ಹೈದರಾಬಾದ್: ಆಲೂಗಡ್ಡೆ ಚಿಪ್ಸ್, ಬ್ರೆಡ್, ಬೇಕರಿ ಉತ್ಪನ್ನಗಳು ಮತ್ತು ಚಾಕೊಲೇಟ್ ಅನ್ನು ಹೆಚ್ಚು ಇಷ್ಟಪಡುತ್ತೀರಾ?, ಹಾಗಾದರೆ ಹುಷಾರಾಗಿರಿ. ಯಾಕೆಂದರೆ ಹೊಸ ಅಧ್ಯಯನವು ಸಂಸ್ಕರಿಸಿದ ಆಹಾರವನ್ನು ತಿನ್ನುವುದು ಲೀಕಿ ಗಟ್ ಸಿಂಡ್ರೋಮ್ಗೆ ಕಾರಣವಾಗಬಹುದು ಎಂದು ಎಚ್ಚರಿಸಿದೆ. ಇದು ಮೂತ್ರಪಿಂಡದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ಅಧ್ಯಯನವು, ಸಂಸ್ಕರಿಸಿದ ಆಹಾರಗಳಲ್ಲಿ ಅಡ್ವಾನ್ಸ್ಡ್ ಗ್ಲೈಕೇಶನ್ ಎಂಡ್ ಪ್ರಾಡಕ್ಟ್ಸ್ (ಎಜಿಇ) ಎಂಬ ಹಾನಿಕಾರಕ ರಾಸಾಯನಿಕ ಸಂಯುಕ್ತಗಳು ಸಮೃದ್ಧವಾಗಿವೆ ಎಂದು ತೋರಿಸಿದೆ. ಈ ರಾಸಾಯನಿಕಗಳು ಆಹಾರಕ್ಕೆ ರುಚಿ ಮತ್ತು ಸುವಾಸನೆಯನ್ನು ನೀಡುತ್ತದೆ.
ಎಜಿಇಗಳು ಮೈಲಾರ್ಡ್ ರಿಯಾಕ್ಷನ್ ಎಂಬ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ ಮತ್ತು ದೇಹದ ಅಪಾಯದ ಸಂಕೇತಗಳನ್ನು ಬದಲಾಯಿಸಿ ಉರಿಯೂತದ ಪ್ರತಿಕ್ರಿಯೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತದೆ.
ಓಟ್ಸ್, ಬೇಯಿಸಿದ ಮತ್ತು ತಂಪಾಗಿಸಿದ ಅಕ್ಕಿ, ಬಾರ್ಲಿ, ಹುರುಳಿ, ದ್ವಿದಳ ಧಾನ್ಯಗಳಾದ ಕಪ್ಪು ಬೀನ್ಸ್ ಮತ್ತು ಬಟಾಣಿ, ಆಲೂಗಡ್ಡೆ ಮುಂತಾದ ಹೆಚ್ಚಿನ ನಿರೋಧಕ ಪಿಷ್ಟದ ಫೈಬರ್ ಹೊಂದಿರುವ ಆಹಾರವನ್ನು ತಿನ್ನುವುದು ಕರುಳಿನ ಆರೋಗ್ಯವನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಸೈನ್ಸ್ ಅಡ್ವಾನ್ಸಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವು ಬಹಿರಂಗಪಡಿಸಿದೆ.
ಜಾಗತಿಕವಾಗಿ ಶೇಕಡಾ 10 ಜನರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸಂಸ್ಕರಿಸಿದ ಆಹಾರ ಸೇವನೆಯು ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್ ಮತ್ತು ಜಠರಗರುಳಿನ ಕಾಯಿಲೆಗಳ ಅಪಾಯವನ್ನು ಕೂಡಾ ಹೊಂದಿದೆ.