ಬೆಂಗಳೂರು: ಮೆದುಳನ್ನು ಹೊರತುಪಡಿಸಿದರೆ ಮಾನವನ ದೇಹದಲ್ಲಿ ಯಕೃತ್ತು ಎರಡನೇ ಅತಿದೊಡ್ಡ ಮತ್ತು ಅತ್ಯಂತ ಸಂಕೀರ್ಣವಾದ ಅಂಗ. ಇದನ್ನು ಅತ್ಯಂತ ಮುತುವರ್ಜಿ ವಹಿಸಿ ಕಾಪಾಡಿಕೊಳ್ಳುವುದೂ ಸಹ ಅತ್ಯಂತ ಮುಖ್ಯ. ಇದಕ್ಕಾಗಿಯೇ ಯಕೃತ್ತಿಗೆ ಸಂಬಂಧಿಸಿದ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 19 ನ್ನು ವಿಶ್ವ ಯಕೃತ್ತಿನ ದಿನವಾಗಿ ಆಚರಿಸಲಾಗುತ್ತದೆ.
ಯಕೃತ್ತು ಇಲ್ಲದೇ ವ್ಯಕ್ತಿ ಬದುಕಿಲ್ಲ: ಯಕೃತ್ತು ದೇಹದ ರೋಗ ನಿರೋಧಕ ಶಕ್ತಿ, ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರೂ ಸೇವಿಸುವ ಆಹಾರ ಹಾಗೂ ಕುಡಿಯುವ ಪಾನೀಯ ಯಕೃತ್ತಿನ ಮೂಲಕವೇ ಹಾದು ಹೋಗುತ್ತದೆ. ಅತ್ಯಂತ ಸರಳವಾಗಿ ಹೇಳಬೇಕೆಂದರೆ ಯಕೃತ್ತು ಇಲ್ಲದೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ. ಸಮರ್ಪಕವಾಗಿ ಈ ಅಂಗವನ್ನು ಜೋಪಾನ ಮಾಡದಿದ್ದರೆ ಜೀವಕ್ಕೇ ಅಪಾಯ ಕಟ್ಟಿಟ್ಟ ಬುತ್ತಿ.
ರಕ್ತದ ಪ್ಲಾಸ್ಮಾಕ್ಕೆ ಪ್ರೋಟೀನ್‌ಗಳ ಉತ್ಪಾದನೆ, ಗ್ಲೂಕೋಸ್ ಅನ್ನು ಗ್ಲೈಕೋಜೆನ್ ಆಗಿ ಪರಿವರ್ತಿಸುವುದು, ಅಮೈನೋ ಆಮ್ಲ ನಿಯಂತ್ರಣ ಮತ್ತು ಹೆಚ್ಚಿನವುಗಳಿಗೆ ಯಕೃತ್ತು ಕಾರಣವಾಗಿದೆ. ಇದಲ್ಲದೇ, ಒಬ್ಬ ವ್ಯಕ್ತಿಯು ಮಧುಮೇಹ ಹೊಂದಿದ್ದರೆ, ಅವರು ತಮ್ಮ ಯಕೃತ್ತಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದನ್ನು ಸಮಸ್ಯೆ ಎಂದು ವೈದ್ಯರ ಬಳಿ ಹೋದಾಗ ವಿವರಿಸಲಾಗುತ್ತದೆ.
