ಲಾಕ್ಡೌನ್ ಇರಲಿ, ಮತ್ತಾವುದೇ ಸಂಕಷ್ಟವಿರಲಿ.. ಮಕ್ಕಳ ಮೇಲಿನ ತಾಯಿಯ ಪ್ರೀತಿ ಮಾತ್ರ ಎಂದಿಗೂ ಕಡಿಮೆಯಾಗದು. ಈ ಬಾರಿ ತಾಯಂದಿರ ದಿನಾಚರಣೆಯನ್ನು ಲಾಕ್ಡೌನ್ ಮಧ್ಯದಲ್ಲಿ ಮತ್ತಷ್ಟು ಅರ್ಥಪೂರ್ಣವಾಗಿ ಆಚರಿಸಲು ನಮಗೆಲ್ಲ ಒಂದು ಸದವಕಾಶ ಸಿಕ್ಕಿದೆ. ಎಲ್ಲರೂ ಮನೆಯಲ್ಲಿರುವ ಈ ಸಮಯದಲ್ಲಿ ತಾಯಿಗೂ ಒಂದಿಷ್ಟು ಸಮಯ ಮೀಸಲಿಟ್ಟು, ತಾಯಿಗೆ ನಮಿಸೋಣ.
ಪ್ರತಿವರ್ಷದ ಮೇ ತಿಂಗಳ ಎರಡನೇ ರವಿವಾರದಂದು ವಿಶ್ವ ತಾಯಂದಿರ ದಿನ ಆಚರಿಸಲಾಗುತ್ತದೆ. ಅಂದರೆ ಇದೇ ಮೇ 10 ರಂದು ಜಗತ್ತಿನಾದ್ಯಂತ ತಾಯಂದಿರ ದಿನ ಆಚರಿಸಲಾಗುವುದು.
ವಿಶ್ವ ತಾಯಂದಿರ ದಿನಾಚರಣೆ ಆರಂಭವಾಗಿದ್ದು ...
ಅನ್ನಾ ಜಾರ್ವಿಸ್ ಎಂಬುವರು ಪ್ರಥಮ ಬಾರಿಗೆ ತಾಯಂದಿರ ದಿನಾಚರಣೆ ಆರಂಭಿಸಿದರು. ಆಕೆ ತನ್ನ ತಾಯಿಗೆ ಗೌರವ ಸಮರ್ಪಿಸಲು ಈ ದಿನಾಚರಣೆಗೆ ನಾಂದಿ ಹಾಡಿದರು. ಅನ್ನಾ ಮಾರೀ ಜಾರ್ವಿಸ್ ಅವರ ಸತತ ಪ್ರಯತ್ನಗಳ ಕಾರಣದಿಂದ ಅಮೆರಿಕದ 28ನೇ ಅಧ್ಯಕ್ಷರಾಗಿದ್ದ ಥಾಮಸ್ ವುಡ್ರೊ ವಿಲ್ಸನ್ 1914ರ ಮೇ 9 ರಂದು ತಾಯಂದಿರ ದಿನಾಚರಣೆಯ ಘೋಷಣೆ ಮಾಡಿದರು. ನಂತರ ಪ್ರತಿವರ್ಷ ಮೇ ತಿಂಗಳ ಎರಡನೇ ರವಿವಾರದಂದು ತಾಯಂದಿರ ಪ್ರೀತಿ ಮತ್ತು ಗೌರವದ ದ್ಯೋತಕವಾಗಿ ರಾಷ್ಟ್ರೀಯ ತಾಯಂದಿರ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. ಇದಾಗಿ ಕೆಲ ದಿನಗಳ ನಂತರ ತಾಯಂದಿರ ದಿನಾಚರಣೆಯನ್ನು ವಾಣಿಜ್ಯ ಲಾಭಕ್ಕಾಗಿ ಕೆಲವರು ಬಳಸಿಕೊಳ್ಳಲಾರಂಭಿಸಿದಾಗ ಅನ್ನಾ ಜಾರ್ವಿಸ್ ಉಗ್ರವಾಗಿ ಪ್ರತಿಭಟಿಸಿದ್ದರು.
ಆ್ಯಂಡ್ರೂಸ್ ಮೆಥೊಡಿಸ್ಟ್ ಚರ್ಚ್ನಲ್ಲಿ ಅನ್ನ ಜಾರ್ವಿಸ್ ತಾಯಿ 25 ವರ್ಷಗಳ ಕಾಲ ಪ್ರತಿ ರವಿವಾರ ಪಾಠ ಮಾಡುತ್ತಿದ್ದರು. 1908ರ ಮೇ 10 ರಂದು ಅನ್ನಾ ಜಾರ್ವಿಸ್, ಈ ಪಾಠಗಳಿಗೆ ಹಾಜರಾಗುತ್ತಿದ್ದ 500 ಜನರಿಗೆ ಶ್ವೇತ ಹೂಗುಚ್ಛಗಳನ್ನು ನೀಡಿದ್ದರು. ಬಹುಶಃ ಇದೇ ಪ್ರಥಮ ತಾಯಂದಿರ ದಿನಾಚರಣೆಯಾಗಿತ್ತು.
