ಮನುಷ್ಯನಿಗೆ ಮಾನಸಿಕ ಒತ್ತಡಗಳು ಹೆಚ್ಚು. ಕೆಲವೊಮ್ಮೆ ಅದೇ ಒತ್ತಡಗಳು ಭಾರವೆನಿಸಿದಾಗ ಖಿನ್ನತೆಗೆ ಒಳಗಾಗುತ್ತೇವೆ. ಹೆಚ್ಚಿನ ಕೆಲಸಗಳು, ಕೆಲವೊಮ್ಮೆ ಚುಚ್ಚು ಮಾತುಗಳು ಅಥವಾ ಇನ್ನಿತರ ಯಾವುದೋ ಕಾರಣಗಳಿಂದಾಗಿ ಮನುಷ್ಯ ಡಿಪ್ರೆಶನ್ಗೆ ಹೋಗುತ್ತಾನೆ. ಆದರೆ, ಇಂತಹ ಖಿನ್ನತೆಗಳು ನಿಮ್ಮ ಬಳಿ ಸುಳಿಯದಂತೆ ನೀವು ನೋಡಿಕೊಳ್ಳಬೇಕಾದರೆ ಮಾಡಬೇಕಾದದ್ದೇನು? ಮಾನಸಿಕ ಆರೋಗ್ಯಕ್ಕೆ ಸರಳ ಮತ್ತು ಪರಿಣಾಮಕಾರಿ ಉಪಾಯವನ್ನು ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ.
ನಾವು ಬೆಳಗ್ಗೆ ಎದ್ದಾಗಿನಿಂದ ಸೂರ್ಯನ ಬೆಳಕನ್ನೇ ಕಾಣುತ್ತೇವೆ. ಸಂಜೆಯವರೆಗೂ ಅದೇ ಬೆಳಕಿನ ನಡುವೆ ನಮ್ಮ ಕೆಲಸಗಳು ಮುಗಿಯುತ್ತವೆ. ರಾತ್ರಿಯಾಗುತ್ತಿದ್ದಂತೆ ಮೊಬೈಲ್, ಲ್ಯಾಪ್ಟಾಪ್ ಹಿಡಿದು ಕುಳಿತು ಬಿಡುತ್ತೇವೆ. ಅಲ್ಲೂ ಕೃತಕ ಬೆಳಕನ್ನು ಬಳಸಿಕೊಳ್ಳುತ್ತೇವೆ. ಸಂಜೆಯಾಗುತ್ತಿದ್ದಂತೆ ಮನೆಯೆಲ್ಲಾ ಲೈಟ್ ಉರಿಸಿ ಸೂರ್ಯನ ಬೆಳಕಿಗಿಂತ, ಕೃತಕ ಬೆಳಕಿನ ಮಧ್ಯೆಯೇ ಹೆಚ್ಚು ಸಮಯ ಕಳೆಯುತ್ತೇವೆ. ಆದರೆ, ಇದೇ ನಿಮ್ಮನ್ನು ಖಿನ್ನತೆಯತ್ತ ದೂಡುವಲ್ಲಿ ಯಶಸ್ವಿಯಾಗುತ್ತದೆ. ಹಾಗಾಗಿ ನೀವು ಹೆಚ್ಚು ನೈಸರ್ಗಿಕ ಬೆಳಕಿನಲ್ಲಿ ಕಾಲ ಕಳೆಯುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು.
ದೇಹದ ಜೈವಿಕ ಗಡಿಯಾರವು ನಮ್ಮ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನೈಸರ್ಗಿಕ ಬೆಳಕಿನ ಮೇಲೆ ಇದು ನಮ್ಮನ್ನು ನಿಯಂತ್ರಿಸುತ್ತದೆ. ವ್ಯಾಯಾಮ, ನಾವು ಮಾಡುವ ಕೆಲಸಗಳು ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತವೆಯಾದರೂ, ಪ್ರಮುಖವಾಗಿ ಪರಿಣಾಮ ಬೀರುವುದು ಬೆಳಕು ಮಾತ್ರ. ಅನೇಕ ಮಾನಸಿಕ ಸಮಸ್ಯೆಗಳಿಗೆ ಸರ್ಕಾಡಿಯನ್ ಗಡಿಯಾರವೇ ಅಡ್ಡಿಯಾಗುತ್ತದೆ. ಆದ್ದರಿಂದ ಡಿಪ್ರೆಶನ್ ಅನ್ನೋದು ಬಹುಬೇಗನೆ ಮನುಷ್ಯನಿಗೆ ಒಗ್ಗಿಬಿಡುತ್ತದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಮೊನಾಶ್ ವಿಶ್ವವಿದ್ಯಾಲಯದ ಸಂಶೋಧಕರು ಮಾನಸಿಕ ಅಸ್ವಸ್ಥತೆಯ ಮೇಲೆ ರಾತ್ರಿ ಮತ್ತು ಹಗಲು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಬಹುದೊಡ್ಡ ಅಧ್ಯಯನ ನಡೆಸಿದ್ದಾರೆ.
