ಹೈದರಾಬಾದ್: ತಂಬಾಕು ಸೇದಿದ ನಂತರ ಅದರ ಹೊಗೆಯಿಂದ ವಸ್ತುಗಳ ಮೇಲ್ಮೈ ಮತ್ತು ಧೂಳಿನಲ್ಲಿ ಉಳಿಯುವ ಮಾಲಿನ್ಯಕಾರಕಗಳನ್ನು ಥರ್ಡ್‌ಹ್ಯಾಂಡ್ ಸ್ಮೋಕ್ (Thirdhand Smoke -THS) ಎಂದು ಕರೆಯಲಾಗುತ್ತದೆ. ಇದು ಅನಿರ್ದಿಷ್ಟ ಕಾಲದವರೆಗೆ ಒಳಾಂಗಣ ಮೇಲ್ಮೈಗಳಲ್ಲಿ ಉಳಿದು, ಧೂಮಪಾನಿಗಳು ಮತ್ತು ಧೂಮಪಾನಿಗಳಲ್ಲದವರಿಗೆ ಸಂಭವನೀಯವಾಗಿ ಹಾನಿಯುಂಟು ಮಾಡಬಹುದು. ಥರ್ಡ್ ಹ್ಯಾಂಡ್ ಸ್ಮೋಕ್ಗೆ ಚರ್ಮವನ್ನು ತೀವ್ರವಾಗಿ ಒಡ್ಡಿಕೊಳ್ಳುವುದರಿಂದ ಕಾಂಟ್ಯಾಕ್ಟ್ ಡರ್ಮಟೈಟಿಸ್ ಮತ್ತು ಸೋರಿಯಾಸಿಸ್‌ನಂತಹ ಚರ್ಮದ ಕಾಯಿಲೆಗಳಿಗೆ ಕಾರಣವಾಗುವ ಬಯೋಮಾರ್ಕರ್‌ಗಳನ್ನು ಹೆಚ್ಚಿಸುತ್ತದೆ ಎಂದು ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ನೇತೃತ್ವದ ತಂಡ ಕಂಡುಹಿಡಿದಿದೆ.
ದಿ ಲ್ಯಾನ್ಸೆಟ್ ಫ್ಯಾಮಿಲಿ ಆಫ್ ಜರ್ನಲ್ಸ್ನ eBioMedicine ನಲ್ಲಿ ಪ್ರಕಟವಾದ ಸಂಶೋಧನಾ ವರದಿಯು ಟಿಎಚ್ಎಸ್ನಿಂದ ಮಾನವ ಚರ್ಮದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿದ ಪ್ರಥಮ ವರದಿಯಾಗಿದೆ.
ಮಾನವರ ತ್ವಚೆಯು ಟಿಎಚ್ಎಸ್ನ ಪ್ರಭಾವಕ್ಕೆ ಒಳಗಾಗುವುದರಿಂದ ಚರ್ಮಕ್ಕೆ ಉರಿಯನ್ನುಂಟು ಮಾಡುವ ಚರ್ಮರೋಗಗಳು ಆರಂಭವಾಗಬಹುದು ಮತ್ತು ಯುರಿನರಿ ಬಯೋಮಾರ್ಕರ್ಸ್ ಆಫ್ ಆಕ್ಸಿಡೇಟಿವ್ ಹಾರ್ಮ್ ಉಂಟಾಗಬಹುದು. ಇದರಿಂದ ನಂತರದ ಸಮಯದಲ್ಲಿ ಕ್ಯಾನ್ಸರ್, ಹೃದಯಬೇನೆ ಮತ್ತು ಅಥೆರೊಕ್ಲೆರೊಸಿಸ್ ರೋಗಗಳು ಕಾಡಬಹುದು ಎನ್ನುತ್ತಾರೆ ಶೇನ್ ಸಾಕಾಮಾಕಿ ಚಿಂಗ್. ಚಿಂಗ್ ಇವರು ಯುಸಿ ರಿವರ್ಸೈಡ್ ನಲ್ಲಿ ಈ ಮುಂಚೆ ಪದವಿ ಅಭ್ಯಾಸ ಮಾಡಿದ್ದಾರೆ. ಇವರು ಮಾರ್ಚ್ 2022 ರಲ್ಲಿ ಕೋಶ, ಆಣ್ವಿಕ ಮತ್ತು ಅಭಿವೃದ್ಧಿಯ ಜೀವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಚರ್ಮವನ್ನು ತೀವ್ರವಾಗಿ ಟಿಎಚ್ಎಸ್ಗೆ ಒಡ್ಡಿಕೊಳ್ಳುವುದರಿಂದ ಅದು ಸಿಗರೇಟ್ ಸೇದುವುದರಿಂದ ಆಗುವ ಹಾನಿಯಷ್ಟೇ ಹಾನಿಯನ್ನುಂಟು ಮಾಡಬಹುದು ಎನ್ನುತ್ತಾರೆ ಚಿಂಗ್. ಯುಸಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕ್ಲಿನಿಕಲ್ ತನಿಖೆಯು 22 ರಿಂದ 45 ವರ್ಷ ವಯಸ್ಸಿನ ಧೂಮಪಾನ ಮಾಡದ 10 ಆರೋಗ್ಯವಂತರನ್ನು ಒಳಗೊಂಡಿತ್ತು.
ಸಂಶೋಧನೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ವ್ಯಕ್ತಿಯು ಟಿಎಚ್ಎಸ್ ತುಂಬಿದ್ದ ಬಟ್ಟೆಯನ್ನು ಮೂರು ಗಂಟೆಗಳ ಕಾಲ ಧರಿಸಿದ್ದರು. ಈ ಮೂರು ಗಂಟೆಗಳ ಅವಧಿಯಲ್ಲಿ ಪ್ರತಿ ಗಂಟೆಗೆ 15 ನಿಮಿಷ ಕಾಲ ಅವರು ಟ್ರೇಡ್ಮಿಲ್ ನಡೆದರು ಅಥವಾ ಓಡಿದರು. ಈ ಮೂಲಕ ಬೆವರುವಿಕೆಯನ್ನು ಪ್ರೇರೇಪಿಸುವ ಮತ್ತು ಚರ್ಮದ ಮೂಲಕ THS ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಯೋಗ ಮಾಡಲಾಯಿತು.
ಭಾಗವಹಿಸುವವರಿಗೆ ತಮ್ಮ ಬಟ್ಟೆಯಲ್ಲಿ ಟಿಎಚ್ಎಸ್ ಇದೆ ಎಂದು ತಿಳಿದಿರಲಿಲ್ಲ. ಟಿಎಚ್ಎಸ್ ನಿಂದ ಪ್ರೇರಿತವಾದ ಪ್ರೋಟೀನ್ ಬದಲಾವಣೆಗಳು ಮತ್ತು ಆಕ್ಸಿಡೇಟಿವ್ ಒತ್ತಡದ ಗುರುತುಗಳನ್ನು ಗುರುತಿಸಲು ರಕ್ತ ಮತ್ತು ಮೂತ್ರದ ಮಾದರಿಗಳನ್ನು ಭಾಗವಹಿಸುವವರಿಂದ ನಿಯಮಿತ ಮಧ್ಯಂತರದಲ್ಲಿ ಸಂಗ್ರಹಿಸಲಾಯಿತು. ಕಂಟ್ರೋಲ್ ಎಕ್ಸ್ಪೋಜರ್ ನಲ್ಲಿ ಭಾಗವಹಿಸಿದವರು ಸ್ವಚ್ಛ ಬಟ್ಟೆಯನ್ನು ಧರಿಸಿದ್ದರು. ತೀವ್ರವಾದ ಟಿಎಚ್ಎಸ್ ಪ್ರಭಾವದಿಂದ ಡಿಎನ್‌ಎ, ಲಿಪಿಡ್‌ಗಳು ಮತ್ತು ಪ್ರೊಟೀನ್‌ಗಳಿಗೆ urinary biomarkers of oxidative ಹಾನಿ ಹೆಚ್ಚಾಗಿರುವುದು ಈ ಸಂಶೋಧನೆಯಲ್ಲಿ ತಿಳಿದುಬಂದಿತು ಎಂದು ಚಿಂಗ್ ತಿಳಿಸಿದ್ದಾರೆ.
ಸಿಗರೇಟ್ ಸೇದುವವರು ಈ ಬಯೋಮಾರ್ಕರ್‌ಗಳಲ್ಲಿ ಅದೇ ತೀವ್ರತೆಯನ್ನು ತೋರಿಸುತ್ತಾರೆ. ನಮ್ಮ ಸಂಶೋಧನೆಗಳು ಟಿಎಚ್ಎಸ್ ಗೆ ಒಡ್ಡಿಕೊಂಡ ರೋಗಿಗಳನ್ನು ಪತ್ತೆಹಚ್ಚಲು ವೈದ್ಯರಿಗೆ ಸಹಾಯ ಮಾಡಬಹುದು ಮತ್ತು ಟಿಎಚ್ಎಸ್ ನಿಂದ ಕಲುಷಿತಗೊಂಡ ಒಳಾಂಗಣ ಪರಿಸರಗಳ ಪರಿಹಾರದೊಂದಿಗೆ ವ್ಯವಹರಿಸುವಾಗ ನಿಯಂತ್ರಕ ನೀತಿಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಚಿಂಗ್ ತಿಳಿಸಿದರು.
ಮಾನವರ ಆರೋಗ್ಯದ ಮೇಲೆ ಟಿಎಚ್ಎಸ್ ಪರಿಣಾಮದ ಬಗ್ಗೆ ಜ್ಞಾನದ ಕೊರತೆಯಿದೆ. ನೀವು ಧೂಮಪಾನಿಯೊಬ್ಬ ಬಳಸಿದ ಕಾರನ್ನು ಖರೀದಿಸಿದರೆ, ನೀವು ಕೆಲ ಆರೋಗ್ಯದ ಅಪಾಯ ಎದುರಿಸಬಹುದು. ನೀವು ಧೂಮಪಾನಕ್ಕೆ ಅನುಮತಿ ಇರುವ ಕ್ಯಾಸಿನೊಗೆ ಹೋದರೆ, ನೀವು ನಿಮ್ಮ ಚರ್ಮವನ್ನು ಟಿಎಚ್ಎಸ್ಗೆ ಒಡ್ಡುತ್ತಿದ್ದೀರಿ. ಹೋಟೆಲ್ ಕೋಣೆಗೂ ಈ ಮಾನದಂಡ ಅನ್ವಯಿಸುತ್ತದೆ ಎಂದು ವರದಿಯ ಸಹ ಲೇಖಕ ಟಾಲ್ಬೋಟ್ ಹೇಳಿದರು.
ಇದನ್ನೂ ಓದಿ: ನೀವು ಧೂಮಪಾನ ವ್ಯಸನಿಗಳೇ?.. ಇಲ್ಲಿದೆ ನೋಡಿ ಆಯುರ್ವೇದಿಕ್ ಸಿಗರೇಟ್