ಆಧುನಿಕ ಜೀವನ ಶೈಲಿ, ದಿನವಿಡೀ ಒಂದೇ ಜಾಗದಲ್ಲಿ ಕುಳಿತು ದುಡಿಯುವ ತಾಂತ್ರಿಕ ಜಗತ್ತಿನೊಳಗೆ ಮನುಷ್ಯನ ದೇಹಕ್ಕೆ ಸಿಗುವ ವ್ಯಾಯಾಮ ಬಹಳ ಕಡಿಮೆ. ಹಸಿವಾದಾಗ ಸಿಕ್ಕ ಆಹಾರವನ್ನು ತಿಂದು ದೇಹ ಬೆಳೆಸಿಕೊಂಡವರು ಇದೀಗ ದೇಹದ ತೂಕ ಇಳಿಸುವ ಚಿಂತೆ ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡುತ್ತಾರೆ. ಹೆಚ್ಚಿನವರು ತೂಕ ಇಳಿಸಲು ಖಾಲಿ ಹೊಟ್ಟೆಯಲ್ಲಿ ಗಂಟೆಗಳ ಕಾಲ ವ್ಯಾಯಾಮ ಮಾಡಿದರೆ ಸಾಕು ಎಂದು ಭಾವಿಸುತ್ತಾರೆ. ಆದರೆ, ಸಮತೋಲಿತ ಆಹಾರ ಸೇವನೆಯೊಂದಿಗೆ ತೂಕ ಇಳಿಸಿಕೊಳ್ಳಬೇಕು ಎನ್ನುತ್ತಾರೆ ಫಿಟ್ನೆಸ್ ತಜ್ಞರು. ಯಾವೆಲ್ಲ ಸಮತೋಲಿತ ಆಹಾರದಿಂದ ದೇಹದ ತೂಕವನ್ನು ಆರೋಗ್ಯಕರವಾಗಿ ಇಳಿಸಿಕೊಳ್ಳಬಹುದು ಎಂಬುದಕ್ಕೆ ತಜ್ಞರು ನೀಡಿರುವ ಸಲಹೆ ಇಲ್ಲಿದೆ.
ಮೊಟ್ಟೆ: ನಮ್ಮ ದೈನಂದಿನ ಆಹಾರದಲ್ಲಿ ಪ್ರೋಟೀನ್‌ಗಳ ಪಾತ್ರ ಬಹಳ ಮುಖ್ಯ. ದಿನವಿಡೀ ಸಕ್ರಿಯವಾಗಿರಲು ಮೊಟ್ಟೆ ಉಪಯುಕ್ತ ಆಹಾರ. ಬೆಳಗ್ಗಿನ ಉಪಾಹಾರದೊಂದಿಗೆ ಮೊಟ್ಟೆಯನ್ನೂ ಸೇರಿಸಿಕೊಳ್ಳುವುದು ತುಂಬಾ ಒಳ್ಳೆಯದು. ಏಕೆಂದರೆ ಮೊಟ್ಟೆಯಲ್ಲಿ ಸರಾಸರಿ ಆರು ಗ್ರಾಂ ಪ್ರೋಟೀನ್, 72 ಕ್ಯಾಲೋರಿಗಳಿರುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ದಿನನಿತ್ಯ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ಎಲ್ಲಾ ಪೋಷಕಾಂಶಗಳನ್ನು ಪಡೆದು ಆರೋಗ್ಯವಾಗಿರಬಹುದು. ಜೊತೆಗೆ ದೇಹದ ತೂಕದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
ಸೇಬು: ಎಲ್ಲಾ ಋತುಗಳಲ್ಲಿ ಲಭ್ಯವಿರುವ ಸೇಬನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ಉಸಿರಾಟದ ತೊಂದರೆಗಳಿಂದ ಪಾರಾಗಬಹುದು. ಅದಷ್ಟೇ ಅಲ್ಲದೆ ದಿನನಿತ್ಯದ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ಹೂಕೋಸು, ಕುಂಬಳಕಾಯಿ ಮತ್ತು ಲೆಟಿಸ್ ಸೇವಿಸುವುದರಿಂದ ಮೂಳೆ ಸಮಸ್ಯೆಗಳನ್ನು ತಡೆಯಬಹುದು.
