ಮಳೆಗಾಲ ಆರಂಭವಾಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಮತ್ತು ಬಾಯಿ ಚಪ್ಪರಿಸುವ ತಿಂಡಿಗಳ ಬಯಕೆಗಳು ಉಲ್ಬಣಗೊಳ್ಳುತ್ತದೆ. ಈ ಸಂದರ್ಭದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಆರೋಗ್ಯದ ಜೊತೆಯ ಯಾವುದೇ ರಾಜಿ ಮಾಡುವುದು ಸರಿಯಲ್ಲ. ಮಳೆಗಾಲದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ಆರೋಗ್ಯಕರ ಆಹಾರ ಪದ್ದತಿಯನ್ನು ರೂಢಿಸಿಕೊಂಡು ಫಿಟ್ ಆಗಿರಬೇಕು ಎನ್ನುತ್ತಾರೆ ವೈದ್ಯರು. ಈ ಸಂಬಂಧ ವೈದ್ಯೆ ಮತ್ತು ಪ್ರಮಾಣೀಕೃತ ಪೋಷಕಾಂಶ ತಜ್ಞೆಯಾಗಿರುವ ಡಾ. ರೋಹಿಣಿ ಪಾಟೀಲ್ ಸಲಹೆ ನೀಡಿದ್ದಾರೆ.
ಹೈಡ್ರೇಷನ್: ಮಳೆಗಾಲವಾದರೂ ಈ ಸಮಯದಲ್ಲಿ ಅತಿ ಹೆಚ್ಚು ನೀರು ಕಡಿಯಬೇಕು. ವಾತಾವರಣ ತಂಬಿದ್ದರೂ ನಮ್ಮ ದೇಹ ನಿರ್ಜಲೀಕರಣಗೊಳ್ಳುತ್ತದೆ. ಮಳೆಗಾಲ ಅನೇಕ ವೇಳೆ ಹೆಚ್ಚು ಶುಷ್ಕತೆಯಿಂದ ಕೂಡಿರುತ್ತದೆ. ಇದರಿಂದಾಗಿ ಬೆವರುವಿಕೆ ಮತ್ತು ನೀರಿನಾಂಶ ನಷ್ಟವಾಗಬಹುದು. ದಿನಕ್ಕೆ ಕನಿಷ್ಟ 8 ಲೋಟ ನೀರು ಕುಡಿಯುವುದು ಅವಶ್ಯಕ.
ಬಿಸಿ ಪಾನೀಯ: ಈ ಸಮಯದಲ್ಲಿ ಹರ್ಬಲ್ ಟೀ, ಸೂಪ್ ಮತ್ತು ಶುಂಠಿಯಾಧಾರಿತ ಬಿಸಿ ಪಾನೀಯ ಉತ್ತಮವಾಗಿರುತ್ತದೆ. ಇದು ದೇಹವನ್ನು ಬೆಚ್ಚಗಿಡುವ ಜೊತೆಗೆ ಆರೋಗ್ಯಕ್ಕೂ ಪ್ರಯೋಜನ ನೀಡುತ್ತದೆ. ಹರ್ಬಲ್ ಟೀ, ಗ್ರೀನ್ ಟೀಯಂತಹ ಚಹಾಗಳು ಆ್ಯಂಟಿಆಕ್ಸಿಡೆಂಟ್ ನೀಡಿ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ವಿಶೇಷವಾಗಿ ಸಸ್ಯಾಧಾರಿತ ಸೂಪ್ಗಳು ಪೋಷಕಾಂಶವನ್ನು ನೀಡುತ್ತದೆ.
ಋತುಮಾನದ ಹಣ್ಣುಗಳು: ಈ ಸಮಯದಲ್ಲಿ ಅನೇಕ ಹಣ್ಣುಗಳು ಲಭ್ಯವಿದ್ದು, ಅದರ ರುಚಿ ಸವಿಯಬಹುದು. ಸೇಬು, ಪಿಯರ್, ದಾಳಿಂಬೆ ಮತ್ತು ಕಿತ್ತಳೆಯಲ್ಲಿ ಸಮೃದ್ಧ ವಿಟಮಿನ್ ಮತ್ತು ಮಿನರಲ್ಸ್ ಇದ್ದು ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ಈ ಹಣ್ಣುಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಸೋಂಕಿನ ವಿರುದ್ಧ ಹೋರಾಡಿ, ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ವಿಟಮಿನ್ ಸಿ ಸಮೃದ್ಧ ಆಹಾರ: ನಿಂಬೆ, ಕಿತ್ತಳೆ, ದ್ರಾಕ್ಷಿಹಣ್ಣುಗಳಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ ಇರುತ್ತದೆ. ಕಿವಿ, ಬೆಲ್ ಪೆಪ್ಪರ್ ಮತ್ತು ಬ್ರಾಕೋಲಿಗಳಲ್ಲಿ ಅತ್ಯುತ್ತಮ ಪೋಷಕಾಂಶಗಳಿದೆ. ವಿಟಮಿನ್ ಸಿ ಬಿಳಿ ರಕ್ತಕೋಶವನ್ನು ಉತ್ಪತ್ತಿ ಮಾಡುತ್ತದೆ. ಇದು ಸೋಂಕಿನ ವಿರುದ್ಧ ಹೋರಾಡಲು, ದೇಹದ ರಕ್ಷಣೆ ಹೆಚ್ಚಿಸುತ್ತದೆ.
