ಅಗ್ನಿ ಆಕಸ್ಮಿಕ: ಹೊತ್ತಿ ಉರಿದ ಸರ್ಕಾರಿ ಶಾಲೆ, ಪೀಠೋಪಕರಣ ಭಸ್ಮ
🎬 Watch Now: Feature Video
ಚಾಮರಾಜನಗರ : ಸರ್ಕಾರಿ ಶಾಲೆಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಶಾಲೆಯ ಕೊಠಡಿಯಲ್ಲಿದ್ದ ಪುಸ್ತಕ, ಬೆಂಚ್‍ಗಳು ಸುಟ್ಟು ಕರಕಲಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಡೆದಿದೆ. ಭಾನುವಾರ ಸಂಜೆ ವೇಳೆ ಹಂಗಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಶೇಖರಿಸಿಟ್ಟಿದ್ದ 50ಕ್ಕೂ ಅಧಿಕ ಹಳೇ ಬೆಂಚ್, ಟೇಬಲ್, ಚೇರ್, ಪುಸ್ತಕ ಸೇರಿದಂತೆ ಮಕ್ಕಳ ಕಲಿಕಾ ಸಂಬಂಧಿತ ಸಾಮಗ್ರಿಗಳು ಸುಟ್ಟು ಕರಕಲಾಗಿವೆ.
ಜೊತೆಗೆ ಶಾಲೆಯಲ್ಲಿ ಅಳವಡಿಕೆ ಮಾಡಿದ್ದ ಶುದ್ಧ ಕುಡಿಯುವ ನೀರಿನ ಘಟಕವು ಕೂಡ ಬೆಂಕಿಗಾಹುತಿಯಾಗಿದೆ. ಇನ್ನು ಈ ವೇಳೆ ಮಾಹಿತಿ ಅರಿತ ಸ್ಥಳೀಯರು ಬಿಂದಿಗೆಯಲ್ಲಿ ನೀರು ಹಾಕಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದ ಇದ್ದರಿಂದ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇದಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದರು. ಘಟನೆಯಿಂದ ಕೊಠಡಿಯ ಕಿಟಕಿ, ಬಾಗಿಲು ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಗಾರೆಯ ಚೆಕ್ಕೆಗಳು ಎಡೆದು ಬೀಳಲಾರಂಭಿಸಿದೆ.
ಕಾರಣ ನಿಗೂಢ : ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆಂದು ಕೆಲವರು ಅನುಮಾನ ವ್ಯಕ್ತಪಡಿಸಿದರೇ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹಲವರು ಶಂಕಿಸಿದ್ದಾರೆ. ಬೆಂಕಿ ಉಂಟಾಗಿದ್ದು ಹೇಗೆ ಎಂಬುದರ ವರದಿ ಕೊಡುವಂತೆ ಗುಂಡ್ಲುಪೇಟೆ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಗೆ ತಿಳಿಸಿದ್ದು, ಈ ಬಗ್ಗೆ ಇನ್ನು ಯಾವುದೇ ದೂರುಗಳು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ.
ಇದನ್ನೂ ಓದಿ : ಚಾಮುಂಡಿ ಬೆಟ್ಟ ತಪ್ಪಲಿನ ಶಾಮಿಯಾನ ಗೋದಾಮಿನಲ್ಲಿ ಬೆಂಕಿ- ವಿಡಿಯೋ