ಹಂಪಿ ಉತ್ಸವಕ್ಕೆ ಬೊಮ್ಮಾಯಿ ಚಾಲನೆ.. ಖ್ಯಾತ ಗಾಯಕರಿಂದ ಸಂಗೀತ ರಸಮಂಜರಿ - ಈಟಿವಿ ಭಾರತ ಕನ್ನಡ
🎬 Watch Now: Feature Video
ವಿಜಯನಗರ(ಬಳ್ಳಾರಿ): ಮೂರು ದಿನಗಳ ಕಾಲ ನಡೆಯಲಿರುವ ಇತಿಹಾಸ ಪ್ರಸಿದ್ಧ ಹಂಪಿ ಉತ್ಸವಕ್ಕೆ ಶುಕ್ರವಾರ ಸಂಜೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಿಎಂ, ವಿಜಯನಗರ ಸಾಮ್ರಾಜ್ಯದ ಅರಸರು ಇದೇ ಯೋಗ್ಯ ಸ್ಥಳವೆಂದು ಹಂಪಿ ಸಾಮ್ರಾಜ್ಯವನ್ನು ಇಲ್ಲೇ ಸ್ಥಾಪನೆ ಮಾಡಿದ್ದರು. ಇಲ್ಲಿನ ಒಂದೊಂದು ಶಿಲೆಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಅದೆಲ್ಲವನ್ನೂ ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ ಎಂದರು.
ಬಳಿಕ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಉತ್ಸವಕ್ಕೆ ಸಂಬಂಧಿಸಿ ಕಳೆದ ಮೂರು ದಿನಗಳಿಂದ ಹಲವು ಕಾರ್ಯಕ್ರಮಗಳು ಜರುಗಿವೆ. ಆದರೆ ಇವತ್ತು ಹಕ್ಕಬುಕ್ಕರು ಕಟ್ಟಿದ ನಾಡಿನಲ್ಲಿ ಇತಿಹಾಸ ನಿರ್ಮಿಸುವ ಹಂಪಿ ಉತ್ಸವ ನಡೆಯುತ್ತಿರುವುದು ಚರಿತ್ರೆಯಲ್ಲಿ ಬರೆದಿಡುವಂತಾಗಲಿದೆ ಎಂದು ಹೇಳಿದರು. ಬಳಿಕ ಸಚಿವ ಆನಂದ್ ಸಿಂಗ್ ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಮೆಲುಕು ಹಾಕಿದರು.
ಅದಾದ ನಂತರ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಜರುಗಿತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕಿ ಎಂ.ಡಿ ಪಲ್ಲವಿ, ಬಾಲಿವುಡ್ ಹಿನ್ನೆಲೆ ಗಾಯಕ ಅಂಕಿತ್ ರೂವಾರಿ ಸೇರಿದಂತೆ ಅನೇಕ ಗಾಯಕರ ಹಾಡುಗಳಿಗೆ ಸಭಿಕರು ಕುಣಿದು ಕುಪ್ಪಳಿಸಿದರು. ಹೀಗೆ ಮೊದಲ ದಿನದ ಹಂಪಿ ಉತ್ಸವ ಭಾರೀ ಸಂಭ್ರಮದಿಂದ ಜರುಗಿತು.