ವಾಲ್ನಟ್ಸ್/ಬಾದಾಮಿ: ಮಹಿಳೆಯರು ದಿನನಿತ್ಯ ಒಂದಿಲ್ಲೊಂದು ಕೆಲಸಗಳನ್ನು ತೊಡಗಿಕೊಂಡೇ ಇರುತ್ತಾರೆ. ಕೆಲಸದ ಒತ್ತಡ ಮೆದುಳಿನ ಕಾರ್ಯಕ್ಷಮತೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಪ್ರತಿದಿನ ಒಂದು ಹಿಡಿ ವಾಲ್ನಟ್ಸ್ ಅಥವಾ ಬಾದಾಮಿ ಸೇವಿಸುವುದು ಉತ್ತಮ. ಇವುಗಳಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ಗಳು ಹಾಗೂ ಒಮೆಗಾ 3 ಆಮ್ಲಗಳು ಇರುವುದರಿಂದ ನಿಮ್ಮನ್ನು ಆರೋಗ್ಯ ಸಮಸ್ಯೆಯಿಂದ ರಕ್ಷಿಸುತ್ತವೆ.
ಟೊಮೆಟೊ ಸಾಸ್: ಟೊಮೆಟೊದಲ್ಲಿರುವ ಲೈಕೋಪೀನ್ ಅಂಶ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಏಕೆಂದರೆ ರಕ್ತದಲ್ಲಿ ಲೈಕೋಪೀನ್ ಅಂಶವಿರುವುದರಿಂದ ಮಹಿಳೆಯರು ಶೇ32ರಷ್ಟು ಹೃದ್ರೋಗಗಳಿಂದ ತಪ್ಪಿಸಿಕೊಳ್ಳಬಹುದು ಎಂದು ಹಲವು ಅಧ್ಯಯನಗಳು ಹೇಳುತ್ತವೆ.
ಒಣ ಕರ್ಜೂರ: ಸಾಮಾನ್ಯವಾಗಿ ಆಸ್ಟಿಯೊಪೊರೋಸಿಸ್ ಮಹಿಳೆಯರಲ್ಲಿ ಹೆಚ್ಚಾಗಿರುತ್ತವೆ. ಕ್ಯಾಲ್ಸಿಯಂ ಕೊರತೆಯಿಂದ ಬೋನ್ಗಳು ಒಡೆಯುತ್ತವೆ. ಇದಕ್ಕೆ ಪರಿಹಾರವೆಂದರೆ ಒಣ ಖರ್ಜೂರ. ಕಬ್ಬಿಣಾಂಶದ ಜೊತೆಗೆ ಹೆಚ್ಚಿನ ಪ್ರೋಟೀನ್ ಮತ್ತು ಖನಿಜಗಳನ್ನು ಹೊಂದಿರುವ ಒಣ ಕರ್ಜೂರಗಳನ್ನು ಪ್ರತಿದಿನ ತಿನ್ನುವುದರಿಂದ ಮೂಳೆಯ ಸಾಂದ್ರತೆ ಗಮನಾರ್ಹವಾಗಿ ಹೆಚ್ಚಾಗುವುದಲ್ಲದೆ ಸ್ನಾಯುಗಳೂ ಬಲಿಷ್ಠವಾಗುತ್ತವೆ.
ಇದನ್ನೂ ಓದಿ: ಚಳಿಗಾಲದಲ್ಲಿ ವ್ಯಾಯಾಮವಿಲ್ಲದೇ ತೂಕ ಕಳೆದುಕೊಳ್ಳಬೇಕಾ? ಇಲ್ಲಿದೆ ನೋಡಿ ಸಲಹೆಗಳು..