ಇದಕ್ಕಾಗಿ, ಯುಕೆ ಬಯೋಬ್ಯಾಕ್ನಿಂದ ಸುಮಾರು 87 ಸಾವಿರ ಜನರನ್ನು ಆರಿಸಿ, ಬೆಳಕು, ನಿದ್ರೆ, ದೈಹಿಕ ಚಟುವಟಿಕೆ ಮತ್ತು ಮಾನಸಿಕ ಆರೋಗ್ಯದ ಪರಿಣಾಮಗಳನ್ನು ಅತ್ಯಂತ ಆಳವಾಗಿ ವಿಶ್ಲೇಷಿಸಲಾಗಿದೆ. ಇವರಲ್ಲಿ ರಾತ್ರಿ ಹೊತ್ತು ಹೆಚ್ಚು ಪ್ರಮಾಣದಲ್ಲಿ ಕೃತಕ ಬೆಳಕಿಗೆ ಒಗ್ಗಿಕೊಂಡವರು ಶೇ 30ರಷ್ಟು ಬೆಳವಣಿಗೆಯ ಅಪಾಯ ಎದುರಿಸುತ್ತಿದ್ದಾರೆ ಎಂದು ಕಂಡು ಬಂದಿದೆ. ಅದೇ, ಹಗಲು ಬೆಳಕಿಗೆ ಒಡ್ಡಿಕೊಳ್ಳುವವರಿಗೆ ಖಿನ್ನತೆಯ ಅಪಾಯವು ಶೇ 20ರಷ್ಟು ಕಡಿಮೆಯಿದೆ ಎಂದು ವರದಿಯಾಗಿದೆ. ಸ್ವಯಂ ಗಾಯ, ಭ್ರಮೆ, ಆಗಾಗ ಮನಸ್ಥಿತಿ ಬದಲಾವಣೆ, ಆತಂಕ, ಆಘಾತಕಾರಿ ಒತ್ತಡ ಇವು ಮಾನಸಿಕ ಸಮಸ್ಯೆಗಳ ಮತ್ತೊಂದು ರೂಪ.
ಈಗಿನ ಆಧುನಿಕ ಜೀವನದಲ್ಲಿ ಫೋನ್ಗಳು, ಕಂಪ್ಯೂಟರ್ಗಳು ಮತ್ತು ಟಿವಿ ಪರದೆಯಂತಹ ಕೃತಕ ಬೆಳಕಿನಲ್ಲಿ ನಾವೆಲ್ಲರೂ ಸಾಕಷ್ಟು ಸಮಯ ಕಳೆಯುತ್ತೇವೆ. ಇದು ನಮ್ಮ ಜೈವಿಕ ಗಡಿಯಾರವನ್ನೇ ಬದಲಾಯಿಸುತ್ತದೆ. ಇದು ಮೆದುಳಿಗೆ ಹೆಚ್ಚು ಸವಾಲು ಒಡ್ಡುತ್ತದೆ. ಪ್ರಸ್ತುತ ರಾತ್ರಿ ಮಾತ್ರವಲ್ಲದೇ, ಮನೆ ಮತ್ತು ಆಫೀಸುಗಳಲ್ಲಿ ಕೃತಕ ಬೆಳಕಿನ ಮಧ್ಯೆಯೇ ಹೆಚ್ಚು ಕಾಲ ಕಳೆಯುತ್ತೇವೆ. ಈ ಕೃತಕ ಬೆಳಕು ಹಗಲಿನಲ್ಲಿ ಮಂದವಾಗಿರುತ್ತದೆ ಮತ್ತು ರಾತ್ರಿಯಲ್ಲಿ ಹೆಚ್ಚು ಪ್ರಕಾಶ ಮಾನವಾಗಿರುತ್ತದೆ. ಇದು ದೇಹವನ್ನು ಗೊಂದಲಕ್ಕೆ ದೂಡುವುದರ ಜೊತೆಗೆ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ಮಾನಸಿಕ ಆರೋಗ್ಯಕ್ಕಾಗಿ ಹೆಚ್ಚು ನೈಸರ್ಗಿಕ ಬೆಳಕಿಗೆ ಒಗ್ಗಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಸಂಶೋಧಕರು.
ಇದನ್ನೂ ಓದಿ: ಇರಲಿ ಎಚ್ಚರ; ಪಟಾಕಿಯಿಂದ ಗಾಯವಾದಾಗ ಏನು ಮಾಡಬೇಕು..? ಇಲ್ಲಿದೆ ಮಾಹಿತಿ!