ಕೊರೊನಾ ವೈರಸ್ ಸಂಕಷ್ಟದಲ್ಲಿ ತಾಯಂದಿರ ಸೇವೆ ಅನನ್ಯ
ಮಕ್ಕಳೆಡೆಗೆ ತಾಯಿಯ ಪ್ರೀತಿ ಅಗಾಧ ಹಾಗೂ ವರ್ಣಿಸಲಸದಳ. ತನ್ನ ಮಕ್ಕಳ ಹಿತಕ್ಕಾಗಿ ಎಂಥದೇ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ ಈ ಮಮತಾಮಯಿ. ಈ ಲಾಕ್ಡೌನ್ ಮಧ್ಯೆ ಏನೇನೋ ಬದಲಾವಣೆಗಳಾಗಿವೆ. ಆದರೆ ತಾಯಿಯ ಪ್ರೀತಿ ಮಾತ್ರ ಹಾಗೆಯೇ ಇದೆ.
ಲಾಕ್ಡೌನ್ ಮಧ್ಯೆ ತಾಯಿ ಮಮತೆಯ ಕೆಲ ಮರೆಯಲಾಗದ ಘಟನೆಗಳು!
ಏಪ್ರಿಲ್ 10, 2020: ಮಗನನ್ನು ಮನೆಗೆ ಕರೆತರಲು 1400 ಕಿಮೀ ಸ್ಕೂಟಿ ಓಡಿಸಿದ ತಾಯಿ: ಲಾಕ್ಡೌನ್ನ ಎಲ್ಲ ಚೌಕಟ್ಟುಗಳನ್ನು ಮೀರಿ ಶಾಲಾ ಶಿಕ್ಷಕಿಯೊಬ್ಬರು 1400 ಕಿಮೀ ದ್ವಿಚಕ್ರ ವಾಹನ ಚಲಾಯಿಸಿ ಅದೆಲ್ಲೋ ದೂರದಲ್ಲಿ ಸಿಲುಕಿದ್ದ ತನ್ನ ಮಗನನ್ನು ಮನೆಗೆ ಕರೆತಂದಿದ್ದು ಅಸಾಮಾನ್ಯ. ನಿಜಾಮಾಬಾದ್ ಜಿಲ್ಲೆಯ ಬೋಧನ್ ಪಟ್ಟಣದ ಶಿಕ್ಷಕಿ, ಆಂಧ್ರ ಪ್ರದೇಶದ ನೆಲ್ಲೋರ್ನಲ್ಲಿ ಸಿಲುಕಿದ್ದ ಮಗನನ್ನು ಸ್ಕೂಟಿ ಮೇಲೆ ಕರೆತಂದಿದ್ದರು. ಮಗನನ್ನು ಕರೆತರಲು ಹೋಗುವಾಗ ಪೊಲೀಸರಿಂದ ಅನುಮತಿ ಪತ್ರ ಪಡೆದುಕೊಂಡಿದ್ದರೂ ಸಾಕಷ್ಟು ಕಡೆಗಳಲ್ಲಿ ಇವರಿಗೆ ಅಡೆತಡೆಗಳು ಎದುರಾದವು. ಆದರೆ ಧೃತಿಗೆಡದ ಇವರು ಪ್ರತಿಬಾರಿಯೂ ತಾನು ಹೊರಟಿರುವ ಉದ್ದೇಶವನ್ನು ತಿಳಿಸಿ ಮುಂದೆ ಸಾಗಿದ್ದರು. ಕೊನೆಗೂ ನೆಲ್ಲೋರ್ ತಲುಪಿ ತನ್ನ ಮಗನನ್ನು ಊರಿಗೆ ಕರೆತಂದಿದ್ದರು.
ಏಪ್ರಿಲ್ 25, 2020: 86 ವರ್ಷದ ಮಹಿಳೆ, ಕುಟುಂಬಸ್ಥರು ಕೋವಿಡ್ ಹೋರಾಟ ಗೆದ್ದು ಮನೆಗೆ ಮರಳಿದ್ದು: ವಯೋವೃದ್ಧರಿಗೆ ಕೋವಿಡ್ ಸೋಂಕು ತಗುಲುವ ಅಪಾಯ ಜಾಸ್ತಿ ಎಂದು ಹೇಳಲಾಗುತ್ತದೆ. ಪಾಲಿ ಹಿಲ್ ನಿವಾಸಿ 86 ವರ್ಷದ ಗೋದಾವರಿ ಕುಲಕರ್ಣಿಯವರಿಗೂ ಕೋವಿಡ್ ಸೋಂಕು ತಗುಲಿತ್ತು. ಇವರು ಮುಂಬೈನ ಎಸ್.ಎಲ್. ರಹೇಜಾ ಆಸ್ಪತ್ರೆಯಲ್ಲಿ 17 ದಿನ ಚಿಕಿತ್ಸೆ ಪಡೆದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಯಿಸಿ ಮನೆಗೆ ವಾಪಸಾದರು.
