ಮಹಿಳೆಯರಿಗೆ ವಿಶೇಷವಾಗಿ ಮೆನೋಪಾಸ್ ಬಳಿಕ ನಿದ್ರೆಯಲ್ಲಿ ಉಂಟಾಗುವ ತೊಂದರೆಯು ಅವರಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೊಲಂಬಿಯಾ ಯುನಿವರ್ಸಿಟಿ ಅಧ್ಯಯನ ತಿಳಿಸಿದೆ. ಆರು ವಾರಗಳ ಕಾಲ 90 ನಿಮಿಷದ ನಿದ್ದೆ ಕಡಿತವೂ ಇನ್ಸುಲಿನ್ ಮಟ್ಟವನ್ನು ಶೇ 12ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.
ಮೆನೋಪಾಸ್ ಬಳಿಕ ಈ ನಿದ್ರೆ ಕಡಿತದಿಂದ ಆಗುವ ಪರಿಣಾಮ ಹೆಚ್ಚಿರುತ್ತದೆ. ನಿದ್ದೆ ಎಂಬುದು ಆರೋಗ್ಯಕ್ಕೆ ಅವಶ್ಯವಿದ್ದು, ರಾತ್ರಿ ಕನಿಷ್ಠ 7ರಿಂದ 9 ಗಂಟೆ ನಿದ್ರೆ ಅವಶ್ಯ ಎಂದಿದ್ದಾರೆ.
ಜರ್ನಲ್ ಡಯಾಬಿಟಿಸ್ ಕೇರ್ನಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಮಹಿಳೆಯರಲ್ಲಿ ಆರು ವಾರಗಳ ಕಾಲದ ಸೌಮ್ಯ ನಿದ್ದೆಯ ಕೊರತೆಯು ದೇಹದಲ್ಲಿ ಮಧುಮೇಹದ ಅಭಿವೃದ್ಧಿ ಅಪಾಯಕ್ಕೆ ಕಾರಣವಾಗಲಿದೆ. ಕಳಪೆ ನಿದ್ರೆಯು ಪುರುಷರಿಗಿಂತ ಮಹಿಳೆಯರಲ್ಲಿ ಕಾರ್ಡಿಯೊಮೆಟಬಾಲಿಕ್ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಮಹಿಳೆಯರ ಜೀವನದಲ್ಲಿ ಹಲವು ಹಂತದ ಬದಲಾವಣೆ: ಒಟ್ಟಾರೆ ಅವರ ಜೀವನ ಅವಧಿಯಲ್ಲಿ ಮಹಿಳೆಯರು ಮಗು ಜನನ, ಮುಟ್ಟು ನಿಲ್ಲುವಿಕೆ ಅವಧಿ ಸೇರಿದಂತೆ ಅನೇಕ ಹಂತಗಳಲ್ಲಿ ನಿದ್ರೆಯ ಅವಧಿಯಲ್ಲಿ ಬದಲಾವಣೆ ಕಾಣುತ್ತಾರೆ ಎಂದು ವಾರ್ಸಿಟಿಯ ವ್ಯಾಗೆಲೋಸ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್‌ನ ಅಸೋಸಿಯೇಟ್ ಪ್ರೊಫೆಸರ್ ಮೇರಿ ಪಿಯರೆ ಸೇಂಟ್ ಒಂಗೆ ತಿಳಿಸಿದ್ದಾರೆ.
ಅನೇಕ ಮಹಿಳೆಯರು ತಾವು ಪುರುಷರಿಗಿಂತ ಹೆಚ್ಚಿನ ನಿದ್ದೆಯನ್ನು ಪಡೆಯುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಅಧ್ಯಯನದಲ್ಲಿ 38 ಆರೋಗ್ಯಯುತ ಮಹಿಳೆಯರು ಭಾಗಿಯಾಗಿದ್ದಾರೆ. ಇದರಲ್ಲಿ 11 ಮಂದಿ ಮೆನೋಪಾಸ್ ಅವಧಿ ನಂತರದ ಮಹಿಳೆಯರಾಗಿದ್ದು, ಇವರು ಪ್ರತಿ ರಾತ್ರಿ ಕನಿಷ್ಠ 7 ಗಂಟೆ ನಿದ್ದೆ ಮಾಡಿದ್ದರು.
