ಇತ್ತೀಚಿನ ದಶಕಗಳಲ್ಲಿ ಜಂಕ್ಫುಡ್ ಸೇವನೆಯ ಪ್ರಮಾಣ ಗಮನಾರ್ಹವಾಗಿ ಹೆಚ್ಚಳವಾಗುತ್ತಿದೆ. ಅಧಿಕ ಕ್ಯಾಲೊರಿ, ಅಧಿಕ ಸಕ್ಕರೆ, ಅನಾರೋಗ್ಯಕರ ಕೊಬ್ಬು, ಕಡಿಮೆ ಪೋಷಕಾಂಶಯುಕ್ತ ಆಹಾರ ಸೇವನೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ದುರದೃಷ್ಟಕರ ಸಂಗತಿ ಎಂದರೆ, ಈ ರೀತಿಯ ಆಹಾರ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಇಂಥ ಆಹಾರ ಪದ್ದತಿಯಿಂದಾಗಿ ಜಾಗತಿಕವಾಗಿ ಟೈಪ್ 2 ಡಯಾಬಿಟೀಸ್ ಸಾಂಕ್ರಾಮಿಕತೆ ಹೆಚ್ಚುತ್ತಿದೆ.
ಸಾಮಾನ್ಯವಾಗಿ ಮಧ್ಯ ಮತ್ತು ಹಿರಿಯ ವಯಸ್ಕರಲ್ಲಿ ಟೈಪ್ 2 ಡಯಾಬಿಟೀಸ್ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಮಕ್ಕಳು, ಹದಿಹರೆಯದವರು ಸೇರಿದಂತೆ ಎಲ್ಲ ವಯೋಮಾನದ ಜನರು ಮೇಲೂ ಇದು ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಜಂಕ್ ಫುಡ್ ಸೇವನೆ ಮತ್ತು ಟೈಪ್ 2 ಡಯಾಬಿಟೀಸ್ ನಡುವಿನ ಸಂಬಂಧಗಳ ಕುರಿತು ಆರೋಗ್ಯ ವೃತ್ತಿಪರರು ಮತ್ತು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.
ಜಂಕ್ ಆಹಾರಗಳ ಸೇವನೆ ಹೆಚ್ಚು ಕ್ಯಾಲೊರಿ ಸೇವನೆಗೆ ಕಾರಣವಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇದರಿಂದಾಗಿ ಜನರ ದೇಹದ ತೂಕ ಹೆಚ್ಚಳ ಮತ್ತು ಅಧಿಕ ಪ್ರಮಾಣದ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳು ಶೇಖರಣೆಯಾಗುತ್ತದೆ ಎಂದು ಗುರುಗ್ರಾಮ್ನ ಮೆಡಂಟಾದ ಎಂಡೋಕ್ರಿನೊಲಾಜಿ ಮತ್ತು ಡಯಬೆಟೊಲೊಜಿ ಹಿರಿಯ ನಿರ್ದೇಶಕ ಡಾ.ಸುನೀಲ್ ಕುಮಾರ್ ಮಿಶ್ರಾ ಎಚ್ಚರಿಸಿದ್ದಾರೆ.
ಮಕ್ಕಳಲ್ಲಿ ಹೆಚ್ಚಿದ ಅಪಾಯ: ದೇಹದಲ್ಲಿನ ಸಕ್ಕರೆ ಅಂಶದ ನಿರ್ವಹಣೆಗೆ ಪ್ಯಾನ್ಕ್ರೆಸ್ಗಳು ದೇಹದಲ್ಲಿನ ಇನ್ಸುಲಿನ್ ಹೆಚ್ಚಿಸಬೇಕಾಗುತ್ತದೆ. ಆದರೆ, ಇದರಲ್ಲಿ ತಪ್ಪಾದರೆ ಅದು ಮಧುಮೇಹ ಅಭಿವೃದ್ಧಿಗೆ ಕಾರಣವಾಗುತ್ತದೆ. ಜಂಕ್ ಫುಡ್ ಆಹಾರಗಳು ವಯಸ್ಕರು ಮತ್ತು ಮಕ್ಕಳಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಈ ರೀತಿ ಮಧುಮೇಹ ಹೆಚ್ಚುವ ಅಪಾಯದಲ್ಲಿ ಮಕ್ಕಳಿದ್ದಾರೆ. ಮಕ್ಕಳಲ್ಲಿ ಬಾಲ್ಯದ ಸ್ಥೂಲಕಾಯತೆ ಸ್ಥಿರವಾಗಿ ಏರುತ್ತಿರುವುದು ಇದಕ್ಕೆ ಕಾರಣ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಹೊಸ ಅಧ್ಯಯನದಲ್ಲಿ ಭಾರತದಲ್ಲಿ ಮಧುಮೇಹ ಮತ್ತು ಹೈಪರ್‌ಟೆನ್ಷನ್ ಸಂಖ್ಯೆ ಹೆಚ್ಚುತ್ತಿದ್ದು, ಇದು ಎಚ್ಚರಿಕೆ ಕರೆಗಂಟೆ ಎಂದು ತಿಳಿಸಿದೆ. ಈ ಕುರಿತು ದಿ ಲ್ಯಾನ್ಸೆಟ್ ಡಯಾಬಿಟೀಸ್ ಆ್ಯಂಡ್ ಎಂಡೋಕ್ರಿಯನೊಲಾಜಿಯಲ್ಲಿ ಪ್ರಕಟಿಸಲಾಗಿದೆ.
