ಹೈದರಾಬಾದ್: ಪಾರ್ಶ್ವವಾಯು ಎಂದರೆ ಸಾಮಾನ್ಯವಾಗಿ ಹಿರಿಯರನ್ನು ಕಾಡುವ ಸಮಸ್ಯೆ ಎಂದು ಭಾವಿಸುತ್ತೇವೆ. ಆದರೆ, ಇಂದು ಈ ಸಮಸ್ಯೆ ಯುವ ಜನತೆಯನ್ನು ಕಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಕುರಿತು ಅನೇಕ ವರದಿಗಳು ಆಗುತ್ತಿದ್ದು, ಇತ್ತೀಚಿನ ದೆಹಲಿ ಏಮ್ಸ್ ಬಿಡುಗಡೆ ಮಾಡಿದ ಅಂಕಿ - ಅಂಶಗಳು ಮತ್ತಷ್ಟು ಚಿಂತಿಸುವಂತೆ ಮಾಡಿದೆ.
ವರದಿ ಪ್ರಕಾರ, ಏಮ್ಸ್ನಲ್ಲಿ 100ರಲ್ಲಿ ಎರಡು ಬ್ರೈನ್ಸ್ ಸ್ಟ್ರೋಕ್ ಪ್ರಕರಣಗಳು 20 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಅಲ್ಲದೇ ಪಾರ್ಶ್ವವಾಯುಗೆ ತುತ್ತಾದ 300ರಲ್ಲಿ 77 ಮಂದಿ 21ರಿಂದ 45 ವರ್ಷದ ಒಳಗಿನವರಾಗಿದ್ದಾರೆ. ಶೇ 25ರಷ್ಟು ಯುವ ಜನತೆ ಈ ಪಾರ್ಶ್ವವಾಯುಗೆ ಗುರಿಯಾಗುತ್ತಿದ್ದಾರೆ. ತೆಲಂಗಾಣದ ನಿಮ್ಸ್, ಗಾಂಧಿ ಮತ್ತು ಉಸ್ಮಾನಿಯಾ ಆಸ್ಪತ್ರೆಗಳಿಂದ ಬರುತ್ತಿರುವ ಇಂತಹ ಪ್ರಕರಣದಲ್ಲಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ರೋಗಿಗಳು ಕಂಡು ಬರುತ್ತಿದ್ದಾರೆ. ಶೇ 15ರಷ್ಟು ರೋಗಿಗಳು ಯುವ ವಯುಸ್ಸಿನವರಾಗಿದ್ದಾರೆ. ಈ ಪಾರ್ಶ್ವವಾಯುವಿನಿಂದ ಶೇ 30ರಷ್ಟು ರೋಗಿಗಳು ಶಾಶ್ವತವಾಗಿ ಅಂಗವೈಕಲ್ಯತೆಗೆ ಗುರಿಯಾಗುತ್ತಿದ್ದಾರೆ.
ಬ್ರೈನ್ ಸ್ಟ್ರೋಕ್ ಕಾರಣ: ಅಧಿಕ ರಕ್ತದೊತ್ತಡವೂ ಬ್ರೈನ್ ಸ್ಟ್ರೋಕ್ಗೆ ಪ್ರಮುಖ ಕಾರಣವಾಗಿರುವ ಅಂಶವಾಗಿದೆ. ಅನೇಕ ಮಂದಿ ತಮ್ಮ ರಕ್ತದ ಒತ್ತಡವನ್ನು ಪ್ರತಿ ವರ್ಷ ಪರೀಕ್ಷೆ ಮಾಡುವುದಿಲ್ಲ. ಅನೇಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೂ ಈ ಬಗ್ಗೆ ಅವರಿಗೆ ತಿಳಿಯದ ಕಾರಣ ಇದು. ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಈ ಹಿನ್ನೆಲೆಯಲ್ಲಿ, ಈ ಕುರಿತು ಸೂಕ್ತ ಚಿಕಿತ್ಸೆಗೆ ಅಥವಾ ತಡೆಗಟ್ಟುವ ಕ್ರಮಕ್ಕೆ ಅವರು ಮುಂದಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮೂರರಲ್ಲಿ ಒಬ್ಬರು ವಯಸ್ಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.
