ಬೆಳಗಾವಿ ಅಖಾಡದಲ್ಲಿ 6 ನಾರಿಮಣಿಯರು: ಮತದಾರ ಪ್ರಭುಗಳ ಆಶೀರ್ವಾದ ಯಾರಿಗೆ?

🎬 Watch Now: Feature Video

thumbnail

ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಯಲ್ಲದೇ, ರಾಜಕೀಯದ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಹಲವಾರು ಪುರುಷ ಶಾಸಕರ ಮಧ್ಯೆ ಮಹಿಳಾ ಶಾಸಕಿಯರೂ ತಮ್ಮ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್​ನಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​, ಅಂಜಲಿ ನಿಂಬಾಳ್ಕರ್​, ಪ್ರಭಾವತಿ ಮಸ್ತ್​ ಮರ್ಡಿ, ಬಿಜೆಪಿಯಿಂದ ಶಶಿಕಲಾ ಜೊಲ್ಲೆ, ದಿವಂಗತ ಆನಂದ್​ ಮಾಮನಿ ಅವರ ಪತ್ನಿ ರತ್ನಾ ಮಾಮನಿ, ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಜೆಡಿಎಸ್​ನಿಂದ ಅಶ್ವಿನಿ ಸಿಂಗಯ್ಯ ಪೂಜೆರಾ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಈಗ ಪವರ್ ಫುಲ್ ಲೀಡರ್ ಎನಿಸಿಕೊಂಡಿದ್ದಾರೆ. 2013ರ ವಿಧಾನಸಭೆ ಚುನಾವಣೆಯ ಮೊದಲ ಯತ್ನದಲ್ಲೇ ಸೋಲು ಕಂಡರು. ನಂತರ 2014ರ ಲೋಕಸಭೆ ಚುನಾವಣೆಯೂ ಅವರ ಕೈಹಿಡಿಯಲಿಲ್ಲ. ಪಟ್ಟು ಬಿಡದ ಲಕ್ಷ್ಕೀ ಹೆಬ್ಬಾಳ್ಕರ್, 2018ರ ವಿಧಾನಸಭೆ ಚುನಾವಣೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾದರು. ಈ ಬಾರಿ ಮತ್ತೆ ಕಾಂಗ್ರೆಸ್​ನಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಜಿಲ್ಲೆಯ ಇನ್ನೊಬ್ಬ ಸಚಿವೆ ಶಶಿಕಲಾ ಜೊಲ್ಲೆ ಅವರು ಮೂರನೇ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸುತ್ತಿದ್ದಾರೆ. ಶಶಿಕಲಾ ಜೊಲ್ಲೆ 2013ರಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದರು. 2018 ರ ಚುನಾವಣೆಯಲ್ಲಿ ಗೆದ್ದು ಶಾಸಕಿ‌ಯಾಗುವುದರ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಸರ್ಕಾರ ಮತ್ತು ಬೊಮ್ಮಾಯಿ ಸರ್ಕಾರದಲ್ಲೂ ಸಚಿವೆಯಾದರು. ಜಿಲ್ಲೆಯಲ್ಲಿ ಘಟಾನುಘಟಿ ನಾಯಕರಿದ್ದರೂ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿದ್ದು ಜೊಲ್ಲೆ ಹೆಗ್ಗಳಿಕೆ. ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಾ.ಅಂಜಲಿ ನಿಂಬಾಳ್ಕರ್ ಮೊದಲ ಚುನಾವಣೆಯಲ್ಲೇ ಪರಾಭವಗೊಂಡಿದ್ದರು.‌ ಬಳಿಕ 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರು. ಇದೀಗ ಮತ್ತೆ ಕಾಂಗ್ರೆಸ್​ ಅಭ್ಯರ್ಥಿಯಾಗಿ ಚುನಾವಣಾ ಅಖಾಡಲ್ಲಿದ್ದಾರೆ. ಇದಲ್ಲದೇ, ಪ್ರಭಾವತಿ ಮಸ್ತ್​ ಮರ್ಡಿ ಅವರು ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕರಾಗಿದ್ದ ಆನಂದ ಮಾಮನಿ ಅವರ ಅಕಾಲಿಕ ನಿಧನದಿಂದಾಗಿ ಅವರ ಪತ್ನಿ ರತ್ನಾ ಮಾಮನಿ ಅವರು ಬಿಜೆಪಿಯಿಂದ ಚುನಾವಣಾ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಮೊದಲ ಬಾರಿಗೆ ಅವರು ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷಗಳ ಭರಾಟೆಯ ಜೊತೆಗೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಕೂಡ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಿತ್ತೂರು ಕ್ಷೇತ್ರದಿಂದ ಅಶ್ವಿನಿ ಸಿಂಗಯ್ಯ ಪೂಜೆರಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದೆ.

ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ 6 ಮಂದಿ ಮಹಿಳಾ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕಿಳಿದಿದ್ದು, ಮತದಾರ ಪ್ರಭುಗಳು ಯಾರಿಗೆ ಆಶೀರ್ವಾದ ಮಾಡಲಿದ್ದಾರೆ ಎಂಬುದು ಮೇ 13 ರಂದು ಬಹಿರಂಗವಾಗಲಿದೆ.

ಇದನ್ನೂ ಓದಿ: ಲಿಂಗಾಯತರ ಮತ ಸೆಳೆಯಲು ಬಿಎಸ್​​ವೈ ಪ್ಲಾನ್​​: ವೀರಶೈವ ಸಮಾಜದ ಸ್ನೇಹಮಿಲನ

Last Updated : Apr 25, 2023, 2:16 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.