ಲೀಲಾವತಿ ಬಗ್ಗೆ ಶ್ರೀನಾಥ್, ರಮೇಶ್ ಭಟ್, ರಾಜೇಂದ್ರ ಸಿಂಗ್ ಬಾಬು ಮನದಾಳ - Rajendra Singh Babu
🎬 Watch Now: Feature Video
Published : Dec 9, 2023, 5:15 PM IST
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿರುವ ಕಲಾವಿದರು ಭಾವುಕರಾಗಿದ್ದಾರೆ. ನಟಿ ಬಗ್ಗೆ ಮಾತನಾಡುತ್ತಾ ಹಳೇ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಹಿರಿಯ ಕಲಾವಿದರಾದ ಶ್ರೀನಾಥ್, ರಮೇಶ್ ಭಟ್ ಮತ್ತು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಲೀಲಾವತಿ ಅವರ ಬಗ್ಗೆ ಮಾತನಾಡಿದ್ದಾರೆ.
ನಟ ಶ್ರೀನಾಥ್ ಮಾತನಾಡಿ, ನನಗೆ ಅಮ್ಮನಾಗಿದ್ದವರು ಅವರು. ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ರು. ಲೀಲಮ್ಮ ನನ್ನಮ್ಮ. ಬಹಳ ಶ್ರೇಷ್ಠ ವ್ಯಕ್ತಿತ್ವವುಳ್ಳವರು. ಮತ್ತೊಬ್ಬರ ಹಸಿವನ್ನೂ ನೀಗಿಸಿದವರು. ಬಹಳ ಒಳ್ಳೆ ಮನಸ್ಸಿನ ವ್ಯಕ್ತಿತ್ವ. ಪ್ರತಿಯೊಬ್ಬರ ನೋವಿಗೂ ಸ್ಪಂದಿಸಿದರು. ತಮ್ಮ ನೋವನ್ನು ತಮ್ಮ ಮನಸ್ಸಲ್ಲೇ ಇಟ್ಟುಕೊಂಡರು. ನಿನ್ನೆ ಅವರ ಮನೆಯಲ್ಲಿ ನೋಡಿ ಬಂದೆ. ಆದ್ರಿಂದು ಅವರನ್ನು ಹೀಗೆ ನೋಡುತ್ತೇನೆಂದು ಅಂದುಕೊಂಡಿರಲಿಲ್ಲ ಎಂದು ಭಾವುಕರಾದರು.
ನಟ ರಮೆಶ್ ಭಟ್ ಮಾತನಾಡಿ, ದಶಕಗಳ ಕಾಲ ಅಭಿನಯಿಸಿ, ಕೋಟಿ ಕೋಟಿ ಕನ್ನಡಿಗರ ಮನದಲ್ಲಿ ಸ್ಥಾನ ಗಳಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ. ಈ ತಾಯಿ ಮಗನ ಬಾಂಧವ್ಯ ಬಹಳ ವಿಶೇಷವಾದದ್ದು ಹಾಗೂ ಅಪರೂಪದ್ದು. ಎಂತಹ ಪರಿಸ್ಥಿತಿಯಲ್ಲೂ ಧೃತಿಗೆಡದ, ದಿಟ್ಟ ಮಹಿಳೆ ಲೀಲಕ್ಕ. ಸಾರ್ಥಕ ಬದುಕನ್ನು ಸಾಗಿಸಿದ್ದಾರೆ. ಅವರಿಗೆ ಸದ್ಗತಿ ದೊರಕಲಿ, ದೇವರು ದುಃಖ ಭರಿಸುವ ಶಕ್ತಿಯನ್ನು ಮಗನಿಗೆ ಕೊಡಲಿ ಎಂದು ತಿಳಿಸಿದರು.
ಇದನ್ನೂ ಓದಿ: ಹಿರಿಯ ನಟಿಯ ಅಂತಿಮ ದರ್ಶನ: ಅಮ್ಮನನ್ನು ಮತ್ತೆ ನೆನೆದ ಸುಧಾರಾಣಿ, ಶೃತಿ, ಮಾಳವಿಕಾ
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ, ಇದು ಬಹಳ ದುಃಖದ ಸಂಗತಿ. ಲೀಲಾವತಿಯವರು ಇಂದು ಇಲ್ಲದಿದ್ದರೂ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಸಾಧನೆ ಮೂಲಕ ಅಚ್ಚಳಿಯದೇ ಉಳಿದಿದ್ದಾರೆ. ಅವರ ಪಾತ್ರಗಳು ಮುಂದಿನ ದಿನಗಳಲ್ಲಿ ಸಾಧ್ಯವಿಲ್ಲ. ಅತ್ಯಂತ ಶ್ರೇಷ್ಠ ನಟಿಯನ್ನು ಕಳೆದುಕೊಂಡಿದ್ದೇವೆ. ಆದ್ರೂ ಅವರು ನಮ್ಮ ಹೃದಯದಲ್ಲಿ ಸದಾ ಜೀವಂತ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಂಡರು.