ನವದೆಹಲಿ: ಸಾಂಕ್ರಾಮಿಕವಲ್ಲದ ರೋಗಗಳಾದ (ಎನ್ಸಿಡಿ) ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಭಾರತದಲ್ಲಿ ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಎಂದರೆ ಅದು ಜಢ ಜೀವನಶೈಲಿ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಒತ್ತಡದಂತಹ ಅಂಶಗಳಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನೇತೃತ್ವದಲ್ಲಿ ನಡೆದ ಅಧ್ಯಯನಲ್ಲಿ ಭಾರತದಲ್ಲಿ ಎನ್ಡಿಸಿ ಪ್ರಕರಣಗಳ ಹೆಚ್ಚಾಗುತ್ತಿದ್ದು, ಇದು ಎಚ್ಚರಿಕೆ ಗಂಟೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಅಧ್ಯಯನವನ್ನು ದಿ ಲ್ಯಾನ್ಸೆಟ್ ಡಯಾಬೀಟಿಸ್ ಅಂಡ್ ಎಂಡೊಕ್ರಿನೊಲೊಜಿ ಯಲ್ಲಿ ಪ್ರಕಟಿಸಲಾಗಿದೆ. ಭಾರತದಲ್ಲಿ 315 ಮಿಲಿಯನ್ ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ, 101 ಮಿಲಿಯನ್ ಮಂದಿ ಮಧುಮೇಹ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಈ ಅಧ್ಯಯನದಲ್ಲಿ 136 ಮಿಲಿಯನ್ ಮಂದಿಯಲ್ಲಿ ಅವಧಿ ಪೂರ್ವ ಮಧುಮೇಹ ಹೊಂದಿದ್ದು, 213 ಮಂದಿ ಅಧಿಕ ಕೊಲೆಸ್ಟ್ರಾಲ್ , 185 ಮಿಲಿಯನ್ ಜನರು ಎಲ್ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಹೊಂದಿದ್ದಾರೆ. 254 ಮಿಲಿಯನ್ ಜನರು ಸಾಮಾನ್ಯ ಸ್ಥೂಲಕಾಯ ಮತ್ತು 351 ಮಿಲಿಯನ್ ಮಂದಿ ಹೊಟ್ಟೆ ಸ್ಥೂಲಕಾಯ ಹೊಂದಿದ್ದಾರೆ.
ಭಾರತದಲ್ಲಿ ಶೇ 65 ಪ್ರತಿಶತದ ಸಾವು ಸಾಂಕ್ರಾಮಿಕವಲ್ಲದ ರೋಗಗಳಿಂದಾಗಿ ಆಗುತ್ತಿದ್ದು, ಶೇ 40ರಷ್ಟು ಮಂದಿ ಇದರಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ಏಪ್ರಿಲ್ನಲ್ಲಿ ಅಪೋಲೊ ಆಸ್ಪತ್ರೆ ತಿಳಿಸಿದೆ. ಈ ಕುರಿತು ಮಾತನಾಡಿರುವ ದೆಹಲಿಯ ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಹಿರಿಯ ವೈದ್ಯ ರಾಕೇಶ್ ಗುಪ್ತಾ, ಇದರ ಹೆಚ್ಚಳಕ್ಕೆ ಅನೇಕ ಅಂಶಗಳ ಕೊಡುಗೆ ಇದೆ ಎಂದಿದ್ದಾರೆ.
ಜೀವನಶೈಲಿ ಬದಲಾವಣೆ: ವೇಗವಾಗಿ ನಡೆಯುತ್ತಿರುವ ನಗರೀಗರಣ ಮತ್ತು ಪಾಶ್ಚಿಮಾತ್ಯ ಜೀವಶೈಲಿಯ ಅಳವಡಿಕೆಯಿಂದಾಗಿ ದೈಹಿಕ ಚಟುವಟಿಕೆಗಳ ಮಟ್ಟ ಇಳಿಕೆ ಕಂಡಿದೆ. ದೀರ್ಘಕಾಲ ಕುಳಿತು ಕೊಳ್ಳುವುದು ಮತ್ತು ವ್ಯಾಯಾಮ ಅನುಸರಿಸದೇ ಇರುವುದರಿಂದ ತೂಕ ಹೆಚ್ಚಳ ಆಗುತ್ತಿದೆ, ಇದರಿಂದ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಅಪಾಯ ಹೆಚ್ಚುತ್ತಿದೆ. ಜೊತೆಗೆ ಒತ್ತಡದ ಮಟ್ಟ ಹೆಚ್ಚುತ್ತಿದ್ದು, ಸರಿಯಾದ ನಿದ್ದೆ ಮಾಡದೇ ಇರುವುದರಿಂದ ಅದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟ ಏರಿಕೆಗೆ ಕಾರಣವಾಗುತ್ತಿದೆ ಎಂದಿದ್ದಾರೆ.
