ನ್ಯೂಯಾರ್ಕ್(ಅಮೆರಿಕ): ಅತ್ಯಂತ ಮಾರಣಾಂತಿಕ ಮೆದುಳಿನ ಕಾಯಿಲೆಯಾದ ಮೆನಿಂಜೈಟಿಸ್ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನರ ಮತ್ತು ಪ್ರತಿರಕ್ಷಣಾ ಕೋಶಗಳ ನಡುವಿನ ಕ್ರಾಸ್ಟಾಕ್ ಅನ್ನು ಹೇಗೆ ಹೈಜಾಕ್ ಮಾಡುತ್ತವೆ ಎಂಬುದನ್ನು ಅಮೆರಿಕದ ಸಂಶೋಧಕರು ಗುರುತಿಸಿದ್ದಾರೆ. ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ನೇತೃತ್ವದ ತಂಡವು ಇಲಿಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಬ್ಯಾಕ್ಟೀರಿಯಾ ಮೆದುಳಿನ ರಕ್ಷಣಾತ್ಮಕ ಪದರಗಳಲ್ಲಿನ ನರ ಕೋಶಗಳನ್ನು ಬಳಸಿಕೊಳ್ಳುತ್ತದೆ ಮತ್ತು ಸೋಂಕು ಮೆದುಳಿಗೆ ಅಥವಾ ಮೆನಿಂಜೈಟಿಸ್ಗೆ ಹರಡಲು ಅನುವು ಮಾಡಿಕೊಡುತ್ತದೆ ಎಂದು ತಿಳಿದು ಬಂದಿದೆ.
"ಸೋಂಕನ್ನು ಉಂಟುಮಾಡಲು ಬ್ಯಾಕ್ಟೀರಿಯಾದಿಂದ ಹೈಜಾಕ್ ಮಾಡಲಾದ ಮೆದುಳಿನ ರಕ್ಷಣಾತ್ಮಕ ಗಡಿಗಳಲ್ಲಿ ನ್ಯೂರೋಇಮ್ಯೂನ್ ಅಕ್ಷವನ್ನು ನಾವು ಗುರುತಿಸಿದ್ದೇವೆ. ಇದು ಬ್ಯಾಕ್ಟೀರಿಯಾದ ಇರುವಿಕೆಯನ್ನು ಖಚಿತಪಡಿಸುತ್ತದೆ ಮತ್ತು ತೀವ್ರ ಕಾಯಿಲೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ" ಎಂದು ಬ್ಲಾವಟ್ನಿಕ್ ಇನ್ಸಿಟಿಟ್ಯೂಟ್ನ ರೋಗನಿರೋಧಕ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಐಸಾಕ್ ಚಿಯು ಹೇಳಿದ್ದಾರೆ.
ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು, ಸೋಂಕಿಗೆ ಕಾರಣವಾಗುವ ಘಟನೆಗಳ ಈ ಆಣ್ವಿಕ ಸರಪಳಿಯಲ್ಲಿ ಎರಡು ಕೇಂದ್ರ ಪಾತ್ರಗಳನ್ನು ಗುರುತಿಸಿದೆ. ನರ ಕೋಶಗಳಿಂದ ಬಿಡುಗಡೆಯಾಗುವ ರಾಸಾಯನಿಕ ಮತ್ತು ರಾಸಾಯನಿಕದಿಂದ ನಿರ್ಬಂಧಿಸಲಾದ ಪ್ರತಿರಕ್ಷಣಾ ಕೋಶ ಗ್ರಾಹಿ ಒಂದನ್ನು ನಿರ್ಬಂಧಿಸುವುದರಿಂದ ಕ್ಯಾಸ್ಕೇಡ್ ಅನ್ನು ಅಡ್ಡಿಪಡಿಸಬಹುದು ಮತ್ತು ಬ್ಯಾಕ್ಟೀರಿಯಾದ ಆಕ್ರಮಣ ತಡೆಯಬಹುದು ಎಂದು ಅಧ್ಯಯನದ ಪ್ರಯೋಗಗಳಲ್ಲಿ ಕಂಡುಬಂದಿದೆ.
