ಮಹಿಳೆಯೋರ್ವಳು ಮುಟ್ಟಾಗುವ ಚಕ್ರವು ಶಾಶ್ವತವಾಗಿ ನಿಂತು ಹೋಗುವ ಪ್ರಕ್ರಿಯೆಯನ್ನು ಮುಟ್ಟು ನಿಲ್ಲುವ ಕಾಲ ಅಥವಾ ರಜೋನಿವೃತ್ತಿ ಎಂದು ಕರೆಯುತ್ತಾರೆ. ಇದನ್ನೇ ಇಂಗ್ಲಿಷಿನಲ್ಲಿ ಮೆನೊಪಾಸ್ ಎನ್ನುತ್ತಾರೆ. ಸಾಮಾನ್ಯವಾಗಿ ಮಹಿಳೆಯೋರ್ವಳ 40 ರಿಂದ 50ನೇ ವಯಸ್ಸಿನ ಮಧ್ಯೆ ಮೆನೊಪಾಸ್ ಘಟಿಸುತ್ತದೆ. ಇನ್ನು, ಕೆಲ ಮಹಿಳೆಯರಲ್ಲಿ ಈ ವಯಸ್ಸಿಗೆ ಮುನ್ನವೇ ಮೆನೊಪಾಸ್ ಆಗಬಹುದು. ಇದನ್ನು ಅಕಾಲಿಕ ಮೆನೊಪಾಸ್ (Premature Menopause) ಎಂದು ಕರೆಯಲಾಗುತ್ತದೆ.
40 ವಯಸ್ಸಿಗೆ ಮುನ್ನವೇ ಋತುಚಕ್ರಗಳು ನಿಂತು ಹೋದರೆ ಅದು ಅಕಾಲಿಕ ಮೆನೊಪಾಸ್ ಆಗಿರುತ್ತದೆ. ಹಾಗೆಯೇ 45 ವಯಸ್ಸಿಗೆ ಮುನ್ನವೇ ಮೆನೊಪಾಸ್ ಆದಲ್ಲಿ ಅದನ್ನು ಬೇಗನೆ ಆದ ಮೆನೊಪಾಸ್ (Early Menopause) ಎನ್ನಲಾಗುತ್ತದೆ.
ಅಕಾಲಿಕ ಮೆನೊಪಾಸ್ ಕುರಿತಾಗಿ ಆ್ಯನಲ್ಸ್ ಆ್ಯಂಡ್ ಹೆಲ್ತ್ ಸೈನ್ಸ್ ರಿಸರ್ಚ್ ಎಂಬ ವೈದ್ಯಕೀಯ ಜರ್ನಲ್ನಲ್ಲಿ ಅಧ್ಯಯನಾ ವರದಿಯೊಂದನ್ನು ಪ್ರಕಟಿಸಲಾಗಿದೆ. “ಅವಧಿಪೂರ್ವವಾಗಿ ಅಂದರೆ 40 ವಯಸ್ಸಿಗೂ ಮುಂಚೆಯೇ ಅಂಡಾಶಯದ ವೈಫಲ್ಯವಾಗುವುದನ್ನು ಅಕಾಲಿಕ ಮೆನೊಪಾಸ್ ಎಂದು ಹೇಳಬಹುದು. ಒಟ್ಟಾರೆ 40 ವರ್ಷ ಕೆಳಗಿನ ಶೇ 1 ರಷ್ಟು ಮಹಿಳೆಯರಿಗೆ ಇದು ಘಟಿಸುತ್ತದೆ. ಹೀಗಾದಾಗ ಅಕಾಲಿಕ ಮೃತ್ಯು, ಮನೋ ಲೈಂಗಿಕ ಸಮಸ್ಯೆಗಳು, ಭಾವನೆಗಳಲ್ಲಿ ಏರುಪೇರಾಗುವುದು, ಆಸ್ಟಿಯೊಪೊರೊಸಿಸ್, ರಕ್ತಹೀನತೆಯ ಹೃದಯ ಕಾಯಿಲೆ ಮತ್ತು ಬಂಜೆತನಗಳ ಸಮಸ್ಯೆಗಳು ಕಾಡಬಹುದು.” ಎಂದು ಸಂಶೋಧನಾ ವರದಿ ಹೇಳುತ್ತದೆ.