ಅಧ್ಯಯನದಲ್ಲಿ 136 ಮಿಲಿಯನ್ ಭಾರತೀಯರಲ್ಲಿ ಪೂರ್ವ ಮಧುಮೇಹ, 213 ಮಿಲಿಯನ್ ಜನರು ಅಧಿಕ ಕೊಲೆಸ್ಟ್ರಾಲ್, 185 ಮಿಲಿಯನ್ ಮಂದು ಅಧಿಕ ಎಲ್ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್‌ನಿಂದ ಬಳಲುತ್ತಿದ್ದಾರೆ. ಇನ್ನು 254 ಮಿಲಿಯನ್ ಮಂದಿ ಸಾಮಾನ್ಯ ಸ್ಥೂಲಕಾಯತೆ ಸಮಸ್ಯೆ ಹೊಂದಿದ್ದರೆ, 315 ಮಿಲಿಯನ್ ಮಂದಿ ಹೊಟ್ಟೆ ಸ್ಥೂಲಕಾಯತೆ ಹೊಂದಿದ್ದಾರೆ.
ಭಾರತದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಶೇ 65ರಷ್ಟಿದೆ. ಇದರಿಂದ ಶೇ 40ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಕ್ಕಳಲ್ಲಿ ಟೈಪ್ 2 ಮಧುಮೇಹ ಪ್ರಕರಣ ಹೆಚ್ಚಾಗುತ್ತಿದೆ. ಅದರಲ್ಲೂ ಹದಿಹರೆಯದ ಅಂದರೆ 12 ರಿಂದ 18 ವರ್ಷದ ಮಕ್ಕಳಲ್ಲಿ ಈ ಪ್ರಕರಣ ಜಾಸ್ತಿ. ಬಾಲ್ಯದಲ್ಲಿ ಸ್ಥೂಲಕಾಯತೆ ಹೊಂದಿರುವ ಮಕ್ಕಳು ದೊಡ್ಡವರಾದ ಬಳಿಕವೂ ಸ್ಥೂಲಕಾಯತೆ ಸಮಸ್ಯೆಗೆ ಒಳಗಾಗಬಹುದು. ಹೆಚ್ಚುವರಿಯಾಗಿ ಟೈಪ್2 ಮಧುಮೇಹ ಹೊಂದಿರುವ ಯುವಜನತೆ ಕೂಡ ಭವಿಷ್ಯದಲ್ಲಿ ತೊಂದರೆ ಎದುರಿಸಬಹುದು.
ಆರೋಗ್ಯ ವೃತ್ತಿಪರರರು ಹೇಳುವಂತೆ, ಜನರು ಆರೋಗ್ಯಕರ ಡಯಟ್ ಎಂದು ಸೇವಿಸುವ ಕೆಲವು ಪೋಷಕಾಂಶಯುಕ್ತ ಅಲ್ಟ್ರಾ ಸಂಸ್ಕರಿತ ಆಹಾರಗಳು ಕೂಡ ಮಕ್ಕಳಲ್ಲಿ ಸ್ಥೂಲಕಾಯತೆಗೆ ಕಾರಣವಾಗುತ್ತದೆ. ಇದು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಿ, ಟೈಪ್ 2 ಡಯಾಬಿಟೀಸ್ಗೆ ಕಾರಣವಾಗಿಸುತ್ತದೆ ಎಂದು ಕ್ಲಿನಿಕಲ್ ಡಯಾಟೀಷಿಯನ್ ಮತ್ತು ಫಂಕ್ಷನಲ್ ನ್ಯೂಟ್ರಿಷಿನಿಸ್ಟ್ ಮಿಲೊನಿ ಭಂದ್ರಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜನರು ಆರೋಗ್ಯಯುತ ಆಹಾರವನ್ನು ರುಚಿಯ ಆಧಾರದ ಮೇಲೆ ಆಯ್ಕೆ ಮಾಡುವಾಗ ಅದಕ್ಕೆ ತಕ್ಕಂತ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಹುರಿದುಂಬಿಸಬೇಕು. ಕನಿಷ್ಟ ಪಕ್ಷ ದಿನದಲ್ಲಿ 30 ನಿಮಿಷಗಳು ಸಕ್ರಿಯ ದೈಹಿಕ ಚಟುವಟಿಕೆಯಲ್ಲಿರಬೇಕು. ಇದರ ಜೊತೆಗೆ ಜನರಿಗೆ ಆರೋಗ್ಯಯುತ ಆಹಾರಗಳ ಆಯ್ಕೆ ಕುರಿತು ಶಿಕ್ಷಣ ನೀಡಬೇಕಿದೆ.
ಇದನ್ನೂ ಓದಿ: Healthy Food Habits: ಮಗುವಿನ ಜಂಕ್ ಫುಡ್ ಸೇವನೆಗೆ ಕಡಿವಾಣ ಹೇಗೆ? ಇಲ್ಲಿದೆ 5 ಸುಲಭೋಪಾಯ