ಹೈದರಾಬಾದ್ : ಒತ್ತಡ, ಆಯಾಸ ಹಾಗೂ ಜೀವನಶೈಲಿಯಲ್ಲಿನ ಬದಲಾವಣೆಗಳಂತಹ ಅನೇಕ ಸಮಸ್ಯೆಗಳಿಂದ ಹಲವರಲ್ಲಿ ಕಾಮಾಸಕ್ತಿ ಕಡಿಮೆಯಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ.
ತನ್ನ ಸಂಗಾತಿಯನ್ನು ಲೈಂಗಿಕ ಕ್ರಿಯೆಯಿಂದ ಸಂತೋಷ ಪಡಿಸದಿದ್ರೆ ಆಕೆಯೊಂದಿಗಿನ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕೆಲವು ಪರಿಸ್ಥಿತಿಗಳಲ್ಲಿ ಇದು ಗಂಭೀರವಾದ ಅನಾರೋಗ್ಯದ ಸಂಕೇತವಾಗಿರುವುದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.
ಸಂಗಾತಿಯೊಂದಿಗೆ ಲೈಂಗಿಕ ಸಂಭೋಗವು ಸಂಬಂಧವನ್ನು ಗಾಢವಾಗಿಸುವುದರ ಜೊತೆಗೆ ಪರಸ್ಪರ ಪ್ರೀತಿ ಹೆಚ್ಚಿಸುತ್ತದೆ ಎಂದು ಮನೋವೈದ್ಯ ಡಾ.ವೀಣಾ ಕೃಷ್ಣನ್ ಹೇಳುತ್ತಾರೆ. ಇದು ಇಬ್ಬರ ನಡುವಿನ ನಂಬಿಕೆ ಮತ್ತು ಅವಲಂಬನೆ ಹೆಚ್ಚಿಸುತ್ತದೆ.
ದೈಹಿಕ ಆರೋಗ್ಯಕ್ಕೆ ತೃಪ್ತಿಕರವಾದ ಲೈಂಗಿಕ ಜೀವನವು ಮುಖ್ಯವಾಗಿದೆ. ಏಕೆಂದರೆ, ಲೈಂಗಿಕತೆ ದೇಹದಲ್ಲಿ ಅನೇಕ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಅದು ನಮ್ಮನ್ನು ಅನೇಕ ರೋಗಗಳಿಂದಲೂ ರಕ್ಷಿಸುತ್ತದೆ ಎಂದು ಕೃಷ್ಣನ್ ವಿವರಿಸುತ್ತಾರೆ.
ಲೈಂಗಿಕ ಸಮಸ್ಯೆಗಳ ಬಗ್ಗೆ ಅಥವಾ ತಮ್ಮ ಸಂಗಾತಿಯೊಂದಿಗೆ ಲೈಂಗಿಕ ಬಗ್ಗೆ ಮುಕ್ತವಾಗಿ ಮಾತನಾಡಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಇದರ ಪರಿಣಾಮ ಕ್ರಮೇಣ ದೈಹಿಕ ಸಂಬಂಧದ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಕೆಲವು ಆಹಾರಗಳನ್ನು ತಿನ್ನುವ ಮೂಲಕ ಕಡಿಮೆ ಲೈಂಗಿಕ ಬಯಕೆಗೆ ವಿದಾಯ ಹೇಳಬಹುದು ಎಂದು ಹೊಸ ಸಂಶೋಧನೆಯು ಕಂಡು ಹಿಡಿದಿದೆ.
ಈ ಆಹಾರಗಳು ಕಾಮಾಸಕ್ತಿಯನ್ನು ಹೆಚ್ಚಿಸುವಂತಹ ದೊಡ್ಡ ವ್ಯತ್ಯಾಸವನ್ನು ಮಾಡುತ್ತವೆ. ಜೊತೆಗೆ ನಿಮ್ಮ ಶಕ್ತಿಯನ್ನು ಹೆಚ್ಚಿಸುವಷ್ಟು ಪೌಷ್ಟಿಕಾಂಶವನ್ನು ಹೊಂದಿವೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.
ಕಾಮಾಸಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು..
