ಬೇಸಿಗೆ ಶುರುವಾಯಿತೆಂದರೆ, ದೇಹ ತಣ್ಣಗೆ ಮಾಡುವ ಹಣ್ಣಿನ ಜ್ಯೂಸ್ ಕುಡಿಯೋಣ ಎನ್ನಿಸುತ್ತದೆ. ಇದರಿಂದ ದೇಹಕ್ಕೆ ತಂಪು ಮಾತ್ರವಲ್ಲ ಪೋಷಕಾಂಶಗಳೂ ಲಭ್ಯವಾಗುತ್ತವೆ. ಅದರಲ್ಲೂ ಬಿರು ಬೇಸಿಗೆಯ ಸಮಯದಲ್ಲಿ ತರಹೇವಾರಿ ಹಣ್ಣುಗಳು ಕೂಡ ಮಾರುಕಟ್ಟೆಗೆ ಬರುವುದರಿಂದ ವಿವಿಧ ರೀತಿಯ ಹಣ್ಣುಗಳನ್ನು ಸೇವಿಸಬಹುದು. ಈ ಹಣ್ಣುಗಳು ಋತುಮಾನದಲ್ಲಿ ಉಂಟಾಗುವ ನಿರ್ಜಲೀಕರಣ ಸೇರಿದಂತೆ ಅನೇಕ ಸಮಸ್ಯೆಗೆ ಪರಿಹಾರ ನೀಡುತ್ತವೆ. ಅದರಲ್ಲೂ ಸೀಸನಲ್ ಹಣ್ಣುಗಳ ಸ್ಮೂಥಿಗಳು ಮನಸ್ಸಿಗೆ ಮಾತ್ರವಲ್ಲ ದೇಹವನ್ನೂ ತಾಜಾಗೊಳಿಸುತ್ತದೆ. ಪೌಷ್ಟಿಕಾಂಶ ನೀಡುವ ಜೊತೆಗೆ ಬಿಸಿಲಿನಿಂದ ಪಾರು ಮಾಡುವ ಕೆಲವು ರುಚಿಕರ ಸ್ಮೂಥಿಗಳ ರೆಸಿಪಿ ಇಲ್ಲಿದೆ.
![ದ್ರಾಕ್ಷಿ ಬೆರ್ರಿ ಸ್ಮೂಥಿ](https://etvbharatimages.akamaized.net/etvbharat/prod-images/buleberri_2703newsroom_1679892233_29.jpg)
ಬ್ಲೂ ಬೆರ್ರಿ ಸ್ಮೂಥಿ: ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಅಂಶವನ್ನು ಬ್ಲೂ ಬೆರ್ರಿ ಹೊಂದಿದೆ. ತೆಂಗಿನಕಾಯಿ ಹಾಲು ಹಾಕಿ ಚೆನ್ನಾಗಿ ರುಬ್ಬುವುದರಿಂದ ಇದರ ರುಚಿಯನ್ನು ಮತ್ತಷ್ಟು ಸ್ವಾದಿಷ್ಟಗೊಳಿಸಬಹುದು. ಜೇನು ತುಪ್ಪ ಅಥವಾ ಸಕ್ಕರೆ ಬಳಕೆ ಮಾಡುವ ಮೂಲಕ ಸಿಹಿ ಹೆಚ್ಚಿಸಬಹುದು. ಪುದಿನ ಎಲೆಗಳನ್ನು ಬೆರೆಸಬಹುದು.
![ಕಲ್ಲಂಗಡಿ ಸ್ಮೂಥಿ](https://etvbharatimages.akamaized.net/etvbharat/prod-images/watermelon_2703newsroom_1679892233_836.jpg)
ಕಲ್ಲಂಗಡಿ ಸ್ಮೂಥಿ: ಬೇಸಿಗೆಯಲ್ಲಿ ನೀರಿನ ಬೇಗೆ ನೀಗಿಸುವ ಹಣ್ಣು ಕಲ್ಲಂಗಡಿ. ದೀರ್ಘಕಾಲದವರೆಗೆ ದೇಹವನ್ನು ನಿರ್ಜಲೀಕರಣಗೊಳ್ಳದಂತೆ ಕಾಪಾಡುತ್ತದೆ. ಈ ಋತುಮಾನದಲ್ಲಿ ಹೆಚ್ಚು ಲಭ್ಯವಿರುವ ಕಲ್ಲಂಗಡಿ ಹಣ್ಣಿಗೆ ವೆನಿಲ್ಲಾ ಯೊಗರ್ಟ್ (ಮೊಸರು) ಜೊತಗೆ ಪುದಿನಾ ಎಲೆಗಳನ್ನು ಬೆರೆಸಿ ಸ್ಮೂಥಿ ತಯಾರಿಸಬಹುದು.
