ಬೆಳಗ್ಗೆ ಎದ್ದಾಕ್ಷಣ ಕೆಲಸ ಮಾಡಲು ಉತ್ಸಾಹ ಇಲ್ಲದೇ, ನಿರುತ್ಸಾಹದಿಂದ ದಿನ ಕಳೆಯುತ್ತಿದ್ದರೆ ಇದಕ್ಕೆ ಕಾರಣ ನಿಮ್ಮ ರಾತ್ರಿಯ ದಿನಚರಿ. ಹೀಗಾಗಿ ರಾತ್ರಿ ದಿನಚರಿ ಬಗ್ಗೆ ಕೊಂಚ ಕಾಳಜಿವಹಿಸುವುದು ಅಗತ್ಯ. ರಾತ್ರಿಯ ದಿನಚರಿಗಳು ಚೆನ್ನಾಗಿದ್ದರೆ ಅದು ಬೆಳಗಿನ ಮೂಡ್ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಸಂಜೆ ಸಮಯದಲ್ಲಿ ಕೊಂಚ ವ್ಯಾಯಾಮ, ಬೆಚ್ಚಗಿನ ನೀರಿನ ಸ್ನಾನ, ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಿ.
ಬೆಡ್ ಟೈಮ್ ಬಗ್ಗೆ ಇರಲಿ ಗಮನ: ಮಲಗುವ ಮುನ್ನ ನಿಮ್ಮ ಮನಸ್ಸನ್ನು ಸ್ಲೀಪ್-ವೆಕ್ಅಪ್ ಸೈಕಲ್ಗೆ ಸೆಟ್ ಮಾಡುವುದು ಅವಶ್ಯ. ಇದರಿಂದ ಪ್ರತಿನಿತ್ಯ ನೀವು ನಿಗದಿತ ಸಮಯದಲ್ಲಿ ಮಲಗುವುದು ಮತ್ತು ಏಳಲು ಸಾಧ್ಯವಾಗುತ್ತದೆ. ಅಲ್ಲದೇ, ನಿದ್ದೆಯ ಸಮತೋಲನಕ್ಕೂ ಇದು ಕಾರಣವಾಗುತ್ತದೆ. ಈ ಸೈಕಲ್ ಅನ್ನು ಕೇವಲ ವಾರದ ದಿನಗಳ ಮಾತ್ರವಲ್ಲದೇ, ವಾರಾಂತ್ಯದಲ್ಲೂ ಪಾಲನೆ ಮಾಡುವುದು ಅವಶ್ಯ. ನಿಯಮಿತವಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದರಿಂದ ಮೆದುಳಿಗೆ ಮಲಗುವ ಸಮಯದಲ್ಲಿ ನಿದ್ರೆಯನ್ನು ಅನುಭವಿಸಲು ಮರುತರಬೇತಿ ನೀಡಲು ಸಹಾಯ ಮಾಡುತ್ತದೆ.
ಗ್ಯಾಜೆಟ್ಗಳಿಂದ ದೂರವಿರಿ: ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಾದ ಲ್ಯಾಪ್ಟಾಪ್, ಟೆಲಿವಿಷನ್, ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಸ್‌ನಿಂದ ಹೊರಹೊಮ್ಮುವ ಬ್ಲೂ ಲೈಟ್ ನಿಮ್ಮನ್ನು ಚಂಚಲಗೊಳಿಸುತ್ತವೆ. ಈಗಾಗಲೇ ಈ ನೀಲಿ ಬೆಳಕು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸಾಕಷ್ಟು ವರದಿಗಳು ಬಂದಿದೆ. ನೀಲಿ ಬಣ್ಣದ ಬೆಳಕು ಮೆಲಟೊನಿನ್ ಉತ್ಪಾದನೆ ಹತ್ತಿಕ್ಕುತ್ತದೆ. ಪರಿಣಾಮ ಇದು ದೀರ್ಘಕಾಲದವರೆಗೆ ನಿಮ್ಮನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಹೀಗಾಗಿ ಮಲಗುವ ಮುನ್ನ ವಿಶ್ರಾಂತಿಗೆ ಕೆಲವು ಸಮಯ ನಿಗದಿ ಮಾಡುವುದು ಉತ್ತಮ.
ರಾತ್ರಿಯ ಸ್ಕಿನ್ಕೇರ್ ಅವಶ್ಯಕ: ಮಲಗುವ ಮುನ್ನ ಬಹುತೇಕರು ಆಲಸ್ಯದಿಂದ ಮೇಕಪ್ನೊಂದಿಗೆ ಮಲಗುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು. ಇದರಿಂದ ನಿಮ್ಮ ಚರ್ಮದ ಮೇಲೂ ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಚರ್ಮ ಮತ್ತು ಉತ್ತಮ ನಿದ್ದೆಯ ಪುನರ್ಜೀವನಕ್ಕೆ ರಾತ್ರಿ ಹೊತ್ತಿನ ಸ್ಕೀನ್ ಕೇರ್ ಅನುಸರಿಸುವುದು ಅವಶ್ಯವಾಗಿರುತ್ತದೆ.
