ನವದೆಹಲಿ: ಸಾಮಾಜಿಕ ತಪ್ಪು ಕಲ್ಪನೆ, ಜಾಗೃತಿಯ ಕೊರತೆ ಮತ್ತು ಮೂಲಭೂತ ಸೌಲಭ್ಯಗಳು ಭಾರತದಲ್ಲಿ ಅಂಗಾಂಗ ದಾನ ಪ್ರಕ್ರಿಯೆಗೆ ಇರುವ ತೊಡುಕುಗಳು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಜಾಗತಿಕವಾಗಿ ಭಾರತ ಅಂಗಾಂಗ ದಾನದ ವಿಚಾರದಲ್ಲಿ ಕಡಿಮೆ ದರ ಹೊಂದಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸಾವಿನ ನಂತರ ಶೇ 70-80ರಷ್ಟು ಜನರು ಅಂಗಾಂಗ ದಾನ ಮಾಡಿದರೆ, ಭಾರತದಲ್ಲಿ ಶೇ 1ರಷ್ಟು ಮಂದಿ ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡುತ್ತಾರೆ.
ಪ್ರಸ್ತುತ ಅಂಗಾಂಗ ಬೇಡಿಕೆ ಮತ್ತು ಕಸಿ ಶಸ್ತ್ರಚಿಕಿತ್ಸೆಗೆ ಲಭ್ಯವಿರುವ ಅಂಗಾಂಗಗಳ ನಡುವೆ ದೊಡ್ಡ ಅಂತರವಿದೆ. ಅನೇಕ ವರ್ಷಗಳಿಂದ ಕಿಡ್ನಿ ಮತ್ತು ಯಕೃತ್ಗಾಗಿ ಕಾಯುತ್ತಿರುವ ಪಟ್ಟಿ ಇದೆ. ಹೃದಯ ಮತ್ತು ಶ್ವಾಸಕೋಶ ಸ್ವೀಕರಿಸುವವರು ಶವದ ಅಂಗಾಂಗ ದಾನದ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕಾಗಿ ನಾವು ಪ್ರತಿಜ್ಞೆ ಮಾಡಬೇಕಿದೆ ಎಂದು ಮುಂಬೈನ ಸರ್.ಎಚ್ಎನ್ ರಿಲಯನ್ಸ್ ಫೌಂಡೇಷನ್ ಆಸ್ಪತ್ರೆಯ ತೀವ್ರನಿಗಾ ಕೇಂದ್ರದ ಮುಖ್ಯಸ್ಥ ರಾಹುಲ್ ಪಂಡಿತ್ ತಿಳಿಸಿದರು.
ಜೀವಂತ ಅಂಗಾಂಗ ದಾನ ಮತ್ತು ಶವಗಳ ಅಂಗಾಂಗ ದಾನ ಈ ಎರಡೂ ಭಾರತದಲ್ಲಿ ಸಾಂಪ್ರದಾಯಿಕವಾಗಿ ಅನುಸರಿಸಲಾಗುತ್ತಿರುವ ದಾನ ಪದ್ಧತಿಯಾಗಿದೆ. ಜೀವಂತ ಅಂಗಾಂಗ ದಾನದಲ್ಲಿ ರೋಗಿಗಳ ಹತ್ತಿರದ ಸಂಬಂಧಿಗಳು ಅಂಗಾಂಗ ದಾನ ಕಾಯ್ದೆಯನುಸಾರವಾಗಿ ದಾನಕ್ಕೆ ಮುಂದಾಗುತ್ತಾರೆ. ಇದರಲ್ಲಿ ಮೂತ್ರಪಿಂಡ, ಯಕೃತ್ ದಾನ ಮುಖ್ಯವಾಗಿದೆ. ಶವದ ಅಂಗಾಂಗ ದಾನದಲ್ಲಿ ಬ್ರೈನ್ ಡೆಡ್ ಆದ ವ್ಯಕ್ತಿಗಳಿಂದ ಪಡೆಯಲಾಗುತ್ತದೆ. ಇದು ಸಾವನ್ನಪ್ಪಿದ ವ್ಯಕ್ತಿಗೆ ಯಾವುದೇ ನರಸಮಸ್ಯೆ ಹೊಂದಿಲ್ಲದಾಗ ಮಾತ್ರ ಸಾಧ್ಯವಿದೆ.
ಈ ಪ್ರಕ್ರಿಯೆಯಲ್ಲಿ ದಾನಿಗಳ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಕಾರ್ನಿಯಾ, ಹೃದಯ, ಶ್ವಾಸಕೋಶ, 2 ಮೂತ್ರಪಿಂಡ, ಯಕೃತ್, ಪ್ಯಾಕ್ರಿಯೆಟಿಕ್ ಐಸ್ಲೆಟ್ ಸೆಲ್, ಮೂತ್ರನಾಳ, ಎರಡು ಕೈ, ಚರ್ಮ, ಮೂಳೆ, ಸ್ನಾಯುರಜ್ಜು ಸೇರಿದಂತೆ 8-9 ಅಂಗಾಂಗಗಳ ದಾನ ಮಾಡಬಹುದು ಎನ್ನುತ್ತಾರೆ ವೈದ್ಯರು.
