ಮಧ್ಯರಾತ್ರಿಯಲ್ಲಿ ಎಚ್ಚರಗೊಂಡು ನೀವು ಗೊರಕೆ ಹೊಡೆಯುತ್ತಿರುವುದನ್ನು ಗಮನಿಸಿಕೊಂಡಿದ್ದೀರಾ? ಅಥವಾ ನಿಮ್ಮ ಪಕ್ಕದಲ್ಲಿ ಮಲಗಿರುವ ವ್ಯಕ್ತಿಗೆ ನೀವು ತುಂಬಾ ಜೋರಾಗಿ ಗೊರಕೆ ಹೊಡೆದು ಅವರ ನಿದ್ರೆಗೆ ಭಂಗ ತಂದಿದ್ದೀರಾ? ಮೊದಲು ನೀವು ಗೊರಕೆಗೆ ಹಲವು ಕಾರಣಗಳಿವೆ ಎಂದು ಅರ್ಥಮಾಡಿಕೊಳ್ಳಬೇಕು. ಸಾಮಾನ್ಯವಾಗಿ ಬೊಜ್ಜು ಮತ್ತು ಪ್ರತಿರೋಧಕ ಸ್ಲೀಪ್ ಅಪ್ನಿಯಾ ಇದಕ್ಕೆ ಮುಖ್ಯ ಕಾರಣ.
ಇತರರು ದೀರ್ಘಕಾಲದ ಮೂಗು ಕಟ್ಟುವಿಕೆ, ಅತಿಯಾದ ಮದ್ಯ ಸೇವನೆ, ಗರ್ಭಧಾರಣೆ ಸಮಯ, ನಿದ್ರೆ ಮಾತ್ರೆ ಅಥವಾ ಔಷಧಿಗಳು, ರಚನಾತ್ಮಕ ಸಮಸ್ಯೆಗಳು ಇತ್ಯಾದಿಗಳನ್ನು ಒಳಗೊಂಡಿರುತ್ತಾರೆ. ಗಂಟಲಿನ ಅಂಗಾಂಶಗಳಲ್ಲಿ ಕಂಪನ ಉಂಟಾದಾಗ ಗೊರಕೆ ಉಂಟಾಗುತ್ತದೆ. ಇದರ ಶಬ್ಧ, ಬಹಳ ಕಿರಿಕಿರಿ ಉಂಟು ಮಾಡುತ್ತದೆ. ನೀವೂ ಗೊರಕೆ ಸಮಸ್ಯೆ ಎದುರಿಸುತ್ತಿದ್ದರೆ ಚಿಂತಿಸಬೇಡಿ, ನಮ್ಮಲ್ಲಿ ಕೆಲವು ಸರಳ ಮತ್ತು ನೈಸರ್ಗಿಕ ಮಾರ್ಗಗಳಿವೆ. ಅವು ಗೊರಕೆ ಸಮಸ್ಯೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತವೆ.
- ಮಲಗುವ ಭಂಗಿ :
ನಿಮ್ಮ ಬೆನ್ನಿನ ಮೇಲೆ ಮಲಗಿದಾಗ ನೀವು ಸಾಕಷ್ಟು ಗೊರಕೆ ಹೊಡೆಯುವುದನ್ನು ಗಮನಿಸಬಹುದು. ಕಾರಣ, ನೀವು ನಿಮ್ಮ ಬೆನ್ನಿನ ಮೇಲೆ ಮಲಗಿದಾಗ, ಕೆಲವೊಮ್ಮೆ ನಾಲಿಗೆ ಬಾಯಿಯಲ್ಲಿ ಹಿಂದಕ್ಕೆ ಚಲಿಸುತ್ತದೆ, ಗಂಟಲಿನ ಮೂಲಕ ಗಾಳಿಯ ಹರಿವನ್ನು ಭಾಗಶಃ ತಡೆಯುತ್ತದೆ. ಆದ್ದರಿಂದ, ನಿಮ್ಮ ಮಲಗುವ ಭಂಗಿ ಬದಲಾಯಿಸಲು ಪ್ರಯತ್ನಿಸಿ. ಬೆನ್ನಿನ ಬದಲಿಗೆ ನಿಮ್ಮ ಬದಿ ಅಥವಾ ಸೈಡ್ನಲ್ಲಿ ಮಲಗಿಕೊಳ್ಳಿ. ನೀವು ದೇಹದ ಕೆಳಗೆ ದಿಂಬನ್ನು ಸಹ ಬಳಸಬಹುದು.
- ತೂಕ ಇಳಿಸಿ :
ಇತರರಿಗೆ ಹೋಲಿಸಿದರೆ ಅಧಿಕ ತೂಕ ಮತ್ತು ಬೊಜ್ಜು ಇರುವವರು ಗೊರಕೆ ಹೊಡೆಯುವ ಸಾಧ್ಯತೆ ಹೆಚ್ಚು. ನೀವು ಇತ್ತೀಚೆಗೆ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದರೆ ಮತ್ತು ಆ ಬಳಿಕ ಗೊರಕೆ ಹೊಡೆಯುವುದು ಹೆಚ್ಚಾಗಿದ್ದರೆ, ನೀವು ತೂಕ ಕಡಿಮೆ ಮಾಡಿಕೊಳ್ಳುವುದು ಉತ್ತಮ. ಅದಕ್ಕಾಗಿ ನೀವು ವ್ಯಾಯಾಮ ಹಾಗೂ ನಿಯಮಿತ ಡಯಟ್ ಮೊರೆ ಹೋಗಬಹುದು.
