ಒಳ್ಳೆಯದಾಗಲಿ ಎಂದು ದೇವರಿಗೆ ಕೈ ಮುಗಿದು ಕಳ್ಳತನಕ್ಕೆ ಯತ್ನಿಸಿದ್ದ ಖದೀಮ ಅರೆಸ್ಟ್: ಸಿಸಿಟಿವಿಯಲ್ಲಿ ದೃಶ್ಯ ಸೆರೆ
🎬 Watch Now: Feature Video
ಬೆಂಗಳೂರು: ಕೆಲಸದಲ್ಲಿ ದೇವರು ಕಾಣು ಎಂಬ ಮಾತಿದೆ, ಇಲ್ಲೊಬ್ಬ ಖದೀಮ ಮಾಡಿದ್ದು ಅದೇ. ಮಾಡುವ ಕೆಲಸ ಕಳ್ಳತನವಾದರೂ ದೇವರಿಗೆ ಕೈ ಮುಗಿದು ಒಳ್ಳೆಯದು ಮಾಡು ಎಂದು ಬೇಡಿಕೊಂಡು ನಗರದ ಎಟಿಎಂವೊಂದರಲ್ಲಿ ದರೋಡೆ ಮಾಡಲು ಯತ್ನಿಸಿದ ಚೋರನನ್ನ ಕಾಮಾಕ್ಷಿಪಾಳ್ಯ ಪೊಲೀಸರು ಸೆರೆಹಿಡಿದಿದ್ದಾರೆ. ಕೆಲಸ ಪ್ರಾರಂಭಿಸುವುದಕ್ಕಿಂತ ಮುಂಚೆ ದೇವರಿಗೆ ಕೈ ಮುಗಿಯೋದು ಸಾಮಾನ್ಯ. ಆದರೆ, ಈತ ಮಾಡುವ ಕೆಲಸ ಕಳ್ಳತನವಾದರೂ ಯಾವುದೇ ತೊಂದರೆಯಾಗದಂತೆ ಒಳ್ಳೆಯದನ್ನ ಮಾಡು ಎಂದು ಬೇಡಿಕೊಂಡು ಅಪರಾಧ ಕೃತ್ಯಗಳನ್ನು ಮಾಡುತ್ತಿದ್ದ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ತುಮಕೂರು ಮೂಲದ ಕರಿಚಿತ್ತಪ್ಪ ಬಂಧಿತ ಆರೋಪಿ ಆಗಿದ್ದಾರೆ. ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ರಂಗನಾಥಪುರದಲ್ಲಿ ನವರತ್ನ ಬಾರ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಸುಲಭವಾಗಿ ಹೆಚ್ಚಿನ ಹಣ ಸಂಪಾದನೆ ಮಾಡಲು ತಂತ್ರ ರೂಪಿಸಿದ ಆರೋಪಿಯು ಕಳ್ಳತನ ಮಾಡುವುದಕ್ಕೆ ಯೋಜನೆ ರೂಪಿಸಿದ್ದ. ಇದಕ್ಕಾಗಿ ಹಗಲಿನಲ್ಲಿ ಸೆಕ್ಯೂರಿಟಿ ಇಲ್ಲದ ಎಟಿಎಂ ಕೇಂದ್ರಗಳಿಗೆ ಹೋಗಿ ತಲಾಶ್ ನಡೆಸುತ್ತಿದ್ದ.
ಇದೇ ರೀತಿ ಕಾಮಾಕ್ಷಿಪಾಳ್ಯದ ಕಾವೇರಿಪುರ ಜಯಲಕ್ಷ್ಮೀ ಕಾಂಪ್ಲೆಕ್ಸ್ನಲ್ಲಿರುವ ಆ್ಯಕ್ಸಿಸ್ ಬ್ಯಾಂಕ್ ಎಟಿಎಂಗೆ ಕಳೆದ ಜನವರಿ 14 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಹೋಗಿದ್ದಾನೆ. ಕಳ್ಳತನ ಮಾಡುವ ಮುನ್ನ ಸಿಸಿಟಿವಿ ಕ್ಯಾಮರ ಕಂಡು ಕೈ ಮುಗಿದು ಒಳ್ಳೆಯದಾಗಲಿ ಎಂದು ಬೇಡಿಕೊಂಡು. ನಂತರ ಹಣ ಕಳ್ಳತನ ಮಾಡಲು ಯತ್ನಿಸಿ ವಿಫಲನಾಗಿ ಬಂದ ದಾರಿಗೆ ಸುಂಕವಿಲ್ಲದಂತೆ ಹೋಗಿದ್ದಾನೆ. ಈ ಸಂಬಂಧ ಬ್ಯಾಂಕ್ ಆಡಳಿತ ಮಂಡಳಿಯು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಯಾದಗಿರಿ ಐತಿಹಾಸಿಕ, ಪಾರಂಪರಿಕ ಭೂಮಿ, ನಿಮ್ಮ ಆಶೀರ್ವಾದವೇ ನಮ್ಮ ಶಕ್ತಿ: ಕನ್ನಡದಲ್ಲಿ ಶುಭಕೋರಿದ ಮೋದಿ