ನ್ಯೂಯಾರ್ಕ್: ಒಮಿಕ್ರಾನ್ ರೂಪಾಂತರದ ಕೋವಿಡ್ನಿಂದ ಸೋಂಕಿತರಾದ ಮಕ್ಕಳು ಪಾಸಿಟಿವ್ ವರದಿ ಬಂದ ಸರಾಸರಿ ಮೂರು ದಿನಗಳವರೆಗೆ ಸೋಂಕು ಹೊಂದಿರುತ್ತಾರೆ ಎಂದು ಭಾರತೀಯ ಮೂಲದ ವಿಜ್ಞಾನಿ ಕಂಡುಹಿಡಿದಿದ್ದಾರೆ. ಇಂಥ ಸಂದರ್ಭದಲ್ಲಿ ಸೋಂಕಿತ ಮಗು ಐದು ದಿನ ಶಾಲೆಗೆ ಹೋಗದಿದ್ದರೆ ಸಾಕು ಎಂದು ಅವರು ಹೇಳಿದ್ದಾರೆ.
"ಮಕ್ಕಳಿಗೆ ಒಮಿಕ್ರಾನ್ ಕೋವಿಡ್-19 ಸೋಂಕು ತಗುಲಿದಾಗ 5 ದಿನಗಳ ಪ್ರತ್ಯೇಕವಾಸ ಸಾಕು. ಸಾರ್ವಜನಿಕ ಆರೋಗ್ಯ ಇಲಾಖೆ ಮತ್ತು ಶೈಕ್ಷಣಿಕ ಸಂಸ್ಥೆಗಳು 5 ದಿನಗಳಷ್ಟು ಕಡಿಮೆ ಅವಧಿಯ ಪ್ರತ್ಯೇಕವಾಸವನ್ನು ಅನುಸರಿಸಬಹುದು" ಎಂದು ಸಂಶೋಧನೆಯ ಸಹ-ಲೇಖಕ, ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಕೇಫರ್ ಕೇಂದ್ರದ ಹಿರಿಯ ವಿಜ್ಞಾನಿ ನೀರಜ್ ಸೂದ್ ಹೇಳಿದ್ದಾರೆ.
ಸೋಂಕಿನ ಸರಾಸರಿ ಸಮಯವು ಮೂರು ದಿನಗಳು ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಐದನೇ ದಿನದಂದು ಶೇಕಡಾ 18.4 ರಷ್ಟು ಮಕ್ಕಳು ಇನ್ನೂ ಸೋಂಕು ಹೊಂದಿರುತ್ತಾರೆ ಮತ್ತು ಶೇಕಡಾ 3.9 ರಷ್ಟು ಮಕ್ಕಳು 10 ನೇ ದಿನದಂದು ಕೂಡ ಸೋಂಕು ಹೊಂದಿರುತ್ತಾರೆ. ಲಸಿಕೆ ಪಡೆದಿರುವುದು ಮತ್ತು ಸೋಂಕು ಮುಂದುವರೆಯುವ ವಿಷಯದಲ್ಲಿ ಯಾವುದೇ ಸಂಬಂಧ ಕಂಡು ಬಂದಿಲ್ಲವಾದ್ದರಿಂದ, ಸೋಂಕಿತ ಮಕ್ಕಳು ಶಾಲೆಗೆ ಹಾಜರಾಗುವ ವಿಷಯದಲ್ಲಿ ಲಸಿಕೆಯ ವಿಚಾರವನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ಸಂಶೋಧನೆ ಹೇಳಿದೆ.
ಜಾಮಾ ಪೀಡಿಯಾಟ್ರಿಕ್ಸ್ ಹೆಸರಿನ ಜರ್ನಲ್ನಲ್ಲಿ ಪ್ರಕಟವಾದ ಈ ಅಧ್ಯಯನ ವರದಿಯು ಮಕ್ಕಳು ಕೋವಿಡ್ -19 ಸೋಂಕಿಗೆ ಒಳಗಾದಾಗ ಎಷ್ಟು ಸಮಯದವರೆಗೆ ಪ್ರತ್ಯೇಕವಾಗಿರಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ. "ಸೋಂಕಿಗೆ ಒಳಗಾಗಬಹುದಾದ ಶಾಲೆಯಲ್ಲಿನ ಇತರ ಮಕ್ಕಳನ್ನು ರಕ್ಷಿಸುವುದು ಅಗತ್ಯ. ಆದರೆ ಅದೇ ಸಮಯದಲ್ಲಿ, ಸೋಂಕಿಗೆ ಒಳಗಾದ ಮಗುವಿನ ಶಿಕ್ಷಣಕ್ಕೆ ಅಡ್ಡಿಪಡಿಸುವುದು ನಮ್ಮ ಉದ್ದೇಶವಲ್ಲ." ಎಂದು ಯುಎಸ್ಸಿ ಸೋಲ್ ಪ್ರೈಸ್ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ಪ್ರಾಧ್ಯಾಪಕರೂ ಆಗಿರುವ ಸೂದ್ ಹೇಳಿದರು.
ಎಷ್ಟು ದಿನ ಸ್ವಯಂ ಪ್ರತ್ಯೇಕವಾಸದಲ್ಲಿ ಇರಬೇಕೆಂಬುದನ್ನು ನಿರ್ಧರಿಸುವಲ್ಲಿ ಸೋಂಕಿನ ಅವಧಿಯು ಒಂದು ಪ್ರಮುಖ ನಿಯತಾಂಕವಾಗಿದೆ ಎಂದು ವರದಿ ತಿಳಿಸಿದೆ. ಅಧ್ಯಯನಕ್ಕಾಗಿ, ಸಂಶೋಧಕರು ವೈರಸ್ ಪತ್ತೆ ಮಾಡುವ ಕಂಪನಿಯೊಂದಿಗೆ ಜಂಟಿಯಾಗಿ ಕೆಲಸ ಮಾಡಿದ್ದಾರೆ. ಅಧ್ಯಯನದಲ್ಲಿ ಲಾಸ್ ಏಂಜಲೀಸ್ ಕೌಂಟಿಯ 7 ರಿಂದ 18 ವರ್ಷದೊಳಗಿನ 76 ಮಕ್ಕಳ ಮೂಗಿನ ಸ್ವ್ಯಾಬ್ಗಳನ್ನು ವಿಜ್ಞಾನಿಗಳು ಪರೀಕ್ಷೆ ಮಾಡಿದ್ದರು.
ಇದನ್ನೂ ಓದಿ: ಮಧುಮೇಹಿಗಳ ಗಾಯ 3 ಪಟ್ಟು ಬೇಗ ಗುಣಪಡಿಸುವ ಜೆಲ್ ಆವಿಷ್ಕಾರ