ಸಿಡ್ನಿ: ಕಡಿಮೆ ಮಟ್ಟದ ವಿಟಮಿನ್ ಡಿ ಮತ್ತು ಹೆಚ್ಚಿನ ಮಟ್ಟದ ಉರಿಯೂತದ ನಡುವೆ ನೇರ ಸಂಬಂಧ ಇದೆ ಎಂಬ ಅಂಶವನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯದ ಸಂಶೋಧನಾ ತಂಡ, ಉರಿಯೂತದ ಅಂಶದೊಂದಿಗೆ ದೀರ್ಘಕಾಲದ ಕಾಯಿಲೆಗಳ ಹೆಚ್ಚಿನ ಅಪಾಯ ಅಥವಾ ರೋಗದ ತೀವ್ರತೆ ಇರುವ ಜನರನ್ನು ಗುರುತಿಸಲು ಪ್ರಮುಖ ಬಯೋಮಾರ್ಕರ್ ಅನ್ನು ಒದಗಿಸುತ್ತವೆ ಎಂಬ ಅಂಶವನ್ನು ಬಹಿರಂಗಗೊಳಿಸಿದ್ದಾರೆ.
ಉರಿಯೂತ ದೇಹವನ್ನು ಗುಣಪಡಿಸುವ ಪ್ರಕ್ರಿಯೆಯ ಅವಿಭಾಜ್ಯ ಅಂಗವೇ ಆಗಿದೆ ಸರಿ. ಆದರೆ, ಇದು ಅತಿಯಾದರೆ, ಟೈಪ್ 2 ಡಯಾಬಿಟಿಸ್, ಹೃದ್ರೋಗ, ಮತ್ತು ಸ್ವಯಂ ನಿರೋಧಕ ಕಾಯಿಲೆಗಳು ಸೇರಿದಂತೆ ವ್ಯಾಪಕವಾದ ಸಂಕೀರ್ಣ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಡಿ ವಿಟಮಿನ್ ಕೊರತೆ ಇರುವ ಜನರಲ್ಲಿ ವಿಟಮಿನ್ ಡಿ ಹೆಚ್ಚಿಸುವುದರಿಂದ ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನವು ಸೂಚಿಸುತ್ತದೆ ಎಂದು
ವಾರ್ಸಿಟಿಯ ಪ್ರಮುಖ ಸಂಶೋಧಕ ಆಂಗ್ ಝೌ ಹೇಳಿದ್ದಾರೆ. ನೀವು ಗಾಯಗೊಂಡರೆ ಅಥವಾ ಸೋಂಕು ಹೊಂದಿದ್ದರೆ ಉರಿಯೂತವು ನಿಮ್ಮ ಅಂಗಾಂಶಗಳನ್ನು ರಕ್ಷಿಸುವ ಒಂದು ಪೂರಕ ಅಂಗ ಎನ್ನುತ್ತಾರೆ ಝೌ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉರಿಯೂತವನ್ನು ಕಡಿಮೆ ಮಾಡುವ ವಿಟಮಿನ್ ಡಿ ಮತ್ತು ಸಿ-ರಿಯಾಕ್ಟಿವ್ ಪ್ರೋಟೀನ್ ಮಟ್ಟಗಳ ನಡುವಿನ ಸಂಬಂಧವನ್ನು ತೋರಿಸಲು ಸಂಶೋಧನೆ ಕೈಗೊಳ್ಳಲಾಗಿತ್ತು.
ಸುಮಾರು 2,94,970ರ ಜನರನ್ನು ಈ ಅಧ್ಯಯನದ ಭಾಗವಾಗಿಸಲಾಗಿತ್ತು. ಇವರ ಆನುವಂಶಿಕ ಡೇಟಾವನ್ನು ಈ ವೇಳೆ ಪರಿಶೀಲನೆ ನಡೆಸಲಾಗಿದೆ. ಈ ವೇಳೆ, ಸಂಶೋಧನಾ ತಂಡಕ್ಕೆ ವಿಟಮಿನ್ ಡಿ ಮತ್ತು ಹೆಚ್ಚಿನ ಮಟ್ಟದ ಸಿ - ರಿಯಾಕ್ಟಿವ್ ಪ್ರೋಟೀನ್ ನಡುವಿನ ಏಕಮುಖ ಸಂಬಂಧ ಇರುವುದು ಕಂಡು ಬಂತು. ಉರಿಯೂತಕ್ಕೆ ಪ್ರತಿಕ್ರಿಯೆಯಾಗಿ ಯಕೃತ್ತಿನಿಂದ ಹೆಚ್ಚಿನ ಮಟ್ಟದ ಸಿ - ರಿಯಾಕ್ಟಿವ್ ಪ್ರೋಟೀನ್ ಉತ್ಪತ್ತಿಯಾಗುತ್ತದೆ. ಆದ್ದರಿಂದ ನಿಮ್ಮ ದೇಹವು ದೀರ್ಘಕಾಲದ ಉರಿಯೂತ ಅನುಭವಿಸುತ್ತಿರುತ್ತದೆ. ಇದು ಹೆಚ್ಚಿನ ಮಟ್ಟದ ಸಿ-ರಿಯಾಕ್ಟಿವ್ ಪ್ರೋಟೀನ್ ಇರುವುದನ್ನು ತೋರಿಸುತ್ತದೆ ಎಂದು ಝೌ ಹೇಳಿದರು.
ಸಾಕಷ್ಟು ವಿಟಮಿನ್ ಡಿ ಸಾಂದ್ರತೆಯು ಸ್ಥೂಲಕಾಯತೆಯಿಂದ ಉಂಟಾಗುವ ತೊಡಕುಗಳನ್ನು ತಗ್ಗಿಸುತ್ತದೆ. ಇನ್ನು ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ಸ್ವಯಂ ನಿರೋಧಕ ಕಾಯಿಲೆಗಳಂತಹ ಉರಿಯೂತದ ಅಂಶದೊಂದಿಗೆ ದೀರ್ಘಕಾಲದ ಕಾಯಿಲೆಗಳ ಅಪಾಯ ಅಥವಾ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಎಂಬ ಅಂಶ ಅಧ್ಯಯನದ ವೇಳೆ ಕಂಡುಕೊಳ್ಳಲಾಗಿದೆ. ವಿಟಮಿನ್ ಡಿ ಕೊರತೆಗಳಿರುವ ಜನರಲ್ಲಿ ವಿಟಮಿನ್ ಡಿ ಅನ್ನು ಹೆಚ್ಚಿಸುವುದು ದೀರ್ಘಕಾಲದ ಉರಿಯೂತವನ್ನು ಕಡಿಮೆ ಮಾಡುವ ಮಾರ್ಗವಾಗಿದೆ. ಅಷ್ಟೇ ಅಲ್ಲ ಈ ಸಂಬಂಧಿತ ಹಲವಾರು ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಝೌ ಪ್ರತಿಪಾದಿಸಿದ್ದಾರೆ.
ಇದನ್ನು ಓದಿ:Liver cirrhosis: ಲಿವರ್ ಸಿರೋಸಿಸ್ ಎಂದರೇನು, ಇದರ ಅಪಾಯದ ಬಗ್ಗೆ ನಿಮಗೆ ಅರಿವಿದೇಯಾ?