ಬೆಂಗಳೂರು : ಇತ್ತೀಚಿಗೆ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಪುರುಷರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗಿಯೇ ಇವೆ. ಆದಾಗ್ಯೂ, ಮಹಿಳೆಯರಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ಆತಂಕದ ವಿಷಯ ಅಂತಾ ನ್ಯೂಬರ್ಗ್ ಸೆಂಟರ್ ಫಾರ್ ಜೀನೋಮಿಕ್ ಮೆಡಿಸಿನ್ ಪ್ಯಾನಲ್‌ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ತಜ್ಞರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ತಜ್ಞರ ಪ್ರಕಾರ ತೂಕ ಕಡಿಮೆ ಆಗುವುದು, ಕಫ ಉತ್ಪತ್ತಿ, ಕಫದೊಂದಿಗೆ ರಕ್ತ ಬರುವುದು ಶ್ವಾಸಕೋಶದ ಕ್ಯಾನ್ಸರ್‌ನ ಕೆಲವು ಪ್ರಮುಖ ಲಕ್ಷಣಗಳು. ಕ್ಯಾನ್ಸರ್ ಶ್ವಾಸಕೋಶಗಳಿಂದ ಹರಡಿದರೆ, ಅದು ಯಕೃತ್ತನ್ನು ಸೇರಿ ಕಾಮಾಲೆ ರೋಗಕ್ಕೆ ಕಾರಣವಾಗುತ್ತದೆ.
ಹಾಗೇ ಅಡ್ರಿನಲ್ ಗ್ರಂಥಿಗಳಿಗೆ ಸೇರಿದರೆ ಅವು ವೈಫಲ್ಯ ಅನುಭವಿಸುತ್ತವೆ. ಇದರಿಂದ ರಕ್ತದೊತ್ತಡ ಕುಸಿತದಂತಹ ತುರ್ತು ಸ್ಥಿತಿಯನ್ನು ತಂದೊಡ್ಡುತ್ತದೆ. ಎಲುಬುಗಳಲ್ಲಿ ನೋವು ಮತ್ತು ಮುರಿತ ಉಂಟಾಗುತ್ತದೆ. ಕ್ಯಾನ್ಸರ್ ಮೆದುಳನ್ನು ತಲುಪಿದಾಗ ಪಾರ್ಶ್ವವಾಯು ಉಂಟಾಗುತ್ತದೆ.
ಶ್ವಾಸಕೋಶ ಕ್ಯಾನ್ಸರ್‌ಗೆ ಇದೂ ಕಾರಣ
ಕೈಗಾರಿಕೆಗಳು, ಗಣಿಗಾರಿಕೆ ವಲಯಗಳಲ್ಲಿ ಕೆಲಸ ಮಾಡುವಂತಹ ಔದ್ಯೋಗಿಕ ಅಂಶಗಳ ಹೊರತಾಗಿ, ಸಿಗರೇಟ್‌ಗಳ ಸೇವನೆ, ತಂಬಾಕು ಜಗಿಯುವುದು, ಖೇಣಿ, ಹುಕ್ಕಾ, ತಂಬಾಕಿನ ಜತೆಗೆ ವೀಳ್ಯದೆಲೆ ತಿನ್ನುವುದು, ಧೂಮಪಾನ, ಅಡುಗೆ ಮನೆಯ ಹೊಗೆ ಮತ್ತು ವಾಹನಗಳ ಮಾಲಿನ್ಯ ಮುಂತಾದವು ಶ್ವಾಸಕೋಶದ ಕ್ಯಾನ್ಸರ್‌ಗೆ ಮುಖ್ಯ ಕಾರಣಗಳಾಗಿವೆ.
ಮುಂದಿನ ಕೆಲವು ವರ್ಷಗಳಲ್ಲಿ ತಂಬಾಕು-ಸಂಬಂಧಿ ಮಾರಕ ರೋಗಗಳ ಹೊರೆ ಭಾರತದಲ್ಲಿ 12 ಪ್ರತಿಶತಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಸಮಿತಿ ಎಚ್ಚರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕುಮಾರನ್ ಆಸ್ಪತ್ರೆಯ ಮೆಡಿಕಲ್ ಆಂಕಾಲಜಿಸ್ಟ್ ಡಾ ಎಸ್. ವಿಶ್ವನಾಥ್, ಬಹುತೇಕ ಸಂದರ್ಭಗಳಲ್ಲಿ ಹಲವರು ಆರಂಭಿಕ ಹಂತಗಳಲ್ಲಿ ಕ್ಯಾನ್ಸರನ್ನ ಕ್ಷಯವೆಂದು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗುತ್ತದೆ. ಎರಡರ ರೋಗಲಕ್ಷಣಗಳೂ ಬಹುತೇಕ ಒಂದೇ ರೀತಿ ಇರುವುದು ಇದಕ್ಕೆ ಕಾರಣ. ಎರಡೂ ಪ್ರಕರಣಗಳಲ್ಲಿ, ರೋಗಿಯು ಕೆಮ್ಮು ಹಾಗೂ ರಕ್ತ ಸಹಿತವಾದ ಕೆಮ್ಮನ್ನು ಹೊಂದಿರುತ್ತಾರೆ.
ಆರಂಭದಲ್ಲೇ ಚಿಕಿತ್ಸೆ ಪಡೆದರೆ ಹಾನಿಯಾಗದು
ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿದೆ. ಧೂಮಪಾನಿಗಳು ಹಾಗೂ ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಉಂಟಾಗುವ ಅಪಾಯವು 20:1ರಷ್ಟಿರುತ್ತದೆ. ಧೂಮಪಾನಿಗೆ ಹೋಲಿಸಿದರೆ ನಿಷ್ಕ್ರಿಯ ಧೂಮಪಾನಿ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಸಮನಾಗಿರುತ್ತದೆ ಅಥವಾ ಹೆಚ್ಚಾಗಿರುತ್ತದೆ ಅಂದಿದ್ದಾರೆ.
ಆರಂಭಿಕ ಹಂತದಲ್ಲಿ ರೋಗಿಗಳನ್ನು ಗುಣಪಡಿಸಲು, ಶಸ್ತ್ರಚಿಕಿತ್ಸೆಯು ತುಂಬ ಮುಖ್ಯವಾದ ವಿಧಾನವಾಗಿದ್ದು, ಆ ಬಳಿಕ ವಿಕಿರಣ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈಗ ಹೆಚ್ಚು ಸುಧಾರಿತ ಚಿಕಿತ್ಸಾ ವಿಧಾನಗಳಾದ ಉದ್ದೇಶಿತ ಚಿಕಿತ್ಸೆ ಮತ್ತು ಇಮ್ಯುನೊಥೆರಪಿ ಆಯ್ಕೆಗಳು ಲಭ್ಯವಿವೆ. ಇವು ಜೀವಿತಾವಧಿಯನ್ನು ಹೆಚ್ಚಿಸುತ್ತವೆ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕೆ ಕಾರಣವಾಗುತ್ತವೆ.
ಕೀಮೋಥೆರಪಿಗೆ ಹೋಲಿಸಿದರೆ ಉದ್ದೇಶಿತ ಚಿಕಿತ್ಸೆ ಮತ್ತು ಇಮ್ಯುನೋಥೆರಪಿಗಳು ತುಂಬ ಕಡಿಮೆ ಅಡ್ಡ ಪರಿಣಾಮಗಳನ್ನು ಹೊಂದಿವೆ. ಉತ್ತಮ ಬದುಕುಳಿಯುವಿಕೆಯ ದರಗಳಿಗೆ ಕಾರಣವಾಗುವ ಚಿಕಿತ್ಸೆಯ ಆಯ್ಕೆಗಳನ್ನು ನಿರ್ಧರಿಸುವಲ್ಲಿ ಜೆನೆಟಿಕ್ ಪರೀಕ್ಷೆಯು ವರದಾನವಾಗಿದೆ ಎಂದಿದ್ದಾರೆ.