ಸಾವನ್ನಪ್ಪಿದ ರೋಗಿಗಳು ಅಂಗಾಂಗ ದಾನಕ್ಕೆ ಮುಂದಾಗುವಲ್ಲಿ ಕೊಂಚ ಸುಧಾರಣೆ ಕಂಡುಬಂದಿದೆ. ಪ್ರತಿ ದಾನಿಗಳಿಗೆ ಕಸಿ ಮಾಡುವ ಸರಾಸರಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೂ ಕೂಡ ಇದರ ಸಂಖ್ಯೆ ಅಸಮಾನವಾಗಿದೆ ಎಂದಿದ್ದಾರೆ ಧರ್ಮಶಿಲಾ ನಾರಾಯಣ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯ ಸಹಾಯಕ ನಿರ್ದೇಶಕ ಮತ್ತು ಹಿರಿಯ ವೈದ್ಯ ಯಾಸಿರ್ ರಿಜ್ವಿ.
ಅಂಗಾಂಗ ದಾನ ಕುರಿತ ಮೌಢ್ಯ: ಅನೇಕ ಮಂದಿಯಲ್ಲಿ ಬ್ರೈನ್ ಡೆಡ್ ಆದ ರೋಗಿಗಳ ಅಂಗಾಂಗಗಳು ವ್ಯರ್ಥವಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಪ್ರತಿ ವರ್ಷ 2 ಲಕ್ಷ ಕಿಡ್ನಿ ಮತ್ತು ಇತರೆ ಪ್ರಮುಖ ಅಂಗಾಂಗದ ಬೇಡಿಕೆ ಇದೆ ಎನ್ನುತ್ತಾರೆ ಶ್ರೀ ಬಾಲಾಜಿ ಆ್ಯಕ್ಷನ್ ಮೆಡಿಕಲ್ ಇನ್ಸುಟಿಟ್ಯೂಟ್ನ ಮುಖ್ಯಸ್ಥ ಮತ್ತು ಹಿರಿಯ ವೈದ್ಯ ರಾಜೇಶ್ ಅಗರ್ವಾಲ್.
ಭಾರತ ಅಂಗಾಂಗ ದಾನದ ದರದಲ್ಲಿ ನಿರ್ಣಾಯಕ ಸವಾಲು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ತೀವ್ರ ಸುಧಾರಣೆಯ ಅಗತ್ಯವಿದೆ. ಅರಿವಿನ ಕೊರತೆ ಮತ್ತು ಆಳವಾಗಿ ಬೇರೂರಿರುವ ಮೂಢನಂಬಿಕೆಗಳಿಂದಾಗಿ ದೇಶವು ಅಂಗಾಂಗ ದಾನ ಮತ್ತು ಕಸಿಗಳಲ್ಲಿ ಬೇಡಿಕೆ-ಪೂರೈಕೆ ಅಂತರವನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅಭಿಯಾನ, ಅರಿವು ಮೂಲಕ ಅಂಗಾಂಗ ದಾನಿಗಳ ದರವನ್ನು ಹೆಚ್ಚಿಸಬೇಕಿದೆ. ವೈದ್ಯಕೀಯ ಸಂಸ್ಥೆಗಳು ನೀತಿ ನಿರೂಪಕರ ನಡುವಿನ ಸಂಯೋಜನೆ ನಡೆಸಬೇಕಿದೆ.
ಇದಕ್ಕಾಗಿ ಅಂಗ ದಾಖಲಾತಿಗಳನ್ನು ಸ್ಥಾಪಿಸುವುದು ಮತ್ತು ಮೃತ ಅಂಗಾಂಗ ದಾನದ ಮೂಲಸೌಕರ್ಯ ಹೆಚ್ಚಿಸುವ ಕೆಲಸ ನಡೆಯಬೇಕಿದೆ. ಈ ಕುರಿತು ಸೂಕ್ತ ಶಿಕ್ಷಣ ನೀಡುವ ಮೂಲಕ ಮೂಢನಂಬಿಕೆಯನ್ನು ತೊಡೆದು ಹಾಕಿ ನೂರಾರು ಜೀವಗಳನ್ನು ಉಳಿಸಬಹುದು. (ಐಎಎನ್ಎಸ್)
ಇದನ್ನೂ ಓದಿ: ಅಂಗಾಂಗ ದಾನಕ್ಕೆ ಮುಂದಾದ 82 ಸಾವಿರ ಮಂದಿ; ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಂದ ನೋಂದಣಿ