ಪ್ರತಿ ವರ್ಷ 1.2 ದಶಲಕ್ಷಕ್ಕೂ ಹೆಚ್ಚು ಬ್ಯಾಕ್ಟೀರಿಯಾ ಮೆನಿಂಜೈಟಿಸ್ ಪ್ರಕರಣಗಳು: "ರೋಗಕಾರಕಗಳು ಮೆದುಳನ್ನು ಪ್ರವೇಶಿಸುವ ಮೊದಲು ಮೆನಿಂಜಸ್ ಅಂತಿಮ ಅಂಗಾಂಶ ತಡೆಗೋಡೆಯಾಗಿ ಪಾತ್ರವಹಿಸುತ್ತದೆ. ಆದ್ದರಿಂದ ಈ ಗಡಿ ಅಂಗಾಂಶದಲ್ಲಿ ಏನಾಗುತ್ತದೆ ಎಂಬುದರ ಮೇಲೆ ನಾವು ನಮ್ಮ ಚಿಕಿತ್ಸಾ ಪ್ರಯತ್ನಗಳನ್ನು ಕೇಂದ್ರೀಕರಿಸಬೇಕಾಗಿದೆ" ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಫೆಲಿಪೆ ಪಿನ್ಹೋ ರಿಬೈರೊ ಹೇಳಿದರು. ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಜಾಗತಿಕವಾಗಿ ಪ್ರತಿ ವರ್ಷ 1.2 ದಶಲಕ್ಷಕ್ಕೂ ಹೆಚ್ಚು ಬ್ಯಾಕ್ಟೀರಿಯಾ ಮೆನಿಂಜೈಟಿಸ್ ಪ್ರಕರಣಗಳು ಸಂಭವಿಸುತ್ತವೆ ಎಂದು ತಿಳಿಸಿದೆ.
ಈ ರೋಗಕ್ಕೆ ಚಿಕಿತ್ಸೆ ನೀಡದಿದ್ದರೆ, ಇದು ಸೋಂಕಿಗೆ ಒಳಗಾದ 10 ಜನರಲ್ಲಿ ಏಳು ಜನರನ್ನು ಕೊಲ್ಲುತ್ತದೆ. ರೋಗಕ್ಕೆ ಚಿಕಿತ್ಸೆ ನೀಡುವುದರ ಮೂಲಕ ಸಾವಿನ ಪ್ರಮಾಣವನ್ನು 10 ರಿಂದ ಮೂರಕ್ಕೆ ಇಳಿಸಬಹುದು. ಆದರೆ, ಬದುಕುಳಿಯುವ ಐವರಲ್ಲಿ ಒಬ್ಬರು ಶ್ರವಣ ಅಥವಾ ದೃಷ್ಟಿ ನಷ್ಟ, ರೋಗಗ್ರಸ್ತವಾಗುವಿಕೆಗಳು, ದೀರ್ಘಕಾಲದ ತಲೆನೋವು ಮತ್ತು ಇತರ ನರವೈಜ್ಞಾನಿಕ ಸಮಸ್ಯೆಗಳನ್ನು ಒಳಗೊಂಡಂತೆ ಗಂಭೀರ ಪರಿಣಾಮಗಳನ್ನು ಅನುಭವಿಸುತ್ತಾರೆ ಎಂದು ತಿಳಿದುಬಂದಿದೆ.
ಪ್ರಸ್ತುತ ಚಿಕಿತ್ಸೆಗಳಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಪ್ರತಿಜೀವಕಗಳು ಮತ್ತು ಸೋಂಕು ಸಂಬಂಧಿತ ಉರಿಯೂತವನ್ನು ಕಡಿಮೆ ಮಾಡುವ ಸ್ಟೀರಾಯ್ಢ್ಗಳು, ರೋಗದ ಕೆಟ್ಟ ಪರಿಣಾಮಗಳನ್ನು ತಡೆಯಲು ವಿಫಲವಾಗಬಹುದು ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಉರಿಯೂತವನ್ನು ಕಡಿಮೆ ಮಾಡುವ ಸ್ಟೀರಾಯ್ಡ್ಗಳು, ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಬ್ಯಾಕ್ಟಿರಿಯಾದಿಂದ ರಕ್ಷಣೆಯನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ ಮತ್ತು ಸೋಂಕಿನ ಹರಡುವಿಕೆಯನ್ನು ಹೆಚ್ಚಿಸುತ್ತವೆ.
ಹೀಗಾಗಿ, ವೈದ್ಯರು ಸ್ಟೀರಾಯ್ಡ್ಗಳೊಂದಿಗೆ ಮೆದುಳನ್ನು ಹಾನಿಗೊಳಿಸುವ ಉರಿಯೂತವನ್ನು ನಿಯಂತ್ರಿಸಬೇಕು, ಆದರೆ ಈ ರೋಗನಿರೋಧಕ ಔಷಧಗಳು ದೇಹದ ರಕ್ಷಣೆಯನ್ನು ಮತ್ತಷ್ಟು ಹದಗೆಡಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಬುದ್ದಿಮಾಂಧ್ಯತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ ವಿಟಮಿನ್ ಡಿ!