ಇವರು ಮಾತ್ರವಲ್ಲದೆ 55 ವರ್ಷದ ಮಗ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಹರೀಶ್ ಹಾಗೂ ಹಿರಿಯ ಸೊಸೆ ಇಬ್ಬರಿಗೂ ಕೋವಿಡ್ ಸೋಂಕು ತಗುಲಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರೂ ಸಹ ಕೋವಿಡ್ ಯುದ್ಧ ಗೆದ್ದು ಮನೆಗೆ ಮರಳಿ ತಾಯಿಯನ್ನು ಸೇರಿಕೊಂಡರು.
ಏಪ್ರಿಲ್ 9, 2020: ಆಸ್ಪತ್ರೆಯ ಹೊರಗೆ ಅಳುತ್ತ ನಿಂತಿದ್ದ ಮಗಳನ್ನು ನೋಡುತ್ತ ನಿಲ್ಲಬೇಕಾಯಿತು ನರ್ಸ್: ಪುಟ್ಟ ಹೆಣ್ಣು ಮಗುವೊಂದು ತಂದೆಯ ಜೊತೆ ಬೈಕ್ ಮೇಲೆ ಕುಳಿತು ದೂರದಿಂದಲೇ ತಾಯಿಗೆ ಕೈಬೀಸಿದ್ದು, ತಾಯಿಯ ಬಳಿ ಹೋಗಲಾಗದೆ ಬಿಕ್ಕಿ ಬಿಕ್ಕಿ ಅತ್ತಿದ್ದು ಎಂದೂ ಮರೆಯಲಾರದ ಕ್ಷಣಗಳಾಗಿವೆ. ಕೋವಿಡ್ ಕರ್ತವ್ಯ ನಿರತ, ನರ್ಸ್ ಆಗಿದ್ದ ಮಗುವಿನ ತಾಯಿ 15 ದಿನಗಳಿಂದಲೂ ಮನೆಗೆ ಹೋಗಿರಲಿಲ್ಲ. ದೂರದಿಂದಲೇ ಮಗಳನ್ನು ನೋಡಿ ಕೈಬೀಸಿ ಅಳುತ್ತಲೇ ಮಹಾತಾಯಿ ಆಸ್ಪತ್ರೆಯೊಳಗೆ ಹೋದ ದೃಶ್ಯ ನೋಡಿ ಅದೆಷ್ಟೋ ಜನರ ಕಣ್ಣಾಲಿಗಳು ಒದ್ದೆಯಾಗಿದ್ದವು.
ಕೊರೊನಾ ಸಮಯದಲ್ಲಿ ತಾಯಂದಿರ ದಿನಾಚರಣೆಯಂದು ಹೀಗೆ ಮಾಡಿ
- ನೀವು ನಿಮ್ಮ ಕುಟುಂಬದ ಜೊತೆಗೆ ಇರದಿದ್ದರೆ ಒಂದು ವಿಡಿಯೋ ಕಾಲ್ ಮಾಡಿ ತಾಯಿಯೊಂದಿಗೆ ಮಾತನಾಡಿ
- ತಾಯಿಗೊಂದು ಪತ್ರ ಬರೆಯಿರಿ
- ತಾಯಿಗಾಗಿ ನೀವೇ ಕೈಯಾರೆ ತಯಾರಿಸಿದ ಉಡುಗೊರೆ ನೀಡಿ
- ತಾಯಂದಿರ ದಿನದಂದು ನಿಮ್ಮ ಕೈಯಾರೆ ಅಡುಗೆ ಮಾಡಿ ಬಡಿಸಿ
ತಾಯಿಯೊಬ್ಬಳು ಮನೆಯಲ್ಲಿದ್ದರೆ ಮಕ್ಕಳಿಗೆ ಅದೇ ಸ್ವರ್ಗ. ಟೇಬಲ್ ಮೇಲೆ ಇಷ್ಟದ ಖಾದ್ಯಗಳು, ಹೋಂ ಮಾಡಲು ಸಹಾಯ, ಚಿತ್ರ ಬಿಡಿಸಲು ಸಹಾಯ, ಕಥೆ ಕೇಳುವುದು, ಸಿನಿಮಾ ನೋಡುವುದು ಹೀಗೆ ಎಲ್ಲದಕ್ಕೂ ತಾಯಿ ಬೇಕು. ಆದರೆ ಈ ಲಾಕ್ಡೌನ್ ಸಮಯದಲ್ಲಿ ಕುಟುಂಬ ಸಂಭಾಳಿಸಲು ತಾಯಂದಿರು ಸಾಕಷ್ಟು ಕಷ್ಟಪಡುತ್ತಿರುವುದೂ ನಿಜ. ಇಂದಿನ ಆಧುನಿಕ ಕಾಲದ ತಾಯಂದಿರು ಉದ್ಯೋಗ ಹಾಗೂ ಮನೆವಾರ್ತೆ ಎರಡನ್ನೂ ಸಮತೋಲಿತವಾಗಿ ನಿಭಾಯಿಸುತ್ತ ಸುಪರ್ಮಾಮ್ ಗಳೆಂದು ಹೆಸರಾಗಿರುವುದು ಉತ್ಪ್ರೇಕ್ಷೆಯೇನಲ್ಲ.