ತರಕಾರಿ, ಹಣ್ಣುಗಳು, ಧಾನ್ಯಗಳು, ಆರೋಗ್ಯಕರ ಎಣ್ಣೆಗಳು, ಬೀಜಗಳು, ಸಮುದ್ರಾಹಾರ ಹಾಗೂ ದ್ವಿದಳ ಧಾನ್ಯಗಳಂತಹ ಕೆಲವು ಆಹಾರಗಳು ನಿಮ್ಮ ಹೃದಯಕ್ಕೆ ಒಳ್ಳೆಯದು. ಕಾಮವನ್ನು ಹೆಚ್ಚಿಸಲು ಸಿಂಪಿಗಳು ಬಹುಶಃ ಅತ್ಯುತ್ತಮ ಆಯ್ಕೆ. ಸಂಪಿಗಳಲ್ಲಿ ಸತುವು ಅಧಿಕವಾಗಿದ್ದು, ಅದು ನಿಮ್ಮ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸುತ್ತದೆ ಹಾಗೂ ನಿಮ್ಮ ರಕ್ತದ ಹರಿವನ್ನು ಹೆಚ್ಚಿಸುತ್ತದೆ.
ಮತ್ತೊಂದು ಸಮುದ್ರಾಹಾರ ಆಯ್ಕೆಯೆಂದರೆ ಸಾಲ್ಮನ್ ಜಾತೀಯ ಮೀನು. ಇದು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಅಗತ್ಯ ಜೀವಸತ್ವಗಳೊಂದಿಗೆ ರಕ್ತದ ಹರಿವನ್ನು ಹೆಚ್ಚಿಸಲು ಕಾರಣವಾಗುತ್ತದೆ.
ಕೆಂಪು ಮಾಂಸ, ಬೇಯಿಸಿದ ಬೀನ್ಸ್, ಹಾಲು, ಗೋಡಂಬಿ, ಕುಂಬಳಕಾಯಿ ಬೀಜಗಳು, ಬಾದಾಮಿ ಹಾಗೂ ಕೆಲವು ಧಾನ್ಯಗಳು. ಇವುಗಳಲ್ಲಿ ಸತುವು ಅಧಿಕವಾಗಿರುವುದರಿಂದ ಇದನ್ನು ತಿಂದರೆ ಲೈಂಗಿಕ ಶಕ್ತಿ ಹೆಚ್ಚಾಗುತ್ತದೆ. ಆವಕಾಡೊ ಹಣ್ಣು ಸೇವನೆಯಿಂದ ಆರೋಗ್ಯಕರ ರಕ್ತದ ಹರಿವು ಹೆಚ್ಚಾಗುವ ಜೊತೆಗೆ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ನಿರ್ವಹಿಸುತ್ತದೆ.
ಸಿಟ್ರಸ್ ಹಣ್ಣುಗಳೂ ಲೈಂಗಿಕತೆಗೆ ಶಕ್ತಿ..
ಕಾಮವನ್ನು ಹೆಚ್ಚಿಸಲು ಮತ್ತು ಆರೋಗ್ಯಕರ ಹೃದಯವನ್ನು ಕಾಪಾಡಿಕೊಳ್ಳಲು ಆರಿಸಿಕೊಳ್ಳಬಹುದಾದ ಇತರ ಆಹಾರ ಪದಾರ್ಥಗಳೆಂದರೆ ಸೇಬು, ದ್ರಾಕ್ಷಿಗಳು, ಬಿಸಿ ಮೆಣಸು, ಕೆಂಪು ವೈನ್ ಹಾಗೂ ಚಹಾ. ರಕ್ತದ ಹರಿವನ್ನು ಸುಧಾರಿಸುವ ಡಾರ್ಕ್ ಚಾಕೊಲೇಟ್‌ನಂತಹ ಕೋಕೋ ಉತ್ಪನ್ನಗಳನ್ನೂ ಸೇವಿಸಬಹುದು.
ಇದರ ಜೊತೆಗೆ ಪಾಲಕ್, ಮೂಲಂಗಿ, ಲೆಟಿಸ್, ಸೆಲರಿ ಹಾಗೂ ಅರುಗುಲಾವನ್ನು ಒಳಗೊಂಡಿರುವ ಹೆಚ್ಚಿನ ನೈಟ್ರೇಟ್ ಆಹಾರಗಳನ್ನು ಸೇವಿಸಬಹುದು. ಈ ವಿಭಿನ್ನ ಆಹಾರಗಳು ಖಂಡಿತವಾಗಿಯೂ ನಿಮಗೆ ಸಹಾಯ ಮಾಡಬಹುದಾದರೂ, ಅವು ಸಾಕಾಗುವುದಿಲ್ಲ. ಬಯಕೆ, ನೋವು ಅಥವಾ ದುರ್ಬಲತೆಯ ಕೊರತೆಯು ನಿಮ್ಮನ್ನು ತಡೆ ಹಿಡಿಯುತ್ತಿದ್ದರೆ ಒಮ್ಮೆ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯಕೀಯ ತಜ್ಞರು ಶಿಫಾರಸು ಮಾಡುತ್ತಾರೆ.