ಹೆಣ್ಣಿಗೆ ಕೆಲವೊಂದು ಸಮಸ್ಯೆಗಳು ಕಿರಿಕಿರಿ ಅನಿಸಿಬಿಡುತ್ತದೆ. ಅದರಲ್ಲೂ ಪ್ರತಿ ತಿಂಗಳು ಕಾಡುವ ಮುಟ್ಟಿನ ಸಮಸ್ಯೆಯಂತೂ ಭಯಾನಕವಾಗಿರುತ್ತದೆ. ದೇಹದಲ್ಲಾಗುವ ಬದಲಾವಣೆಗಳಿಗೆ ಹುಡುಗಿಯರು, ಮಹಿಳೆಯರು ಹೊಂದಿಕೊಳ್ಳಬೇಕಾಗುತ್ತದೆ. ಪ್ರತಿ ಹೆಣ್ಣು ಕೂಡ ಈ ಪ್ರಕ್ರಿಯೆಯನ್ನು ಅನುಭವಿಸುತ್ತಾಳೆ ಮತ್ತು ಇದು ಪ್ರಬುದ್ಧತೆಯ ವಿಶಿಷ್ಟ ಅಂಶವಾಗಿದೆ. ಈ ಸಮಯದಲ್ಲಿ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಉತ್ತಮ. ಅವುಗಳಲ್ಲಿ ಪ್ರಮುಖವಾಗಿ ಕಷ್ಟಕರವಲ್ಲದ ಮತ್ತು ಹಿತಕರವಾಗಿರುವ 5 ನಿಯಮಗಳನ್ನು ಅನುಸರಿಸುವುದು ಒಳ್ಳೆಯದು.
'ಅಗತ್ಯ ವಸ್ತುಗಳನ್ನು ಇರಿಸಿಕೊಳ್ಳಿ..' ತಿಂಗಳು ಮುಟ್ಟಿನ ದಿನ ಸಮೀಪಿಸುವ ಸಮಯಕ್ಕೆ ಮನೆಯಲ್ಲಿ ಅಥವಾ ನಿಮ್ಮ ಬ್ಯಾಗ್ನಲ್ಲಿ ಸುಲಭವಾಗಿ ಸಿಗುವಂತೆ ಸ್ಯಾನಿಟರಿ ನ್ಯಾಪ್ಕಿನ್ ಅಥವಾ ಟ್ಯಾಂಪೂನ್ಗಳನ್ನು ಇಟ್ಟುಕೊಂಡಿದ್ದೀರಾ? ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಈ ಕ್ರಮವನ್ನು ಅನುಸರಿಸಿದರೆ, ನಿಮ್ಮ ಮನಸ್ಸಿಗೆ ಸ್ಪಲ್ಪ ನೆಮ್ಮದಿ ಅನಿಸುತ್ತದೆ. ಅಲ್ಲದೇ ನಿಮ್ಮ ಅವಧಿಯನ್ನು ಆತ್ಮವಿಶ್ವಾಸದಿಂದ ನಿರ್ವಹಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ನೋವು ನಿವಾರಕ ಟ್ಯಾಬ್ಲೆಟ್ ಅನ್ನು ಇಟ್ಟುಕೊಳ್ಳುವುದರಿಂದ ಅಸ್ವಸ್ಥತೆ ಅಥವಾ ಸೆಳೆತವನ್ನು ನಿವಾರಿಸಬಹುದು.
'ತಿಂಗಳ ದಿನಾಂಕವನ್ನು ನೆನಪಿಟ್ಟುಕೊಳ್ಳಿ..' ನಿಮ್ಮ ಋತುಚಕ್ರದ ದಿನಾಂಕದ ಬಗ್ಗೆ ನಿಗಾ ಇಡಬೇಕು. ಹಾಗಿದ್ದಲ್ಲಿ ಮುಂದಿನ ತಿಂಗಳ ದಿನಾಂಕ ಯಾವುದೆಂದು ಊಹಿಸಲು ಸುಲಭವಾಗುತ್ತದೆ. ಇದು ಮುಂಚಿತವಾಗಿ ತಯಾರಿಗಳನ್ನು ಮಾಡಿಕೊಳ್ಳಲು ಸಹಕಾರಿ. ದಿನಾಂಕ ನೆನಪಿಟ್ಟುಕೊಳ್ಳಲು ಸುಲಭ ಕ್ರಮವನ್ನು ಅನುಸರಿಸಬಹುದು, ಅದಕ್ಕಾಗಿ ನೀವು ಟ್ರ್ಯಾಕಿಂಗ್ ಅಪ್ಲಿಕೇಶನ್ ಅನ್ನು ಬಳಸಬಹುದು. ಇಲ್ಲವಾದಲ್ಲಿ ಕ್ಯಾಲೆಂಡರ್ ಇರಿಸಿಕೊಳ್ಳಿ ಅಥವಾ ಪ್ರತಿ ತಿಂಗಳು ನಿಮ್ಮ ಅವಧಿಗಳ ಪ್ರಾರಂಭ ಮತ್ತು ಅಂತ್ಯದ ದಿನಾಂಕವನ್ನು ಟಿಪ್ಪಣಿ ಮಾಡಿಟ್ಟುಕೊಳ್ಳಿ.