ಮಹಿಳೆಯಲ್ಲಿ ಅಕಾಲಿಕ ಮೆನೊಪಾಸ್ ಆಗುವುದಕ್ಕೆ ಈಸ್ಟ್ರೊಜೆನ್ ಹಾರ್ಮೋನಿನ ಕೊರತೆಯೇ ಮುಖ್ಯ ಕಾರಣವಾಗಿರುತ್ತದೆ. ಹೃದಯನಾಳ ಕಾಯಿಲೆ ಅಥವಾ ನರರೋಗ, ಮಾನಸಿಕ ಅಸ್ವಸ್ಥತೆ ಮುಂತಾದ ಕಾರಣಗಳಿಂದಲೂ ಅಕಾಲಿಕ ಮೆನೊಪಾಸ್ ಆಗಬಹುದು. ಹಾಗಾದರೆ ಅಕಾಲಿಕ ಮೆನೊಪಾಸ್ ಲಕ್ಷಣಗಳೇನು ಮತ್ತು ಅದನ್ನು ಸೂಕ್ತವಾಗಿ ನಿರ್ವಹಿಸುವ ಕ್ರಮಗಳೇನು ಎಂಬ ಬಗ್ಗೆ ಒಂದಿಷ್ಟು ತಿಳಿಯೋಣ.
ಅಕಾಲಿಕ ಮೆನೊಪಾಸ್ ಆಗಲು ಸಂಭವನೀಯ ಕಾರಣಗಳು
- ಆನುವಂಶಿಕ ವೈಪರೀತ್ಯಗಳು: ಲೈಂಗಿಕ ವರ್ಣತಂತುಗಳ ಅಸಹಜತೆಯು ಅಕಾಲಿಕ ಮೆನೊಪಾಸ್ಗೆ ಕಾರಣವಾಗಬಹುದು.
- ಸ್ವಯಂ-ಪ್ರತಿರಕ್ಷಣಾ ಕಾಯಿಲೆಗಳು: ಎಸ್‌ಎಲ್‌ಇ ಅಂದರೆ ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್, ಥೈರಾಯ್ಡಿಟಿಸ್ಇ ತ್ಯಾದಿ ಕಾಯಿಲೆಗಳು.
- ಕೀಮೋಥೆರಪಿ ಮತ್ತು ರೇಡಿಯೊಥೆರಪಿ: ಈ ಚಿಕಿತ್ಸೆಗಳು ಮಹಿಳೆಯರಲ್ಲಿ ಅಕಾಲಿಕ ಮೆನೊಪಾಸ್ಗೆ ಕಾರಣವಾಗಬಹುದು.
- ಅಂಡಾಶಯ ಅಥವಾ ಗರ್ಭಾಶಯವನ್ನು ತೆಗೆಯುವುದು: ಅಂಡಾಶಯ ಮತ್ತು ಗರ್ಭಾಶಯವನ್ನು ತೆಗೆಯುವುದು ಎರಡೂ ಮುಟ್ಟನ್ನು ಕೊನೆಗೊಳಿಸುತ್ತವೆಮತ್ತು ಅಕಾಲಿಕ ಮೆನೊಪಾಸ್ಗೆ ಕಾರಣವಾಗುತ್ತದೆ.
- ಕುಟುಂಬದ ಇತಿಹಾಸ: ಚಿಕ್ಕ ವಯಸ್ಸಿನಲ್ಲಿಯೇ ಮೆನೊಪಾಸ್ಆಗುವ ಕುಟುಂಬದ ಇತಿಹಾಸ ಹೊಂದಿದ್ದರೆ ಅಕಾಲಿಕ ಮೆನೊಪಾಸ್ ಸಂಭವಿಸಬಹುದು.
- ಧೂಮಪಾನ: ಧೂಮಪಾನವು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಧೂಮಪಾನದ ಮೂಲಕ ತಂಬಾಕಿನಂತಹ ವಿಷಕಾರಿ ಪದಾರ್ಥಗಳ ಸೇವನೆಯು ಈ ಸ್ಥಿತಿಗೆ ಕಾರಣವಾಗಬಹುದು.
- ಮಧುಮೇಹ: ಮಧುಮೇಹದಿಂದಾಗಿ ಮಹಿಳೆಯರು ಅಕಾಲಿಕ ಮೆನೊಪಾಸ್ ಅನುಭವಿಸಬಹುದು.
ಅಕಾಲಿಕ ಮೆನೊಪಾಸ್ನಿಂದಾಗುವ ಅಪಾಯಗಳು
ಅಕಾಲಿಕ ಮೆನೊಪಾಸ್ ಅನುಭವಿಸುವ ಮಹಿಳೆಯರಿಗೆ ಮಾನಸಿಕ ಅಸ್ವಸ್ಥತೆ, ಆಸ್ಟಿಯೊಪೊರೋಸಿಸ್, ಹೃದ್ರೋಗ ಮತ್ತು ಜೀವನದ ಗುಣಮಟ್ಟ ಕಡಿಮೆಯಾಗುವ ಅಪಾಯವಿದೆ. ಅಧ್ಯಯನದ ಪ್ರಕಾರ, ಸ್ತನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ ಮತ್ತು ಬಂಜೆತನಕ್ಕೂ ಕಾರಣವಾಗುತ್ತದೆ.
