆ ಬಾರ್‌ನಲ್ಲಿ ಮದ್ಯಪಾನ ಮಾಡಿ ರಾತ್ರಿ 10.30ರ ಸುಮಾರಿಗೆ
ಎಸ್.ಆರ್.ಆರ್ ಬಾರ್ ಬಳಿ ಬಂದು ಗಲಾಟೆ ಆರಂಭಿಸಿ ಬಸವರಾಜು ಅವರ ತಲೆ ಹಿಡಿದು ಗೋಡೆಗೆ ಗುದ್ದಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಬಸವರಾಜು, ತನಗೆ ಹೆಚ್ಚೇನೂ ಗಾಯವಾಗಿಲ್ಲ ಎಂದು ನಿರ್ಲಕ್ಷ್ಯ ವಹಿಸಿದ್ದಾರೆ. ಮಾರನೇ ದಿನ ತಲೆ ಸುತ್ತುವ ಅನುಭವವಾದಾಗ ಆಸ್ಪತ್ರೆಗೆ ತೆರಳಿ ಸ್ಕ್ಯಾನ್ ಮಾಡಿ ನೋಡಿದಾಗ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗೊತ್ತಾಗಿತ್ತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಸವರಾಜು ಜನವರಿ 25ರಂದು ಕೋಮಾ ಸ್ಥಿತಿಗೆ ಜಾರಿದ್ದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 15ರಂದು ಸಾವನ್ನಪ್ಪಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಪಿಯಲ್ಲಿ ಅಮಾನವೀಯ ಘಟನೆ: ರಸ್ತೆಯಲ್ಲಿ ಮೃತದೇಹ ಎಸೆದು ಹೋದ ಹಣ್ಣಿನ ವ್ಯಾಪಾರಿಗಳ ವಿಡಿಯೋ ವೈರಲ್