ಕೊಯಮತ್ತೂರು: ಭಾರೀ ಗಾಳಿಗೆ ಬೃಹತ್ ಬ್ಯಾನರ್ ಕುಸಿದು 3 ಮಂದಿ ಸಾವು - ಅರುಣ್ ಕುಮಾರ್ ಮತ್ತು ಷಣ್ಮುಗ ಸುಂದರಂ
🎬 Watch Now: Feature Video
ಕೊಯಮತ್ತೂರು (ತಮಿಳುನಾಡು): ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸೇಲಂ-ಕೊಚ್ಚಿನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೃಹತ್ ಬ್ಯಾನರ್‌ಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಈ ವೇಳೆ ಜೋರು ಗಾಳಿ ಮಳೆಯಾದ ಪರಿಣಾಮ ಕೆಲಸದಲ್ಲಿ ತೊಡಗಿದ್ದ 3 ಕಾರ್ಮಿಕರ ಮೇಲೆ ಬ್ಯಾನರ್ ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ರಾಮಸ್ವಾಮಿ ಅವರ ಜಾಗದಲ್ಲಿ ಪಳನಿಸ್ವಾಮಿ ಅವರ ಉಸ್ತುವಾರಿಯಲ್ಲಿ ಬೃಹತ್ ಬ್ಯಾನರ್ ಅಳವಡಿಕೆ ಕಾರ್ಯ ನಡೆಯುತ್ತಿತ್ತು. ಮೊದಲಿದ್ದ ಬ್ಯಾನರ್ ತೆಗೆದು ಹೊಸ ಬ್ಯಾನರ್ ಅಳವಡಿಸಲಾಗುತ್ತಿತ್ತು. ಸೇಲಂನ 7 ಕಾರ್ಮಿಕರು ಈ ಕೆಲಸವನ್ನು ನಿರ್ವಹಿಸುತ್ತಿದ್ದರು. ಇಂದು ಸಂಜೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಭಾರೀ ಗಾಳಿ ಸಹಿತ ಮಳೆಯಾಗಿದೆ. ಈ ವೇಳೆ ಏಕಾಏಕಿ ರಭಸವಾಗಿ ಬೀಸಿದ ಗಾಳಿಯಿಂದ ರಾಡ್ ಸಮೇತ ಬ್ಯಾನರ್ ಕೆಳಗೆ ಬಿದ್ದಿದೆ. ಕೆಲಸದಲ್ಲಿ ನಿರತರಾಗಿದ್ದ ಸೇಲಂ ಜಿಲ್ಲೆಯ ಜಲಂದಪುರಂ ಪ್ರದೇಶದ ಕುಮಾರ್, ಗುಣಶೇಖರನ್ ಮತ್ತು ಶೇಖರ್ ಎಂಬ 3 ಕಾರ್ಮಿಕರು ಬ್ಯಾನರ್ ರಾಡ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಕರುಮತ್ತಂಪಟ್ಟಿ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಬ್ಯಾನರ್ ರಾಡ್ ಮೇಲಕ್ಕೆತ್ತಿ ಮೃತ ದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅರುಣ್ ಕುಮಾರ್ ಮತ್ತು ಷಣ್ಮುಗ ಸುಂದರಂ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನುಮತಿ ಪಡೆದಿರುವ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ಬ್ಯಾನರ್ ಹಾಕಿರುವುದು ಮತ್ತು ಸೇಲಂ-ಕೊಚ್ಚಿನ್ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಇಕ್ಕೆಲಗಳಲ್ಲಿ ನೂರಾರು ದೈತ್ಯ ಬ್ಯಾನರ್‌ಗಳನ್ನು ಅನುಮತಿ ಇಲ್ಲದೇ ಹಾಕಿರುವುದು ಅಪಘಾತಕ್ಕೆ ಕಾರಣವಾಗಿದೆ. ಹಲವು ವರ್ಷ ಹಳೆಯದಾಗಿರುವ ಈ ಬ್ಯಾನರ್ಗಳು ಗಾಳಿಯ ರಭಸಕ್ಕೆ ಏಕಾಏಕಿ ಬೀಳುವ ಅಪಾಯವಿದ್ದು, ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದಲ್ಲದೇ ಜಿಲ್ಲೆಯ ಹಲವೆಡೆ ಅನುಮತಿ ಇಲ್ಲದೆ ದೈತ್ಯ ಬ್ಯಾನರ್ ಗಳನ್ನು ಹಾಕಲಾಗಿದ್ದು, ಅವುಗಳನ್ನು ಗುರುತಿಸಿ ತೆಗೆಯಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಸ್ನೇಹ ಬೆಳೆಸಲು ಯುವತಿಯ ಕತ್ತಿನ ಮೇಲೆ ಚಾಕು ಇಟ್ಟು ಬೆದರಿಸಿದ ಯುವಕ: ಬಂಧನ