ಸುಧಾರಿತ, ಸಮತೋಲಿತ ಆಹಾರ: ಧಾನ್ಯ, ತೆಳು ಪ್ರೋಟಿನ್ ಮತ್ತು ತರಕಾರಿಗಳ ಮಿಶ್ರಣದ ಆಹಾರಗಳ ಸಂಯೋಜನೆ ಆಹಾರಕ್ಕೆ ಲಾಭವಾಗಲಿದೆ. ಇದು ಹೆಚ್ಚಿನ ಪೋಷಕಾಂಶ ನೀಡುವ ಜೊತೆಗೆ ಹೆಚ್ಚು ತಿಂದ ಅಥವಾ ಆಲಸ್ಯದ ಭಾವನೆ ಮೂಡಿಸುವುದಿಲ್ಲ. ಬ್ರೌನ್ ರೈಸ್, ಓಟ್ಸ್ಗಳು ಶಕ್ತಿಯನ್ನು ನೀಡಿದರೆ, ಚಿಕನ್, ಮೀನು, ಟೊಫು ಸೇರಿದಂತೆ ಮತ್ತಿತ್ತರವೂ ಪ್ರೋಟಿನ್ ಒದಗಿಸುತ್ತದೆ. ತರಕಾರಿಗಳು ಅಗತ್ಯ ವಿಟಮಿನ್, ಮಿನರಲ್ಸ್ ಒದಗಿಸುತ್ತದೆ.
ಪ್ರೊಬಯಾಟಿಕ್ಸ್: ಪ್ರೊಬಯೋಟಿಸ್ಸ್ ಸಮೃದ್ದ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಉತ್ತಮ. ಯೋಗರ್ಟ್, ಕೆಫೀರ್, ಹುದುಗಿಸಿದ ತರಕಾರಿಗಳು ಆರೋಗ್ಯಕ್ಕೆ ವಿಶೇಷವಾಗಿ ಕರುಳಿಗೆ ಪ್ರಯೋಜನ ನೀಡುತ್ತದೆ. ಇದು ಜೀರ್ಣಾಂಗವ್ಯೂಹದ ಸಮಸ್ಯೆಯಿಂದ ಕಾಪಾಡುತ್ತದೆ.
ಬೆಳ್ಳುಳ್ಳಿ ಮತ್ತು ಈರುಳ್ಳಿ: ಆಹಾರದಲ್ಲಿ ಇವುಗಳನ್ನು ಸೇರಿಸುವುದರಿಂದ ಅವುಗಳು ಸಾಮಾನ್ಯ ಸೋಂಕಿನ ವಿರುದ್ಧ ನಿಮ್ಮನ್ನು ರಕ್ಷಣೆ ಮಾಡುತ್ತದೆ. ವಿಶೇಷವಾಗಿ ಉಸಿರಾಟದ ಸೋಂಕನ್ನು ತಡೆಯುತ್ತದೆ. ಇದು ರುಚಿ ಜೊತೆಗೆ ಪೋಷಕಾಂಶದ ಮೌಲ್ಯವನ್ನು ಹೆಚ್ಚಿಸುತ್ತದೆ.
ಬೀದಿಬದಿ ಆಹಾರ ತಪ್ಪಿಸಿ: ಈ ಸಮಯದಲ್ಲಿ ಆಹಾರ ಸಂಬಂಧಿ ಸೋಂಕುಗಳಿಂದ ತಪ್ಪಿಸಿಕೊಳ್ಳಲು ಬೀದಿ ಬದಿಯ ಆಹಾರಗಳನ್ನು ತಪ್ಪಿಸುವುದು ಉತ್ತಮ. ಮಳೆಗಾಲದಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆ ಹೆಚ್ಚಿರುವುದರಿಂದ ಬೀದಿ ಬದಿ ಆಹಾರ ತಪ್ಪಿಸುವುದು ಉತ್ತಮ. ಇದರ ಬದಲಾಗಿ ಸುರಕ್ಷಿತ, ಸುಲಭವಾಗಿ ಜೀರ್ಣವಾಗುವ ಮನೆ ಆಹಾರಕ್ಕೆ ಆದ್ಯತೆ ನೀಡಿ.
ಸರಿಯಾಗಿ ಆಹಾರ ಶೇಖರಣೆ: ಮಳೆಗಾಲದಲ್ಲಿ ತೇವಾಂಶದಿಂದ ಬಲುಬೇಗ ಆಹಾರ, ಧಾನ್ಯಗಳು ಹಾಳಾಗುತ್ತದೆ. ಈ ಹಿನ್ನಲೆ ಸರಿಯಾದ ಕಂಟೈನರ್ಗಳಿಂದ ತರಕಾರಿ, ಹಣ್ಣುಗಳನ್ನು, ಆಹಾರಗಳನ್ನು ಸಂರಕ್ಷಿಸಬೇಕಿದೆ. ಇದರಿಂದ ಆಹಾರದ ಗುಣಮಟ್ಟ ಕಾಪಾಡುವ ಜೊತೆಗೆ ಆಹಾರ ಸಂಬಂಧಿ ಸಮಸ್ಯೆಯ ಅಪಾಯವನ್ನು ಕಡಿಮೆ ಮಾಡಬಹುದು.
ಇದನ್ನೂ ಓದಿ: ತಿನ್ನುವ ಪ್ರೋಟಿನ್ ಬೆಸ್ಟೇ ಅಥವಾ ಕುಡಿಯುವುದಾ; ತಜ್ಞರು ಹೇಳುವುದೇನು?