ಸಂಗೀತ ಆಲಿಸಿ: ಮನಸ್ಸಿನ ವಿಶ್ರಾಂತಿಗೆ ರಾತ್ರಿ ಸಮಯದಲ್ಲಿ ನಿಮ್ಮಿಷ್ಟವಾದ ಸಂಗೀತ ಆಲಿಸುವುದು ಕೂಡ ಉತ್ತಮ ಮಾರ್ಗ. ಮನಸ್ಸಿಗೆ ಮುದ ನೀಡುವ ಯಾವುದೇ ಸಂಗೀತವನ್ನು ಆಲಿಸಬಹುದು. ಕಣ್ಮುಚ್ಚಿ ಆಲಿಸುವುದರಿಂದ ನಿಮ್ಮ ಆತಂಕ ಮತ್ತು ಸಮಸ್ಯೆಗಳು ದೂರವಾಗಿ ನೆಮ್ಮದಿಯಿಂದ ನಿದ್ದೆ ಮಾಡಲು ನೆರವಾಗುತ್ತದೆ.
ಉಸಿರಾಟದ ವ್ಯಾಯಮ: ರಾತ್ರಿ ಸಮಯ ಮನಸ್ಸಿನ ವಿಶ್ರಾಂತಿಯಷ್ಟೇ ದೇಹದ ವಿಶ್ರಾಂತಿ ಮುಖ್ಯ. ಇತ್ತೀಚಿನ ದಿನದಲ್ಲಿ ಜನರು ಸ್ನಾಯು ಮತ್ತು ಬೆನ್ನು ನೋವಿನಿಂದ ಬಳಲುವುದನ್ನು ಕಾಣಬಹುದು. ಇದಕ್ಕಾಗಿ ಸ್ನಾಯುಗಳ ಸಡಿಲಕ್ಕೆ ಕೆಲವು ವ್ಯಾಯಾಮಗಳನ್ನು ರೂಢಿಸಿಕೊಳ್ಳುವುದು ಅವಶ್ಯ. ದೀರ್ಘ ಉಸಿರಾಟದ ವ್ಯಾಯಾಮಗಳು ದೈಹಿಕ ಮತ್ತು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.
ಬರೆಯುವ ಅಭ್ಯಾಸ: ರಾತ್ರಿ ಸಮಯದಲ್ಲಿ ಓದುವ ಮತ್ತು ಬರೆಯುವ ಅಭ್ಯಾಸಗಳು ಉತ್ತಮ ಚಿಕಿತ್ಸಕಗಳಾಗಿವೆ. ಅನೇಕರಿಗೆ ರಾತ್ರಿ ಸಮಯದಲ್ಲಿ ಬರೆಯುವ ಅಭ್ಯಾಸಗಳಿಂದ ನಿಮ್ಮ ಆಲೋಚನೆ ಮತ್ತು ಭಾವನೆಗಳನ್ನು ಸಂಘಟಿಸಲು ಸಾಧ್ಯವಾಗುತ್ತದೆ. ಮಲಗುವ ಐದು ನಿಮಿಷ ಮೊದಲು ನಡೆಸುವ ಈ ಚಟುವಟಿಕೆಗಳು ನಿದ್ದೆಯ ಮೇಲೆ ಗಮನಾರ್ಹವಾಗಿ ಬದಲಾವಣೆ ತರುತ್ತದೆ.
ಮಲಗುವ ಕೋಣೆ ಹೀಗಿರಲಿ: ಮಲಗುವ ಕೋಣೆಗಳು ನಿದ್ದೆಗೆ ಪೂರಕ ಪರಿಸರ ಹೊಂದಿರಬೇಕು. ಶಾಂತಯುತ ಮತ್ತು ಕತ್ತಲೆ ವಾತಾವರಣದಿಂದ ಬೇಗ ನಿದ್ರೆಗೆ ಜಾರುವುದು ಸುಲಭ. ಜೊತೆಗೆ ಮಲಗುವ ಕೋಣೆ ಮತ್ತು ಹಾಸಿಗೆಯಲ್ಲಿ ಶುಚಿತ್ವ ಕಾಪಾಡುವುದರಿಂದ ಮನಸಿಗೆ ಮುದ ನೀಡುವುದರೊಂದಿಗೆ ಬೇಗ ನಿದ್ದೆಗೆ ಜಾರಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಧ್ಯಾಹ್ನದ ಕಿರು ನಿದ್ರೆಯಿಂದ ಆರೋಗ್ಯದ ಮೇಲಾಗುವ ಪರಿಣಾಮ ಗೊತ್ತೇ?