![ಮಾವಿನ ಹಣ್ಣಿನ ಸ್ಮೂಥಿ](https://etvbharatimages.akamaized.net/etvbharat/prod-images/mango_2703newsroom_1679892233_40.jpg)
ಮಾವಿನ ಹಣ್ಣಿನ ಸ್ಮೂಥಿ: ಬೇಸಿಗೆ ಎಂದರೆ ಅದು ಹಣ್ಣಿನ ರಾಜ ಮಾವಿನ ಕಾಲ. ವಿವಿಧ ತಳಿಯ ಮಾವುಗಳು ರುಚಿ ಜೊತೆಗೆ ಆರೋಗ್ಯ ನೀಡುತ್ತದೆ. ಮಾವಿನ ಹಣ್ಣಿನ ಜ್ಯೂಸ್, ಐಸ್ಕ್ರೀಂ ಸೇರಿದಂತೆ ನಾನಾ ವಿಧದಲ್ಲಿ ಇದರ ಹೊಸ ರುಚಿಗಳನ್ನು ಮಾಡಬಹುದು. ಮಾವಿನಲ್ಲಿ ಯಥೇಚ್ಛವಾಗಿ ಫೈಬರ್ ಮತ್ತು ವಿಟಮಿನ್ ಸಿ ಇದೆ. ಮಾವಿನ ಹಣ್ಣಿಗೆ ಐಸ್ಕ್ರೀಂ ಬಳಸಿ ತಯಾರಿಸುವ ಸ್ಮೂಥಿ ಎಲ್ಲ ವಯೋಮಾನದವರಿಗೂ ಇಷ್ಟವಾಗುತ್ತದೆ.
![ಸ್ಟ್ರಾಬೆರಿ ಸ್ಮೂಥಿ](https://etvbharatimages.akamaized.net/etvbharat/prod-images/strawberry_2703newsroom_1679892233_494.jpg)
ಸ್ಟ್ರಾಬೆರಿ ಚಿಯಾ ಸ್ಮೂಥಿ: ಕಪ್ಪು ಬಣ್ಣದ ಚೀಯಾ ಸೀಡ್ಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಸ್ಟ್ರಾಬೆರಿ, ತೆಂಗಿನ ಹಾಲು, ಓಟ್ಸ್, ಚಿಯಾ ಸೀಡ್ ಮತ್ತು ಅದರ ಸಹಿಗೆ ಸಕ್ಕರೆ ಬಳಸಿ ತಯಾರಿಸುವ ಸ್ಮೂಥಿ ನಿಮ್ಮ ಮನ ತಣಿಸದೇ ಇರಲಾರದು. ಆರೋಗ್ಯಕರ ಸ್ಮೂಥಿಯಲ್ಲಿ ಪ್ರೋಟಿನ್, ಫೈಬರ್, ವಿಟಮಿನ್ ಮತ್ತು ಮಿನರಲ್ಸ್ ಹೆಚ್ಚು ಸಿಗುತ್ತದೆ.
ದ್ರಾಕ್ಷಿ ಬೆರ್ರಿ ಸ್ಮೂಥಿ: ತಂಪಾದ ದ್ರಾಕ್ಷಿ ಜೊತೆಗೆ ಬೆರ್ರಿ ಹಣ್ಣುಗಳನ್ನು ಸೇರಿಸಿ ಮಾಡುವ ಸ್ಮೂಥಿಯಲ್ಲಿ ಹೆಚ್ಚಿನ ಆ್ಯಂಟಿ ಆಕ್ಸಿಡೆಂಟ್ ಇರುತ್ತದೆ. ದ್ರಾಕ್ಷಿಯಲ್ಲಿರುವ ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟಾಶಿಯಂ ಗುಣಗಳು ಆರೋಗ್ಯಕ್ಕೆ ಒಳ್ಳೆಯದು.
ಇದನ್ನೂ ಓದಿ: ಪ್ರತಿನಿತ್ಯ ಮುಡಿಯಷ್ಟು ಒಣ ಹಣ್ಣು ಸೇವಿಸಿ; ಹೃದಯದ ಸಮಸ್ಯೆ ಕಡಿಮೆಯಾಗುತ್ತೆ