ನವದೆಹಲಿ: ಕಳೆದ ನಾಲ್ಕು ವಾರದಿಂದ ಜಾಗತಿಕವಾಗಿ ಕೋವಿಡ್ ಪ್ರಕರಣಗಳಲ್ಲಿ ಶೇ. 52ರಷ್ಟು ಏರಿಕೆ ಕಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಅವಧಿಯಲ್ಲಿ 8,50,000 ಪ್ರಕರಣಗಳು ದಾಖಲಾಗಿದೆ. ಕಳೆದ 28 ದಿನಗಳ ಅವಧಿಗೆ ಹೋಲಿಕೆ ಮಾಡಿದಾಗ ಹೊಸ ಸಾವಿನ ಸಂಖ್ಯೆಯಲ್ಲಿ ಶೇ 8ರಷ್ಟು ಇಳಿಕೆ ಕಂಡಿದೆ. ಜೊತೆಗೆ 3,000 ಹೊಸ ಸಾವು-ನೋವುಗಳು ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ತಿಳಿಸಿದೆ.
ಕೋವಿಡ್ ಮೊದಲ ಬಾರಿಗೆ ಉಲ್ಬಣಗೊಂಡಾಗಿನಿಂದ ಇಲ್ಲಿಯವರೆಗೆ ಅಂದರೆ ಡಿಸೆಂಬರ್ 17ರವರೆಗೆ ಜಾಗತಿಕವಾಗಿ 772 ಮಿಲಿಯನ್ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 7 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ. ಹೊಸ ಕೋವಿಡ್ ಪ್ರಕರಣಗಳಿಂದ 1,18,000 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 1,600ಕ್ಕೂ ಹೆಚ್ಚು ಹೊಸ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ. ಓಮ್ರಿಕಾನ್ ಬಿಎ.2.86 ರೂಪಾಂತರಿ ಜೆಎನ್.1 ತಳಿ ಇತ್ತೀಚೆಗೆ ವೇಗವಾಗಿ ಹರಡುತ್ತಿದೆ. ಬಿಎ.2.86 ಹೊರತುಪಡಿಸಿ ಇಜಿ.5 ಜಾಗತಿಕವಾಗಿ ಹೆಚ್ಚಾಗಿ ಹರಡಿದ ರೂಪಾಂತರಿಯಾಗಿದೆ.
ಜೆಎನ್.1 ಜಾಗತಿಕ ಸಾರ್ವಜನಿಕ ಆರೋಗ್ಯ ಅಪಾಯವನ್ನು ಉಂಟು ಮಾಡುವುದು ಕಡಿಮೆ ಆಗಿದೆ. ಉತ್ತರ ಗೋಳಾರ್ಧದಲ್ಲಿ ಚಳಿಗಾಲ ಆರಂಭವಾಗಿದ್ದು, ಇದರಿಂದ ಅನೇಕ ದೇಶಗಳಲ್ಲಿ ಉಸಿರಾಟದ ಸೋಂಕು ಹೆಚ್ಚಲಿದೆ. ಜೆಎನ್ 1 ಅಪಾಯದ ಮೌಲ್ಯ ಮಾಪನ ಮಾಡಲಾಗುತ್ತಿದ್ದು, ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಭಾರತದಲ್ಲಿ ಪ್ರಕರಣ ಏರಿಕೆ: ಭಾರತದಲ್ಲಿ ಕೂಡ ಕೋವಿಡ್ ಪ್ರಕರಣಗಳು ಏರಿಕೆ ಕಂಡಿದ್ದು, ಕಳೆದ 24 ಗಂಟೆಯಲ್ಲಿ 2,997 ಸಕ್ರಿಯ ಪ್ರಕರಣಗಳು ದಾಖಲಾಗಿದೆ ಎಂದು ಶುಕ್ರವಾರ ಸಂಜೆ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸದ್ಯ ಕೋವಿಡ್ 19 ಪ್ರಕರಣ ಹೆಚ್ಚಾಗಲು ಒಮ್ರಿಕಾನ್ ರೂಪಾಂತರಿ ಜೆಎನ್.1 ಉಪತಳಿ ಕಾರಣವಾಗಿದೆ. ಒಮ್ರಿಕಾನ್ ಸೋಂಕಿನ ಹರಡುವಿಕೆಯಂತೆ ಇದು ಕೂಡ ವೇಗವಾಗಿ ಹರಡುತ್ತಿದೆ. ಇದು ಯಾವುದೇ ಗಂಭೀರ ಆರೋಗ್ಯ ಲಕ್ಷಣವನ್ನು ಹೊಂದಿಲ್ಲ. ಈ ಸೋಂಕಿನ ಪರಿಣಾಮವು ಶ್ವಾಸಕೋಶದ ಮೇಲ್ಬಾಗಕ್ಕೆ ಸೀಮಿತವಾಗಿದೆ. ಇದುವರೆಗೆ ಈ ಸಂಬಂಧ ಯಾವುದೇ ಗಂಭೀರ ರೋಗಲಕ್ಷಣಗಳು ವರದಿಯಾಗಿಲ್ಲ. ಇದರಿಂದ ಗಾಬರಿಯಾಗುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಉಸಿರಾಟದ ವೈರಸ್‌ಗಳ ಹರಡುವಿಕೆಯ ಉಲ್ಬಣದಿಂದ ಸೋಂಕಿನ ಏರಿಕೆಗೆ ಕಾರಣವಾಗಿದೆ. ಸೋಂಕಿನ ಹೆಚ್ಚಿನ ಪ್ರಕರಣಗಳು ರೂಪದಲ್ಲಿ ಸೌಮ್ಯವಾಗಿರುತ್ತವೆ ಎಂದು ದೆಹಲಿಯ ಏಮ್ಸ್ನ ಹೆಚ್ಚುವರಿ ಪ್ರೊ ಹರ್ಷಲ್ ಆರ್ ಸಾಳ್ವೆ ತಿಳಿಸಿದ್ದಾರೆ.
(ಪಿಟಿಐ, ಐಎಎನ್ಎಸ್)
ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನದಲ್ಲಿ ಪತ್ತೆಯಾದವು 300 ಸಕ್ರಿಯ ಕೋವಿಡ್ ಪ್ರಕರಣಗಳು: 3 ಸಾವು.. ಮಂಗಳೂರಲ್ಲಿ ಒಬ್ಬರಿಗೆ ಪಾಸಿಟಿವ್