ಅಕಾಲಿಕ ಅಂಡಾಶಯ ವೈಫಲ್ಯ ಹೊಂದುವ ಮಹಿಳೆಯರ ಸಾಮಾನ್ಯ ಮತ್ತು ಲೈಂಗಿಕ ಆರೋಗ್ಯ ಕುಂಠಿತಗೊಳ್ಳುತ್ತದೆ. ಅವರ ಲೈಂಗಿಕ ಜೀವನದಲ್ಲಿ ಅತೃಪ್ತಿ ಕಾಣಿಸಿಕೊಳ್ಳಬಹುದು.
ಅಕಾಲಿಕ ಮೆನೊಪಾಸ್ ನಿರ್ವಹಣೆ
ಅಕಾಲಿಕ ಮೆನೊಪಾಸ್ ತಡೆಯಲು ಸಾಧ್ಯವಿಲ್ಲ, ಆದರೆಅದನ್ನು ನಿರ್ವಹಿಸುವ ಮಾರ್ಗಗಳಿವೆ. ಅಕಾಲಿಕ ಮೆನೊಪಾಸ್ ಹೊಂದಿರುವ ಮಹಿಳೆಯರಿಗೆ ಈಸ್ಟ್ರೊಜೆನ್ ರಿಪ್ಲೇಸಮೆಂಟ್ ಚಿಕಿತ್ಸೆ ನೀಡುವುದು ಉತ್ತಮ. ಆಸ್ಟಿಯೊಪೊರೋಸಿಸ್ ತಪ್ಪಿಸಲುಹೈಪೋ ಈಸ್ಟ್ರೊಜೆನೆಮಿಯಾ ಇರುವ ಮಹಿಳೆಯರಿಗೆ ಹಾರ್ಮೋನ್ರಿಪ್ಲೇಸಮೆಂಟ್ ಥೆರಪಿ ಅಗತ್ಯವಿರುತ್ತದೆ. ಸಾಮಾನ್ಯ ಈಸ್ಟ್ರೊಜೆನ್ ಮಟ್ಟವನ್ನು ಪುನಃ ಸ್ಥಾಪಿಸುವುದರಿಂದ ಹೃದಯ ಸಂಬಂಧಿ ಕಾಯಿಲೆ, ಆಸ್ಟಿಯೊಪೊರೋಸಿಸ್ ಮತ್ತು ಬುದ್ಧಿಮಾಂದ್ಯತೆ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಎಂಬುದಕ್ಕೆ ಪುರಾವೆಗಳಿವೆ. ಅಕಾಲಿಕ ಮೆನೊಪಾಸ್ ಆದಾಗ ಕೆಳಗೆ ತಿಳಿಸಲಾದ ಕೆಲ ನಿರ್ವಹಣಾ ಕ್ರಮಗಳನ್ನುಕೈಗೊಳ್ಳಬಹುದು.
- ಯೋನಿ ಶುಷ್ಕತೆಯನ್ನು ತಡೆಗಟ್ಟಲು ಯೋನಿ ಜೆಲ್ ಮತ್ತು ಕ್ರೀಮ್‌ಗಳನ್ನು ಬಳಸಬಹುದು.
- ಸರಿಯಾದ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಕ್ಯಾಲ್ಸಿಯಂ, ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಡಿ ಪೂರಕಗಳನ್ನು ನೀಡಬಹುದು.
- ಅಕಾಲಿಕ ಮೆನೊಪಾಸ್ ಆದ ಮಹಿಳೆಯರಿಗೆ ನಿಯಮಿತ ವ್ಯಾಯಾಮ ಅತ್ಯಗತ್ಯ.
- ದಿನಕ್ಕೆ ಎರಡು ಬಾರಿಯಾದರೂ ಹಾಲು ಮತ್ತು ಇತರ ಕ್ಯಾಲ್ಸಿಯಂ ಭರಿತ ಆಹಾರವನ್ನು ನಿಯಮಿತವಾಗಿ ಸೇವಿಸುವುದು
- ಫೈಬರ್ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ.
- ಸಕ್ಕರೆ ಸೇವನೆಯನ್ನು ಮಿತಿಗೊಳಿಸಿ.
- ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನ ತಪ್ಪಿಸಿ.