ಮಿದುಳಿಗೆ ರಕ್ತ ಸಂಚಾರದಲ್ಲಿ ಉಂಟಾಗುವ ಅಡ್ಡಿಯಿಂದ ಬ್ರೈನ್ ಸ್ಟ್ರೋಕ್ನ ಉಂಟಾಗುತ್ತದೆ. ದೇಹದ ಕಾಲು ಅಥವಾ ಕೈ ನಿಯಂತ್ರಿಸುವಂತಹ ಮಿದುಳು ಪ್ರಮುಖ ಭಾಗದಲ್ಲಿ ರಕ್ತದ ಪರಿಚಲನೆಯಲ್ಲಿ ಅಡೆತಡೆಯಾದರೆ ಆ ಭಾಗವೂ ಸಂಪೂರ್ಣವಾಗಿ ಸತ್ತಂತೆ ಆಗುತ್ತದೆ. ಇದೇ ಪಾರ್ಶ್ವವಾಯುವಾಗಿದೆ. ಈ ರೀತಿ ಕಣ್ಣು, ಮುಖ, ಬಾಯಿ ಕೆಲವೊಮ್ಮೆ ದೇಹದ ಎರಡು ಭಾಗಗಳಿಗೂ ಹಾನಿ ಉಂಟಾಗಬಹುದು. ಅಸ್ಪಷ್ಟ ಮಾತು, ಅಸ್ಥಿರತೆ, ದೃಷ್ಟಿ ದೋಷ, ಎಚ್ಚರ ತಪ್ಪುವಂತಹ ಲಕ್ಷಣಗಳು ಕಂಡು ಬಂದರೆ ಇವು ಬ್ರೈನ್ ಸ್ಟ್ರೋಕ್ ಲಕ್ಷಣವಾಗಿದ್ದು, ಇದಕ್ಕೆ ತಕ್ಷಣಕ್ಕೆ ಚಿಕಿತ್ಸೆ ನೀಡಬೇಕಾಗುತ್ತದೆ.
ತಡೆಗೆ ಕ್ರಮ: ಈ ಗಂಭೀರ ಸ್ವರೂಪದ ಪಾರ್ಶ್ವವಾಯುವಿನಿಂದ ತಪ್ಪಿಸಿಕೊಳ್ಳಲು ಮುಂದಾಗಲು ನಿಯಮಿತವಾಗಿ ಬಿಪಿ ಪರೀಕ್ಷೆಗೆ ಒಳಗಾಗಬೇಕು. ಅಧಿಕ ರಕ್ತದೊತ್ತಡವನ್ನು ಸದಾ ನಿಯಂತ್ರಣದಲ್ಲಿ ಇಡಬೇಕು. ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಮಿತವಾಗಿ ನಿರ್ವಹಣೆ ಮಾಡಬೇಕು. ವೈದ್ಯರ ಪ್ರಕಾರ, ನಿಯಮಿತವಾಗಿ ವ್ಯಕ್ತಿ ಆರೋಗ್ಯ ತಪಾಸಣೆಗೆ ಒಳಗಾಗಬೇಕಿದೆ. ಸ್ಥೂಲಕಾಯ ತಪ್ಪಿಸಬೇಕು. ದಿನಕ್ಕೆ 6-7 ಗಂಟೆ ಉತ್ತಮ ನಿದ್ದೆಯನ್ನು ಹೊಂದಬೇಕಿದೆ. ಅಲ್ಲದೇ ಒತ್ತಡ ಮುಕ್ತ ಬದುಕಿಗೆ ಹೆಚ್ಚಿನ ಗಮನವನ್ನು ಹರಿಸಬೇಕಿದೆ. ಈ ನಿಟ್ಟಿನಲ್ಲಿ ಸಮತೋಲಿತ ಆಹಾರ ಸೇವನೆ, ದಿನಕ್ಕೆ 45 ನಿಮಿಷ ವ್ಯಾಯಾಮದಂತಹ ಚಟುವಟಿಕೆಗಳು ಸಹಾಯ ಮಾಡುತ್ತದೆ. ಜೊತೆಗೆ ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯಿಂದ ದೂರವಿರುವುದು. ದಿನಕ್ಕೆ 3-4 ಗ್ರಾಂಗಿಂತ ಹೆಚ್ಚಿನ ಉಪ್ಪು ಸೇವನೆ ಮಾಡದಿರುವುದು ಆರೋಗ್ಯಯುತ ಜೀವನಶೈಲಿಯ ಮಾರ್ಗವಾಗಿರಲಿದೆ.
ಇದನ್ನೂ ಓದಿ: ಧೂಮಪಾನ, ಹೆಚ್ಚಿನ ಒತ್ತಡ, ಬಿಡುವಿಲ್ಲದ ನಿರಂತರ ಕೆಲಸವೇ ಪಾರ್ಶ್ವವಾಯುವಿಗೆ ಕಾರಣವಂತೆ.. ಇದಕ್ಕಿಲ್ಲವೇ ಪರಿಹಾರ?