ನವದೆಹಲಿ: ಭಾರತದಲ್ಲಿ ಕೋವಿಡ್ 19ನ ಓಮಿಕ್ರಾನ್ ಉಪತಳಿಯ ಜೆಎನ್.1 ಸೋಂಕು ವೇಗವಾಗಿ ಹರಡುತ್ತಿದ್ದು, ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಈ ಹಿನ್ನೆಲೆ ಬೂಸ್ಟರ್ ಲಸಿಕೆ ಅವಶ್ಯವಾ ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುರಿತು ಮಾತನಾಡಿರುವ ಆರೋಗ್ಯ ತಜ್ಞರು, ಸದ್ಯ ಬೂಸ್ಟರ್ ಲಸಿಕೆಯ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮೊದಲ ಬಾರಿಗೆ ಆಗಸ್ಟ್ನಲ್ಲಿ ಲಕ್ಸೆಂಬರ್ಗ್ನಲ್ಲಿ ಪತ್ತೆಯಾದ ಜೆಎನ್.1 ಸೋಂಕು ಪ್ರಸ್ತುತ ಭಾರತ ಸೇರಿದಂತೆ 41 ದೇಶಗಳಲ್ಲಿ ಕಂಡು ಬಂದಿದೆ. ಇದು ವೇಗವಾಗಿ ಹರಡುತ್ತಿರುವ ಹಿನ್ನೆಲೆ ಇದನ್ನು ವೆರಿಯಂಟ್ ಆಫ್ ಇಂಟ್ರೆಸ್ಟ್ ಎಂದು ವಿಶ್ವ ಆರೋಗ್ಯ ಸಂಸ್ಥೆ ವರ್ಗೀಕರಿಸಿದೆ.
ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಅನುಸಾರ ಡಿಸೆಂಬರ್ 26ರ ವರೆಗೆ ದೇಶದಲ್ಲಿ ಒಟ್ಟು 109 ಜೆಎನ್.1 ಪ್ರಕರಣಗಳು ಕಂಡು ಬಂದಿದ್ದು, ಪ್ರಮುಖವಾಗಿ ಗುಜರಾತ್, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ, ರಾಜಸ್ಥಾನ್, ತಮಿಳುನಾಡು ಮತ್ತು ತೆಲಂಗಾಣದಲ್ಲಿದೆ.
ಈ ಕುರಿತು ಮಾತನಾಡಿರುವ ಮಣಿಪಾಲ್ ಆಸ್ಪತ್ರೆ ಮಿಲ್ಲರ್ಸ್ ರಸ್ತೆಯ ಇಂಟರ್ನಲ್ ಮೆಡಿಸಿನ್ ವೈದ್ಯ ಡಾ ಪ್ರಮೋದ್ ವಿ ಸತ್ಯ, ಪ್ರಸ್ತುತ ಲಸಿಕೆಗಳು ಜೆಎನ್.1 ತಳಿಯ ಸೋಂಕನ್ನು ತಡೆಯುವುದಿಲ್ಲ. ಈ ಸೋಂಕು ಕಡಿಮೆ ಅಪಾಯಕಾರಿಯಾಗಿದ್ದು, ಬೂಸ್ಟರ್ ಲಸಿಕೆಯ ಅಗತ್ಯ ಎದುರಾಗಿಲ್ಲ ಎಂದಿದ್ದಾರೆ.
ಜೆಎನ್.1 ಸೋಂಕು ಓಮಿಕ್ರಾನ್ ತಳಿಯ ಉಪ ತಳಿಯಾಗಿದೆ. ಎರಡು ವರ್ಷಗಳ ಹಿಂದೆ ತೆಗೆದುಕೊಂಡಿದ್ದ ಲಸಿಕೆಯು ತೀವ್ರವಾದ ಓಮಿಕ್ರಾನ್ ರೂಪಾಂತರಗಳಿಂದ ರಕ್ಷಿಸುತ್ತದೆ. ಹೊಸ ಜೆಎನ್.1 ರೂಪಾಂತರವೂ ಗಂಭೀರ ಅನಾರೋಗ್ಯವನ್ನು ಉಂಟು ಮಾಡುವ ಅಪಾಯವಿಲ್ಲ. ಇದು ಶ್ವಾಸಕೋಶದ ಮೇಲ್ಬಾಗದಲ್ಲಿ ಸೋಂಕಿನ ಅನಾರೋಗ್ಯ ಉಂಟು ಮಾಡುತ್ತದೆ. ಈ ಹಿನ್ನಲೆ ಆತಂಕ ಪಡುವ ಅಥವಾ ಬೂಸ್ಟರ್ ಡೋಸ್ ಪಡೆಯುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕೋವಿಡ್ ಪ್ರಕರಣಗಳ ಉಲ್ಬಣ ಮತ್ತು ಜೆಎನ್.1 ಸೋಂಕುಗಳ ಹೆಚ್ಚಳದ ಹೊರತಾಗಿಯೂ ಸಾರ್ವಜನಿಕರಿಗೆ ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ನೀಡುವ ಅವಶ್ಯಕತೆಯನ್ನು ಆರೋಗ್ಯ ಸಚಿವಾಲಯವೂ ತಳ್ಳಿ ಹಾಕಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಅನುಸಾರ, ಈ ವರ್ಷದ ಡಿಸೆಂಬರ್ 21ರವರೆಗೆ 2,20,67 ಕೋಟಿ ಕೋವಿಡ್ ಲಸಿಕೆ ನೀಡಲಾಗಿದೆ. 22.88 ಕೋಟಿ ಬೂಸ್ಟರ್ ಲಸಿಕೆಯನ್ನು ಅರ್ಹ ವಯಸ್ಕರಿಗೆ ನೀಡಲಾಗಿದೆ. ದೇಶದಲ್ಲಿನ ಶೇ 97ರಷ್ಟು ಅರ್ಹ ನಾಗರಿಕರು ಕೋವಿಡ್ ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶೇ 90ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ದತ್ತಾಂಶ ತಿಳಿಸಿದೆ.
ಕೋವಿಡ್‌ನ ಜೆಎನ್.1 ತಳಿಯು ವೇಗವಾಗಿ ಹರಡುತ್ತಿದೆ. ಆದರೆ ಈ ಬಗ್ಗೆ ಚಿಂತೆ ಬೇಡ. ಕೋವಿಡ್ ಲಸಿಕೆಯು ಕೋವಿಡ್ ವಿರುದ್ಧ ಪ್ರತಿರಕ್ಷೆಯನ್ನು ನೀಡಿದ್ದು, ಅದರ ಉಪತಳಿ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಹಿನ್ನಲೆ ಜೆಎನ್.1 ಸೋಂಕಿಗೆ ಹೆಚ್ಚುವರಿ ಬೂಸ್ಟರ್ ಡೋಸ್ ಪಡೆಯುವ ಅಗತ್ಯವಿಲ್ಲ ಎಂದು ಸಿಕೆ ಬಿರ್ಲಾ ಆಸ್ಪತ್ರೆಯ ಡಾ ರವೀಂದ್ರ ಗುಪ್ತಾ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಭವಿಷ್ಯದ ಸಾಂಕ್ರಾಮಿಕತೆಗೆ ಜಾಗತಿಕ ಸಿದ್ಧತೆ ಅವಶ್ಯ; ವಿಶ್ವಸಂಸ್ಥೆ ಮುಖ್ಯಸ್ಥರ ಕರೆ