ಮಧುಮೇಹ ಪ್ರಮುಖ ಕಾರಣ: ಭಾರತದಲ್ಲಿ ಯಕೃತ್ತಿನ ವೈಫಲ್ಯ ಮತ್ತು ಕಸಿ ಮಾಡುವ ಪರಿಸ್ಥಿತಿ ಎದುರಾಗಲು ಮಧುಮೇಹವು ಎರಡನೇ ಪ್ರಮುಖ ಕಾರಣವಾಗಿದೆ. ಯಕೃತ್ತಿನ ರೋಗಗಳು ಉಲ್ಬಣಗೊಳ್ಳುವವರೆಗೂ ರೋಗ ಲಕ್ಷಣಗಳನ್ನು ತೋರಿಸುವುದಿಲ್ಲ. ಆದ್ದರಿಂದ, ಯಾವುದೇ ಮಾರಣಾಂತಿಕ ಕಾಯಿಲೆಯ ಸಾಧ್ಯತೆಗಳನ್ನು ತೊಡೆದುಹಾಕಲು ನಾವು ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ಸಂಪೂರ್ಣ ದೇಹ ತಪಾಸಣೆಗೆ ನಿಯಮಿತವಾಗಿ ಹೋಗುವುದು ಮುಖ್ಯವಾಗಿದೆ. ಶರೀರವನ್ನು ಹುರಿಗೊಳಿಸಿಟ್ಟುಕೊಳ್ಳಲು ಜೊತೆಗೆ ಯಕೃತ್ತಿನ ಗುಣಮಟ್ಟ ಕಾಪಾಡಿಕೊಳ್ಳಲು ಈಜು, ಸೈಕ್ಲಿಂಗ್, ವಾಕಿಂಗ್ ಅಥವಾ ಯೋಗದಂತಹ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಉತ್ತಮ ಮಾರ್ಗ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸೋಡಿಯಂ ಮತ್ತು ಕೆಫೀನ್ ಸೇವನೆ ಕಡಿಮೆ ಮಾಡಬೇಕು. ಕೃತಕ ಬಣ್ಣ, ಸ್ವಾದ ಬಳಸಿದ ಪೇಯ, ಪಾನೀಯ ಬಳಸುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ನಿಯಮಿತವಾಗಿ ಆಗಾಗ ಆಹಾರ ಸೇವಿಸುವ ಕಾರ್ಯ ಮಾಡುವುದು ಉತ್ತಮ.
ಪ್ರತಿದಿನ ಕನಿಷ್ಠ ಅರ್ಧ ಗೆಂಟೆಯವರೆಗೆ ವ್ಯಾಯಾಮ ಮಾಡಿದರೆ ಸೂಕ್ತ. ಆಹಾರದಲ್ಲಿ ಧಾನ್ಯಗಳು, ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಅಳವಡಿಕೆ ಮಾಡಿಕೊಳ್ಳಬೇಕು. ಕುರುಕಲು ತಿಂಡಿಯನ್ನು ಸಾಧ್ಯವಾದಷ್ಟು ದೂರ ಇಡುವುದು ಉತ್ತಮ. ಸರಿಯಾದ ಆಹಾರವನ್ನು ಸೇವಿಸಿ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಿ.
ಏನಿದು ಫ್ಯಾಟಿ ಲಿವರ್?: ಯಕೃತ್ತಿನ ಸಮಸ್ಯೆಗಳಲ್ಲಿ ಅತ್ಯಂತ ಪ್ರಮುಖವಾಗಿ ಫ್ಯಾಟಿ ಲಿವರ್ ಎದ್ದು ಕಾಡುತ್ತದೆ. ದೆಹವನ್ನು ಆರೋಗ್ಯವಾಗಿಡುವಲ್ಲಿ ಯಕೃತಿನ ಪಾತ್ರ ಮುಖ್ಯವಾದುದು. ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿಯ ಹೆಚ್ಚಿಸುವವರೆಗೆ ಅರೋಗ್ಯದ ಪ್ರತಿ ಹಂತದಲ್ಲೂ ಯಕೃತಿನ ಕೊಡುಗೆ ಅಪಾರ. ಫ್ಯಾಟಿ ಲಿವರ್ ಸಮಸ್ಯೆ ಎಂದರೆ, ಸರಳ ಭಾಷೆಯಲ್ಲಿ ಹೇಳುವುದಾದರೆ ಸಾಮಾನ್ಯ ಅರೋಗ್ಯ ತೂಕಕ್ಕಿಂತ ಯಕೃತಿನ ತೂಕ ಹೆಚ್ಚಾಗಿ ಕೊಬ್ಬಿನ ಅಂಶ ತುಂಬಿ ಕೊಳ್ಳುವುದು, ಈ ರೀತಿ ಆದಲ್ಲಿ ಹೊಟ್ಟಿ ನೋವು ಕಾಣಿಸಿ ಕೊಳ್ಳಬಹುದು ಸಾಮಾನ್ಯ ಎನ್ನುತ್ತಾರೆ ಬೆಂಗಳೂರಿನ ಸಕ್ರಾ ವಲ್ಡ್ ಆಸ್ಪತ್ರೆ ಕನ್ಸಲ್ಟೆಂಟ್ ಹೆಪಟೊಬಿಲಿಯರಿ-ಪ್ಯಾಂಕ್ರಿಯಾಟಿಕ್ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಆಗಿರುವ ಡಾ.ಶೃತಿ ರೆಡ್ಡಿ.