ಅರ್ಧ ಗಂಟೆ ತಡವಾದ ನಿದ್ದೆ: ಈ ಅಧ್ಯಯನದಲ್ಲಿ ಭಾಗಿದಾರರು ಎರಡು ಹಂತದ ಅಧ್ಯಯನಕ್ಕೆ ಯಾದ್ರಚ್ಛಿಕ ಮಾದರಿಯಲ್ಲಿ ಒಳಗಾಗಿದ್ದಾರೆ. ಮೊದಲ ಹಂತದಲ್ಲಿ ಅವರಿಗೆ ಅಗತ್ಯ ನಿದ್ದೆ ಹೊಂದುವಂತೆ ತಿಳಿಸಲಾಗಿತ್ತು. ಮತ್ತೊಂದು ಅಧ್ಯಯನದಲ್ಲಿ ಒಂದು ಗಂಟೆ ಅಥವಾ ಅರ್ಧ ಗಂಟೆ ತಡವಾಗಿ ನಿದ್ದೆಗೆ ಜಾರುವಂತೆ ತಿಳಿಸಲಾಗಿತ್ತು. ಅಲ್ಲಿಗೆ ಒಟ್ಟಾರೆ ಅವರ ರಾತ್ರಿ ನಿದ್ರೆ ಅವಧಿ ಆರು ಗಂಟೆ ಆಗಿತ್ತು.
ಈ ಹಂತಗಳನ್ನು ಆರು ವಾರಗಳ ಕಾಲ ಅಧ್ಯಯನ ನಡೆಸಲಾಗಿದೆ. ಈ ವೇಳೆ ಮೆನೋಪಾಸ್ ಅವಧಿಯ ನಂತರದ ಮಹಿಳೆಯರಲ್ಲಿ ಇನ್ಸುಲಿನ್ ಮಟ್ಟ ಸುಮಾರು 15 ರಿಂದ 20ರಷ್ಟು ಏರಿಕೆ ಕಂಡಿದೆ. ಒಟ್ಟಾರೆ ಅಧ್ಯಯನದಲ್ಲಿ ಸಾಮಾನ್ಯ ರಕ್ತದ ಸಕ್ಕರೆ ಮಟ್ಟ ಸ್ಥಿರವಾಗಿದೆ.
ಈ ನಿದ್ದೆ ಕಡಿತ ದೀರ್ಘ ಕಾಲದವರೆಗೆ ಸಾಗಿದರೆ, ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ಉಂಟಾಗುವ ಒತ್ತಡದಿಂದ ಅದು ವಿಫಲಗೊಳ್ಳಬಹುದು. ಕಡೆಗೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಆದಾಗ್ಯೂ ಹೊಟ್ಟೆಯಲ್ಲಿನ ಕೊಬ್ಬು ಕೂಡ ಇನ್ಸುಲಿನ್ ಪ್ರತಿರೋಧಕ್ಕೆ ಪ್ರಮುಖ ಕಾರಣವಾಗಿದೆ. ನಿದ್ದೆಯ ಕಡಿತವೂ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗಿದೆಯೇ ಹೊರತು ಕೊಬ್ಬಿನ ಹೆಚ್ಚಳದಿಂದ ಅಲ್ಲ. ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು ಮತ್ತು ಚಯಾಪಚಯ ಕ್ರಿಯೆಯ ಮೇಲೆ ಸೌಮ್ಯವಾದ ನಿದ್ರೆಯ ಕಡಿತದ ಪರಿಣಾಮವನ್ನು ಸೂಚಿಸುತ್ತದೆ ಎಂದು ಸೇಂಟ್ ಒಂಗೆ ವಿವರಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಿಶ್ವ ಮಧುಮೇಹ ದಿನ: 25ಕ್ಕಿಂತ ಕಡಿಮೆ ವಯಸ್ಸಿನವರಿಗೂ ಕಾಡುತ್ತಿದೆ ಸಕ್ಕರೆಕಾಯಿಲೆ!