'ಸೆಳೆತ ಕಡಿಮೆ ಮಾಡಲು ಇದನ್ನು ಬಳಸಿ..' ಮುಟ್ಟಿನ ಸೆಳೆತವು ಅಹಿತಕರವಾಗಿರುತ್ತದೆ ಮತ್ತು ಕೆಲವೊಮ್ಮೆ ನಮ್ಮನ್ನು ದುರ್ಬಲಗೊಳಿಸುತ್ತದೆ. ಸೆಳೆತವನನ್ನು ಕಡಿಮೆ ಮಾಡಲು ಸಹಾಯ ಮಾಡುವ ಅನೇಕ ನೋವು ನಿವಾರಕಗಳಿವೆ. ಹೆಚ್ಚುವರಿಯಾಗಿಯಾಗಿ ಹೀಟಿಂಗ್ ಪ್ಯಾಡ್, ಬೆಚ್ಚಗಿನ ಸ್ನಾನ ಅಥವಾ ಶಾಟ್ ವಾಟರ್ ಬಾಟಲ್ ಸಹ ಸೆಳೆತವನ್ನು ನಿವಾರಿಸಲು ಸಹಾಯ ಮಾಡುತ್ತದೆ.
'ದೇಹದ ಕಾಳಜಿ ಮುಖ್ಯ..' ನೀವು ಈ ಅವಧಿಯಲ್ಲಿ ಬಹಳಷ್ಟು ದೈಹಿಕವಾಗಿ ಕುಗ್ಗಿರುತ್ತೀರಿ ಮತ್ತು ಭಾವನಾತ್ಮಕವಾಗಿ ದುರ್ಬಲರಾಗಿರುತ್ತೀರಿ. ಅದಕ್ಕಾಗಿ ಆರೋಗ್ಯವನ್ನು ಕಾಪಾಡಲು ಚೆನ್ನಾಗಿ ತಿನ್ನುವುದು ಮತ್ತು ಸಾಕಷ್ಟು ವಿಶ್ರಾಂತಿ ಪಡೆಯುವ ಮೂಲಕ ನಿಮ್ಮ ದೇಹವನ್ನು ಕಾಳಜಿ ವಹಿಸುವುದು ಮುಖ್ಯವಾಗಿದೆ. ನಿಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒತ್ತಡವನ್ನು ಕಡಿಮೆ ಮಾಡಲು ಲಘು ವ್ಯಾಯಾಮ ಅಥವಾ ಯೋಗವನ್ನು ಮಾಡಲು ಪ್ರಯತ್ನಿಸಬಹುದು.
'ಯಾರೊಂದಿಗಾದರೂ ಮಾತನಾಡುತ್ತಿರಿ..' ತಿಂಗಳು ಮುಟ್ಟಿನ ಸಮಯದಲ್ಲಿ ಮನಸ್ಸು ದುರ್ಬಲವಾಗಿರುತ್ತದೆ. ಈ ವೇಳೆ ಯಾರೊಂದಿಗಾದರೂ ಮಾತನಾಡುತ್ತಿರುವುದು ಉತ್ತಮ. ನಿಮ್ಮ ಪೋಷಕರು, ಶಿಕ್ಷಕರು ಅಥವಾ ವೈದ್ಯರಾಗಲಿ ಅವರ ಜೊತೆಗಿನ ಸಂಭಾಷಣೆಯಿಂದ ನಿಮ್ಮ ಆತಂಕ ಅಥವಾ ಗೊಂದಲ ನಿವಾರಣೆಯಾಗಲು ಸಹಾಯವಾಗುತ್ತದೆ. ನಿಮ್ಮ ಅವಧಿಯ ಬಗ್ಗೆ ಯಾವುದೇ ಪ್ರಶ್ನೆಗಳು ಕೇಳಲು ಇದ್ದಲ್ಲಿ ಹಿಂಜರಿಯಬೇಡಿ. ಹೆಚ್ಚುವರಿಯಾಗಿ ಹುಡುಗಿಯರು ಮತ್ತು ಮಹಿಳೆಯರನ್ನು ಮುಟ್ಟಿನ ಸಮಯದಲ್ಲಿ ಸಬಲೀಕರಣಗೊಳಿಸಲು ಕೆಲವೊಂದು ಸಂಸ್ಥೆಗಳಿವೆ. ಅವರೊಂದಿಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಇದೆಲ್ಲವೂ ನಿಮ್ಮ ಮೊದಲ ಅವಧಿಯಲ್ಲಿ ಗೊಂದಲವನ್ನು ಉಂಟುಮಾಡಬಹುದು. ಆದರೆ ಕ್ರಮೇಣ ಈ ರೀತಿಯ ಮುಂಜಾಗ್ರತಾ ಕ್ರಮಗಳು ಅಥವಾ ಸಲಹೆಗಳು ನಿಮ್ಮ ತಿಂಗಳ ದಿನಚರಿಯಾಗಿಬಿಡುತ್ತದೆ. ಅಲ್ಲದೇ ಈ ವಿಚಾರವಾಗಿ ಮಾತನಾಡಲು ಹಿಂಜರಿಯಬೇಡಿ, ಇದು ಸ್ವಾಭಾವಿಕ ಪ್ರಕ್ರಿಯೆ. ಜೊತೆಗೆ ನೀವು ನಂಬುವ ವ್ಯಕ್ತಿಯೊಂದಿಗೆ ಈ ಸಮಯದ ತೊಂದರೆಗಳನ್ನು ನಿರಾಳವಾಗಿ ಹಂಚಿಕೊಳ್ಳಿ. ಇದು ನಿಮ್ಮನ್ನು ಮತ್ತಷ್ಟು ಆತ್ಮವಿಶ್ವಾಸದಿಂದಿರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಋತುಚಕ್ರ ಸಮಯದಲ್ಲಿ ಅಗತ್ಯವಾಗಿ ಬೇಕಾಗಿರುವ ಸೌಲಭ್ಯಗಳಿಂದ ಮಹಿಳೆಯರು ವಂಚಿತ: ಋತುಚಕ್ರ ಬಡತನ ಎಂದರೇನು?