ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 31 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಸದ್ಯ ದೇಶದಲ್ಲಿ 249 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈವರೆಗಿನ ಒಟ್ಟು ಸಾವಿನ ಸಂಖ್ಯೆ 5,33,298 ಎಂದು ಭಾನುವಾರ ರಾತ್ರಿ 8 ಗಂಟೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಮಾಹಿತಿ ನೀಡಿದೆ.
ಶನಿವಾರ ದೇಶದಲ್ಲಿ 42 ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಯುಎಸ್, ಯುಕೆ, ಫ್ರಾನ್ಸ್, ಮಲೇಷಿಯಾ, ಆಸ್ಟ್ರೇಲಿಯಾ ಮತ್ತು ಫಿಲಿಪ್ಪೀನ್ಸ್ ಸೇರಿದಂತೆ ಹಲವೆಡೆ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದೆ.
ಸಾರ್ಸ್ ಕೋವ್ 2 ವೈರಸ್ ಹರಡುತ್ತಿದ್ದು, ವಿಕಸನಗೊಂಡು ಬದಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮರಿಯಾ ವನ್ ಕೆರಕೊವ್ ತಿಳಿಸಿದ್ದಾರೆ. ಇವರು ಕೋವಿಡ್ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಜಾಗತಿಕವಾಗಿ ಪ್ರಕರಣಗಳ ಏರಿಕೆ ಕುರಿತು ಮಾತನಾಡಿರುವ ಅವರು, ಕೋವಿಡ್ ಬೆದರಿಕೆ ಮುಂದುವರೆದಿದ್ದು, ಎಲ್ಲಾ ದೇಶಗಳಲ್ಲೂ ಪ್ರಸರಣಗೊಳ್ಳುತ್ತಿದೆ ಎಂದಿದ್ದಾರೆ.
ಜಗತ್ತು ಕೋವಿಡ್ನಿಂದ ಮುಂದೆ ಸಾಗಿದೆ. ಜನರು ತಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ವೈರಸ್ ಎಲ್ಲೂ ಹೋಗಿಲ್ಲ. ಇದು ಪ್ರಸರಣಗೊಳ್ಳುತ್ತದೆ. ಇದು ಬದಲಾಗುತ್ತಿದ್ದು, ಸಾಕಷ್ಟು ಹಾನಿ ಮಾಡಬಲ್ಲದು. ಇದನ್ನು ನಾವು ಕಣ್ಗಾವಲಿನಲ್ಲಿರಿಸಬೇಕು ಎಂದು ಎಚ್ಚರಿಸಿದ್ದಾರೆ.
ಜಾಗತಿಕವಾಗಿ ಕೋವಿಡ್-19 ಏರಿಕೆ: ಆಸ್ಟ್ರೇಲಿಯಾ ಉತ್ತರ ಭೂ ಪ್ರದೇಶದ ರೋಗ ನಿಯಂತ್ರಣ ಕೇಂದ್ರವು ಕಳೆದ ನಾಲ್ಕು ವಾರಗಳಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಜನರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ.
ಮಲೇಷಿಯಾದಲ್ಲಿ 2,305 ಕೋವಿಡ್ ಪ್ರಕರಣಗಳು ಕಳೆದ ವಾರ ದಾಖಲಾಗಿದ್ದು, ಶೇ 21ರಷ್ಟು ಏರಿಕೆಯಾಗಿವೆ. 21 ಓಮ್ರಿಕಾನ್ ಪ್ರಕರಣಗಳೂ ಇದರಲ್ಲಿ ಸೇರಿವೆ. ಫಿಲಿಪ್ಪೀನ್ಸ್ನಲ್ಲಿ 175 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಪ್ರಕರಣಗಳ ಪೈಕಿ ಬಿಎ.2.86 ಎಂಬ ಸಾಮಾನ್ಯ ತಳಿ ಕಂಡುಬಂದಿದ್ದು, ಜಾಗತಿಕವಾಗಿ ನಿಧಾನವಾಗಿ ಪ್ರಕರಣಗಳ ಏರಿಕೆಯಾಗುತ್ತಿದೆ. ಇದನ್ನು ಡಬ್ಲ್ಯೂಎಚ್ಒ ಆಸಕ್ತಿಯ ರೂಪಾಂತರ ಎಂದು ವರ್ಗೀಕರಿಸಿದೆ. ಇಜಿ.5 ಅನ್ನು ಎರಿಸ್ ಎಂದು ಕರೆಯಲಾಗಿದ್ದು, ಇದು ರೂಪಾಂತರ ಎಂದು ಡಬ್ಲೂಎಚ್ಒ ಆಗಸ್ಟ್ನಲ್ಲಿ ಹೇಳಿದೆ. ಪ್ರಸ್ತುತ ಜಾಗತಿಕವಾಗಿ ಅರ್ಧದಷ್ಟು ಪ್ರಮಾಣದಲ್ಲಿ ಕೋವಿಡ್ ರೂಪಾಂತರವಿದೆ.
ಯುರೋಪಿಯನ್ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಎಕ್ಸ್ಬಿಬಿ 1.5 ತಳಿ, ಇಜಿ.5 ಸದ್ಯ ಪ್ರಾಬಲ್ಯ ಹೊಂದಿದ್ದು, ಇಯು/ಇಇಎ ದೇಶದಲ್ಲಿ ಶೇ 67ರಷ್ಟು ಪ್ರಕರಣಗಳಿವೆ.
ಈ ನಡುವೆ ಭಾರತದಲ್ಲಿ ಒಟ್ಟಾರೆ 4.50 ಕೋಟಿ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಚೇತರಿಕೆ ಕಂಡವರ ಪ್ರಮಾಣ ಶೇ 98.81ರಷ್ಟಿದೆ. ಸಾವಿನ ದರ ಶೇ 1.19ರಷ್ಟಿದೆ. ಇದುವರೆಗೆ 220.67 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. (ಐಎಎನ್ಎಸ್)
ಇದನ್ನೂ ಓದಿ: ಚೀನಾ ನ್ಯೂಮೋನಿಯಾ ಪ್ರಕರಣ; ಭಾರತದಲ್ಲಿ ಕಣ್ಗಾವಲಿಗೆ ಕರೆ ನೀಡಿದ ವೈದ್ಯರು