- ಮದ್ಯಪಾನ ನಿಲ್ಲಿಸಿ :
ಮಲಗುವ ಮುನ್ನ ಕುಡಿಯಬೇಡಿ. ವಿಶೇಷವಾಗಿ ಗೊರಕೆ ಸಮಸ್ಯೆ ಇರುವ ಜನರಿಗೆ ಮದ್ಯಸೇವನೆ ಒಳ್ಳೆಯದಲ್ಲ. ಆಲ್ಕೋಹಾಲ್ ನಿಮ್ಮ ಗಂಟಲಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಗೊರಕೆಗೆ ಕಾರಣವಾಗುತ್ತದೆ. ಹೀಗಾಗಿ, ಮಲಗುವ ಮುನ್ನ ಕನಿಷ್ಠ ಎರಡು ಗಂಟೆಗಳ ಮೊದಲು ಅದರ ಸೇವನೆ ಮಾಡಬೇಡಿ.
- ಮಲಗುವಾಗ ನಿಮ್ಮ ತಲೆಯನ್ನು ಎತ್ತರಿಸಿ:
ನಿಮ್ಮ ತಲೆಯ ಕೆಳಗಿರುವ ಹೆಚ್ಚುವರಿ ದಿಂಬು ಗೊರಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ವಾಯುಮಾರ್ಗಗಳನ್ನು ತೆರೆಯುವ ಮೂಲಕ ಕೇವಲ ನಾಲ್ಕು ಇಂಚುಗಳಷ್ಟು ತಲೆಯನ್ನು ಎತ್ತರಿಸುವುದು ಪರಿಹಾರವನ್ನು ನೀಡುತ್ತದೆ. ಆದರೆ, ಇದನ್ನು ಸರಿಯಾಗಿ ಮಾಡಬೇಕು. ಇಲ್ಲವಾದಲ್ಲಿ ಅದು ಕುತ್ತಿಗೆ ಮತ್ತು ಬೆನ್ನುನೋವಿಗೆ ಕಾರಣವಾಗಬಹುದು.
- ಹೈಡ್ರೇಟ್ ಆಗಿರಿ :
ನಿರ್ಜಲೀಕರಣವು ಲೋಳೆಯ ರಚನೆಗೆ ಕಾರಣವಾಗುತ್ತದೆ. ಇದು ಗೊರಕೆಗೆ ಮತ್ತಷ್ಟು ಕಾರಣವಾಗುತ್ತದೆ. ಆದ್ದರಿಂದ, ದಿನವಿಡೀ ಸಾಕಷ್ಟು ಜ್ಯೂಸ್ ಅಥವಾ ತಂಪುಪಾನೀಯಗಳನ್ನು ಕುಡಿಯಿರಿ, ವಿಶೇಷವಾಗಿ ನೀರು ಕುಡಿಯಿರಿ. ಆದರೆ, ಮಲಗುವ ಮುನ್ನ ಹೆಚ್ಚು ನೀರು ಕುಡಿಯಬೇಡಿ ಅಥವಾ ಅದು ನಿಮ್ಮ ನಿದ್ರೆಗೆ ಭಂಗ ತರುತ್ತದೆ.
- ಚೆನ್ನಾಗಿ ನಿದ್ರೆ ಮಾಡಿ :
ಸರಿಯಾದ ನಿದ್ರೆ ಬಹಳ ಮುಖ್ಯ. ಇದು ಗೊರಕೆಯನ್ನು ನಿಭಾಯಿಸಲು ಮಾತ್ರವಲ್ಲದೆ ಇತರ ವೈದ್ಯಕೀಯ ಸಮಸ್ಯೆಗಳನ್ನು ತಪ್ಪಿಸಲು ಸಹಕಾರಿ. ಇದರೊಂದಿಗೆ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳುವುದು ಅವಶ್ಯಕ. ಪ್ರತಿದಿನ ಕನಿಷ್ಠ 7-9 ಗಂಟೆಗಳ ಕಾಲ ನಿದ್ರೆ ಮಾಡಿ. ಆದರೆ, ನಿದ್ರೆ ಮಾತ್ರೆಗಳನ್ನು ಬಳಸಬೇಡಿ, ಅವು ಹೆಚ್ಚು ಗೊರಕೆಗೆ ಕಾರಣವಾಗಬಹುದು.
ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಬಹಳ ಸಹಾಯಕವಾಗುತ್ತದೆ. ಈ ನೈಸರ್ಗಿಕ ಮಾರ್ಗಗಳು ಸಹಾಯ ಮಾಡದಿದ್ದರೆ, ವೈದ್ಯರಿಂದ ಸಹಾಯ ಪಡೆಯಿರಿ. ನಿಮ್ಮ ಜೋರು ಗೊರಕೆಗೆ ಇನ್ನೂ ಕೆಲವು ಕಾರಣಗಳಿವೆ. ಅದಕ್ಕೆ ಔಷಧಿಗಳು ಮತ್ತು ಇತರ ವೈದ್ಯಕೀಯ ವಿಧಾನಗಳೊಂದಿಗೆ ಚಿಕಿತ್ಸೆ ನೀಡಬೇಕಾಗಬಹುದು. ಕೆಲವೊಮ್ಮೆ, ನಿಮ್ಮ ಗೊರಕೆಗಳು ಗಂಭೀರ ಆರೋಗ್ಯ ಸ್ಥಿತಿಯನ್ನು ಸಹ ಸೂಚಿಸಬಹುದು, ಈ ಸಂದರ್ಭದಲ್ಲಿ ತಜ್ಞರ ಸಲಹೆ ಅಗತ್ಯ.