ಫ್ಯಾಟಿ ಲಿವರ್ ರೋಗ ಲಕ್ಷಣಗಳ ಬಗ್ಗೆ ವಿವರಿಸಿರುವ ಅವರು, ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ರೋಗಿಗಳಿಗೆ ಹಸಿವು ಕಡಿಮೆ ಆಗುತ್ತದೆ. ಕಣ್ಣು ಮತ್ತು ಚರ್ಮದ ಬಣ್ಣ ಹಳದಿಗೆ ಬದಲಾಗುತ್ತದೆ. ತ್ವರಿತ ತೂಕ ನಷ್ಟ ಹಾಗೂ ಹಸಿವು ನಷ್ಟ ಆಗುತ್ತದೆ. ತುರಿಕೆ ಮತ್ತು ಅಂತಹ ಭಾವನೆ ಉಂಟಾಗಬಹುವುದು ಪ್ರಮುಖ ಲಕ್ಷಣ. ಇನ್ನು ಇದಕ್ಕೆ ಕಾರಣ ಹುಡುಕಿ ಹೊರಟರೆ ಅತಿಯಾದ ಬೊಜ್ಜು, ಅತಿಯಾದ ಮದ್ಯಪಾನ , ಅನುವಂಶಿಕ ಹಾಗೂ ಕೊಲೆಸ್ಟ್ರಾಲ್ ಕಾರಣವಾಗಿರಬಹುದು ಎಂದಿದ್ದಾರೆ.
ಕಾಪಾಡಿಕೊಳ್ಳುವುದು ಹೇಗೆ?: ಫ್ಯಾಟಿ ಲಿವರ್ ನಿಂದ ಪಾರಾಗಲು ಉತ್ತಮ ಅರೋಗ್ಯ ಅಭ್ಯಾಸ ಮಾಡಿಕೊಳ್ಳಿ (ಕೊಲೆಸ್ಟ್ರಾಲ್) ಕೊಬ್ಬು ತುಂಬಿದ ಆಹಾರ ಹಾಗೂ ಮದ್ಯಪಾನದಿಂದ ದೂರವಿರಿ ರೋಗವನ್ನು ಗೆಲ್ಲಲು ತಾಜಾ ಹಣ್ಣು, ತರಕಾರಿಗಳ್ಳನ್ನು ಹಾಗೂ ದಿದ್ವಳ ಸಿರಿ ಧಾನ್ಯಗಳನ್ನು ಆಹಾರದಲ್ಲಿ ಸೇವಿಸಿ, ದೇಹದ ತೂಕದ ಮೇಲೆ ಗಮನವಿರಲಿ ಎಂಬ ಮಾತನ್ನು ವೈದ್ಯಲೋಕ ಹೇಳುತ್ತದೆ.
ಇದನ್ನೂ ಓದಿ: ಅರಿವು ಕ್ಷೀಣಿಸುತ್ತಿದೆಯೇ? ಇದಕ್ಕೆ ಸಂಗೀತವೇ ಮದ್ದು- ಅಧ್ಯಯನ