ಆಹಾರ ಪದ್ಧತಿಯಲ್ಲೂ ಗಮನಾರ್ಹ ಬದಲಾವಣೆ ಆಗಿದೆ. ಭಾರತದ ಸಂಪ್ರದಾಯಿಕ ಆಹಾರಗಳಲ್ಲಿ ಧಾನ್ಯಗಳು, ಹಣ್ಣುಗಳು, ತರಕಾರಿ ಹೆಚ್ಚಿರುತ್ತದೆ. ಆದರೆ, ಇದರ ಬದಲಾಗಿ ಇಂದು ಹೆಚ್ಚಿನ ಕ್ಯಾಲೋರಿ ಹೊಂದಿರುವ ಸಂಸ್ಕರಿತ ಆಹಾರ ಸೇವನೆ ಹೆಚ್ಚಾಗುತ್ತಿದೆ. ಅನಾರೋಗ್ಯಕರ ಕೊಬ್ಬು, ರಿಫೈಡ್ ಕಾರ್ಬೊಹೈಡ್ರೇಟ್, ಉಪ್ಪಿನ ಬಳಕೆ ಹೆಚ್ಚಿರುವುದರಿಂದ ತೂಕ ಹೆಚ್ಚಳ ಆಗುತ್ತಿದ್ದು, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಲ್ ಮಟ್ಟ ಹೆಚ್ಚಾಗುತ್ತಿದೆ.
ಅನುವಂಶಿಕ ಅಂಶ: ಇದರ ಜೊತೆಗೆ ಭಾರತೀಯರಲ್ಲಿ ಅನುವಂಶಿಕ ಪ್ರವೃತ್ತಿಯೂ ಇದೆ. ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿದ್ದು, ಇದು ಕೂಡ ಅಧಿಕ ರಕ್ತದೊತ್ತಡ ಮತ್ತು ಡೈಸಿಪಿಡೆಮಿಯಾ ಅಭಿವೃದ್ಧಿಗೆ ಕಾರಣವಾಗಿದೆ. ಭಾರತೀಯರು ಇನ್ಸುಲಿನ್ ಪ್ರತಿರೋಧಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ಪುರಾವೆಗಳು ಸೂಚಿಸುತ್ತವೆ. ಜೊತೆಗೆ ಕೆಲವು ವಂಶವಾಹಿನಿಗಳ ಸಂಯೋಜನೆ ಜೊತೆಗೆ ಅನಾರೋಗ್ಯದ ಜೀವನಶೈಲಿ ಭವಿಷ್ಯದಲ್ಲಿ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆ ಸೇವನೆ ಅಧಿಕವಾಗಿರುವುದು, ಅಲ್ಟ್ರಾ ಪ್ರೊಸೆಸ್ಡ್ ಆಹಾರಗಳು ತೂಕ ಮತ್ತು ಸ್ಥೂಲಕಾಯ ಹೆಚ್ಚಳಕ್ಕೆ ಕಾರಣವಾಗಿದ್ದು, ಮಕ್ಕಳು ಸೇರಿದಂತೆ ಜಾಗತಿಕವಾಗಿ ಶೇ 40ರಷ್ಟು ಮಂದಿ ಇದರ ಪರಿಣಾಮಕ್ಕೆ ಒಳಗಾಗುತ್ತಿದ್ದಾರೆ.
ಆರೋಗ್ಯ ತಜ್ಞರು ಹೆಳುವಂತೆ ಜನರರಿಗೆ ಪೌಷ್ಟಿಕಾಂಶಕ್ಕೆ ಸಮತೋಲಿತ ವಿಧಾನವನ್ನು ಅಳವಡಿಸಿಕೊಳ್ಳಲು ಅರಿವು ಮೂಡಿಸಬೇಕು. ಜೊತೆಗೆ ವಾಕಿಂಗ್, ಜಾಗಿಂಗ್ ಅಥವಾ ಸೈಕ್ಲಿಂಗ್‌ನಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮುಂದಾಗಬೇಕು. ದೀರ್ಘಕಾಲ ಕುಳಿತುಕೊಳ್ಳುವ ಸಮಯ ಕಡಿಮೆ ಮಾಡಬೇಕಿದೆ ಎಂದಿದ್ದಾರೆ.
ಹಣ್ಣು, ತರಕಾರಿ, ಪ್ರೋಟಿನ್ ಮತ್ತು ಆರೋಗ್ಯಯುತ ಕೊಬ್ಬಿನ ಸಮತೋಲನ ಆಹಾರ ಸೇವನೆಗೆ ಉತ್ತೇಜನ ನೀಡಬೇಕು. ತೂಕ ಮತ್ತು ಒತ್ತಡ ನಿರ್ವಹಣೆ ಜೊತೆಗೆ ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟಗಳು ಮತ್ತು ಮಧುಮೇಹ ಸಂಬಂಧ ನಿರಂತವಾಗಿ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ.