ತಿರುವನಂತಪುರ: ಕಳೆದ ಕೆಲವು ತಿಂಗಳಲ್ಲಿ ರಾಜ್ಯದಲ್ಲಿ ಆತಂಕ ಮೂಡಿಸಿದ್ದ ಝಿಕಾ ವೈರಸ್ ಇದೀಗ ಮತ್ತೆ ಕೇರಳದಲ್ಲಿ ಕಾಣಿಸಿಕೊಂಡಿದೆ. ಇದೀಗ ಆರೋಗ್ಯ ಇಲಾಖೆ ಆಲರ್ಟ್ ಘೋಷಣೆ ಮಾಡಿದ್ದು, ಮುನ್ನೆಚ್ಚರಿಕೆ ವಹಿಸಿದೆ.
ನಿಗೂಢ ಕಾಯಿಲೆಯ ಮೂಲ ಝಿಕಾ ವೈರಸ್: ಕಣ್ಣೂರ್ ಜಿಲ್ಲೆಯ ತಲಸ್ಸೆರಿ ನ್ಯಾಯಾಲಯವನ್ನು ನಿಗೂಢ ಕಾಯಿಲೆ ಕಾಣಿಸಿಕೊಂಡಿತ್ತು. ಈ ಸಂಬಂಧ 22 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಈ ಮಾದರಿಯಲ್ಲಿ ಝಿಕಾ ವೈರಸ್ ಪತ್ತೆಯಾಗಿದೆ ಎಂದು ಅಲಪ್ಪುಳ ವೈರಾಲಜಿ ಇನ್‌ಸ್ಟಿಟ್ಯೂಟ್ ವರದಿ ನೀಡಿದೆ.
ತಲಸ್ಸೆರಿ ನ್ಯಾಯಾಲಯದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಅವರಲ್ಲಿ ಜ್ವರ, ಕಣ್ಣು ಕೆಂಪಾಗುವಿಕೆ, ದೇಹದ ಊತ ಮತ್ತು ನೋವು ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿದ್ದವು. ದಿಢೀರ್ ಅನಾರೋಗ್ಯಕ್ಕೆ ಒಳಗಾದವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೂ ಸೋಂಕಿಗೆ ನಿಖರವಾದ ಕಾರಣ ಪತ್ತೆ ಆಗಿಲ್ಲ.
ಅನಾರೋಗ್ಯಕ್ಕೆ ಒಳಗಾದವರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದು, ಪರೀಕ್ಷೆಗೆ ಕಳುಹಿಸಲಾಗಿದ್ದು, ಇದೀಗ ಝಿಕಾ ಸೋಂಕು ಪಾಸಿಟಿವ್ ಬಂದಿದೆ. ಝಿಕಾ ವೈರಸ್ ಈಡಿಸ್ ಸೋಳೆಗಳಿಂದ ಹರಡುವ ಸಾಂಕ್ರಾಮಿಕವಾಗಿದ್ದು, ಕಳ್ಳೆ ಕಡಿತದಿಂದ ಇದು ಹರಡುತ್ತದೆ. ಇದೀಗ ಝಿಕಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನವೆಂಬರ್ 6ರಂದು ಮತ್ತೊಮ್ಮೆ ನ್ಯಾಯಾಲಯದ ಸಿಬ್ಬಂದಿಗಳನ್ನು ವೈದ್ಯಕೀಯ ತಪಾಸಣೆ ನಡೆಸಲಾಗುವುದು ಎಂದು ಘೋಷಿಸಲಾಗಿದೆ. ಸೋಂಕು ಪತ್ತೆಯಾಗಿರುವ ಹಿನ್ನೆಲೆ ಕೋರ್ಟ್ ಆವರಣದಲ್ಲಿ ಸೊಳ್ಳೆ ವಿರೋಧಿ ಚಾಲನೆಗೆ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಮುಂದಾಗಿದ್ದಾರೆ.
ಕರ್ನಾಟಕದಲ್ಲೂ ಝಿಕಾ ಪತ್ತೆ: ಆರೋಗ್ಯ ಇಲಾಖೆಯು ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸಮೀಪದ ಸೊಳ್ಳೆಗಳನ್ನು ಲ್ಯಾಬ್ನಲ್ಲಿ ಪರೀಕ್ಷಿಸಿತ್ತು. ಆಗ ಅಲ್ಲಿನ ಸೊಳ್ಳೆಗಳಲ್ಲಿ ಝಿಕಾ ಕಂಡು ಬಂದಿದೆ. ಈಗಾಗಲೇ ಇಲಾಖೆ ಸರ್ವೆ ಕಾರ್ಯ ನಡೆಸುತ್ತಿದೆ. ಆದರೆ, ಮನುಷ್ಯರಲ್ಲಿ ರೋಗದ ಲಕ್ಷಣಗಳು ಗೋಚರಿಸಿಲ್ಲ. ಗ್ರಾಮ ಸೇರಿದಂತೆ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಎಚ್ಚರಿಕೆ ವಹಿಸುತ್ತಿದೆ.
ಈ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಆರೋಗ್ಯ ಇಲಾಖೆ ತಪಾಸಣೆಗೆ ಒಳಪಡಿಸಲಿದೆ. ಅದರಲ್ಲೂ ಮುಖ್ಯವಾಗಿ, ಗರ್ಭಿಣಿಯರು ಸೇರಿದಂತೆ ಇತರರ ಮೇಲೆ ಹೆಚ್ಚು ನಿಗಾ ವಹಿಸುತ್ತಿದೆ. ಜಿಲ್ಲೆಯ ನಾಗರಿಕರಲ್ಲಿ ಝಿಕಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ್ ಸ್ಪಷ್ಟಪಡಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಸೊಳ್ಳೆಗಳಲ್ಲಿ ಝೀಕಾ ವೈರಸ್ ಪತ್ತೆ: ಆತಂಕ ಬೇಡ, ಎಚ್ಚರ ವಹಿಸಿ ಎಂದ ಆರೋಗ್ಯ ಇಲಾಖೆ