ಶ್ವಾಸಕೋಶ ಕ್ಯಾನ್ಸರ್ ಪೀಡಿತರು ರೋಗ ಪತ್ತೆಯಾದ ಮೊದಲ ವರ್ಷದಲ್ಲೇ ಸಾವು
ಹೆಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಕನ್ಸಲ್ಟೆಂಟ್ ಆಗಿರುವ ಡಾ. ಜಗನ್ನಾಥ್ ದೀಕ್ಷಿತ್ ಮಾಹಿತಿ ನೀಡಿದ್ದು, ಶೇ.50ರಷ್ಟು ಶ್ವಾಸಕೋಶ ಕ್ಯಾನ್ಸರ್ ಪೀಡಿತರು ರೋಗ ಪತ್ತೆಯಾದ ಮೊದಲ ವರ್ಷದಲ್ಲೇ ಸಾವಿಗೀಡಾಗುತ್ತಾರೆ. ಆರಂಭಿಕ ಹಂತಗಳಲ್ಲೇ ಕ್ಯಾನ್ಸರ್ ಪತ್ತೆಯಾದರೆ ಸಾವಿನ ಪ್ರಮಾಣವನ್ನು ಶೇ.14ರಿಂದ ಶೇ.20ರಷ್ಟು ಇಳಿಸಬಹುದೆಂದು ನಾವು ಭರವಸೆ ನೀಡುತ್ತೇವೆ.
ಆದಾಗ್ಯೂ, ಆರಂಭಿಕ ರೋಗಲಕ್ಷಣಗಳು ಹೆಚ್ಚು ಗೋಚರವಾಗುವುದಿಲ್ಲ. ಆದ್ದರಿಂದ ಆರಂಭಿಕ ಹಂತಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಕಷ್ಟವಾಗುತ್ತಿದೆ. ಗ್ರಾಮೀಣ ಮಹಿಳೆಯರಲ್ಲಿ ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗುತ್ತಿದೆ. ಉತ್ತರ ಕರ್ನಾಟಕದ ಹೊಲಗಳಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಇದು ಗಮನಾರ್ಹವಾಗಿರುತ್ತದೆ.
ಚಿಕಿತ್ಸೆಯಲ್ಲಿದ್ಯಾ ಅಡ್ಡಪರಿಣಾಮ
ನ್ಯೂಬರ್ಗ್ ಸೆಂಟರ್ ಆಫ್ ಜೀನೋಮಿಕ್ ಮೆಡಿಸಿನ್‌ನ ಮುಖ್ಯ ವಿಜ್ಞಾನಿ ಡಾ. ಸಿದ್ಧಾರ್ಥ್ ಶ್ರೀವಾಸ್ತವ ಹೇಳುವಂತೆ, ಕ್ಯಾನ್ಸರ್ ಗುಣಪಡಿಸುವಲ್ಲಿ ಉದ್ದೇಶಿತ ಚಿಕಿತ್ಸೆಯು ಬಹುಮುಖ್ಯ ವಿಧಾನವಾಗಿ ಮೂಡಿಬರುತ್ತಿದೆ. ಉದ್ದೇಶಿತ ಚಿಕಿತ್ಸೆಗಳು ಕ್ಯಾನ್ಸರ್‌ಗೆ ಸಂಬಂಧಿಸಿದ ನಿರ್ದಿಷ್ಟ ಆಣ್ವಿಕ ಗುರಿಗಳ ಮೇಲೆ ಕಾರ್ಯನಿರ್ವಹಿಸುತ್ತವೆ.
ಆದರೆ ಹೆಚ್ಚಿನ ಪ್ರಮಾಣಿತ ಕೀಮೋಥೆರಪಿಗಳು ವೇಗವಾಗಿ ವಿಭಜನೆಗೊಳ್ಳುವ ಎಲ್ಲ ಸಾಮಾನ್ಯ ಮತ್ತು ಕ್ಯಾನ್ಸರ್ ಕೋಶಗಳ ಮೇಲೆ ಕಾರ್ಯನಿರ್ವಹಿಸುತ್ತವೆ. ಇದು ಸಾಮಾನ್ಯ ಕೋಶಗಳನ್ನು ಸಹ ಕೊಲ್ಲುತ್ತದೆ. ಕೀಮೋಥೆರಪಿಗೆ ಹೋಲಿಸಿದರೆ ಉದ್ದೇಶಿತ ಚಿಕಿತ್ಸೆಯು ಕಡಿಮೆ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತದೆ.
ಅದರೊಂದಿಗೆ ರೋಗಿಗಳ ಜೀವನ ಮಟ್ಟವನ್ನು ಉತ್ತಮಗೊಳಿಸುತ್ತದೆ ಅಂತ ತಿಳಿಸಿದ್ದಾರೆ. ಇನ್ನು, ಪ್ರತಿವರ್ಷವೂ ಆಗಸ್ಟ್ 1ರಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನ ಆಚರಿಸಲಾಗುತ್ತೆ. ಈ ಮೂಲಕ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.