ಜರ್ಮನ್: ಸೊಳ್ಳೆ ಕಡಿತವು ಕೆಲವೊಮ್ಮೆ ಸಾಮಾನ್ಯ ಅಥವಾ ಮಲೇರಿಯಾ ಡೆಂಘಿಯಂತಹ ಜ್ವರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಇದು ಮಾರಣಾಂತಿಕವೂ ಆಗಬಹುದು. ಇನ್ನೂ ಕೆಲವೊಮ್ಮೆ ಏನೂ ಆಗದೇ, ಕೆಲವು ಸಮಯ ತುರಿಕೆ, ಅಲರ್ಜಿಗೂ ಕಾರಣವಾಗುತ್ತದೆ. ಆದರೆ ಜರ್ಮನಿಯಲ್ಲಿ ಒಬ್ಬ ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದಿದೆ ಈ ಸೊಳ್ಳೆ.
ಜರ್ಮನಿಯ 27 ವರ್ಷದ ಸೆಬಾಸ್ಟಿಯನ್ ರೊಟ್ಷ್ಕೆ ಸೊಳ್ಳೆ ಕಡಿತದಿಂದ ಸಾವನ್ನಪ್ಪಿದ್ದಾನೆ. ಸರಿಸುಮಾರು 30 ಸರ್ಜರಿ, ನಾಲ್ಕು ಬಾರಿ ಕೋಮಾಗೆ ತೆರಳಿದ್ದ ಈತ ಕೊನೆಗೂ ಸಾವನ್ನಪ್ಪಿದ್ದಾನೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಕಳೆದ ಬೇಸಿಗೆ ಕಾಲದಲ್ಲಿ ಸೆಬಾಸ್ಟಿಯನ್ ಸೊಳ್ಳೆ ಕಡಿತಕ್ಕೆ ಒಳಗಾಗಿದ್ದ. ಕೆಲವು ದಿನಗಳ ನಂತರ ಇದರ ಪರಿಣಾಮ ಎದುರಿಸಿದ ಆತ ತಕ್ಷಣಕ್ಕೆ ವೈದ್ಯರನ್ನು ಭೇಟಿಯಾಗಿದ್ದಾನೆ. ಆದರೆ, ಕ್ರಮೇಣ ಈತನ ಎರಡು ಕಾಲು ಬೆರಳುಗಳು ಗಂಭೀರವಾಗಿ ಹಾನಿಗೊಂಡಿವೆ. ಇದರಿಂದ ಈತ 30 ಸರ್ಜರಿಗೆ ಕೂಡ ಒಳಗಾಗಿದ್ದಾನೆ. ಈ ಎಲ್ಲ ಚಿಕಿತ್ಸೆಗಳ ಮಧ್ಯೆ ಆತ ನಾಲ್ಕು ಬಾರಿ ಕೋಮಾಕ್ಕೂ ಕೂಡ ಜಾರಿದ್ದಾನೆ. ಇಷ್ಟೇ ಅಲ್ಲದೇ, ಲಿವರ್, ಕಿಡ್ನಿ, ಹೃದಯ ಮತ್ತು ಇತರೆ ಅಂಗಗಳು ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಆತನ ರಕ್ತ ಕೂಡ ವಿಷಕಾರಿಯಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.
ಸೆಬಾಸ್ಟಿಯನ್ ಅನೇಕ ಬಾರಿ ಸಾವಿನ ಮನೆ ಕದ ತಟ್ಟಿದ್ದಾನೆ. ಆದರೆ, ಈತನ ರೋಗ ಲಕ್ಷಣ ಪತ್ತೆ ಮಾಡಿದ್ದ ವೈದ್ಯರು ಪ್ರಾಣ ಉಳಿಸುವಲ್ಲಿ ಸಾಕಷ್ಟು ಪ್ರಯತ್ನಿಸಿ ಚಿಕಿತ್ಸೆ ನೀಡಿದ್ದಾರೆ. ಸೆಬಾಸ್ಟಿಯನ್ಗೆ ಏಷಿಯನ್ ಟೈಗರ್ ಎಂಬ ಸೊಳ್ಳೆ ಕಚ್ಚಿದೆ. ಈ ಸೊಳ್ಳೆ ಕಡಿತ ಭಾರಿ ಅಪಾಯಕಾರಿ. ಜಿಕಾ ವೈರಲ್, ವೆಸ್ಟ್ ನೈಲೆ ವೈರಸ್ ಮತ್ತು ಚಿಕುನ್‌ಗುನ್ಯಾ ಕೂಡ ಇದರಿಂದ ಸಂಭವಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಸೊಳ್ಳೆ ಪರದೆ ಮತ್ತು ಇತರೆ ಜಾಗ್ರತೆವಹಿಸುವುದು ಅವಶ್ಯ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ: ಒಂದೇ ದಿನ 39 ಸಾವಿರ ಸೋಂಕಿತರು ಪತ್ತೆ