ನವದೆಹಲಿ: ಭಾರತದಲ್ಲಿ ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಚಿಕಿತ್ಸೆಯಲ್ಲಿ ಬಳಕೆ ಮಾಡುತ್ತಿರುವ ಎರಡು ಔಷಧಗಳನ್ನು ನಿಷೇಧಿಸಲು ತಜ್ಞರು ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್ಗೆ ತಿಳಿಸಲಾಗಿದೆ. ಸಾವನ್ನಪ್ಪಿದ ಜಾನುವಾರುಗಳಲ್ಲಿ ಈ ಔಷಧಗಳ ಪ್ರಮಾಣವಿರುವ ಕಾರಣ ಇದನ್ನು ತಿನ್ನುವ ಹದ್ದುಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.
ವಕೀಲ ಗೌರವ್ ಕುಮಾರ್ ಬನ್ಸಾಲ್ ಎಂಬವರು ದೇಶದಲ್ಲಿ ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕುರಿತು ಸಲ್ಲಿಸಿದ್ದ ಪಿಐಎಲ್ ಅನ್ನು ನ್ಯಾ.ಸತೀಶ್ ಶರ್ಮಾ ಮತ್ತು ನ್ಯಾ.ಸೌರಭ್ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ ಆಲಿಸಿತು. ಏಪ್ರಿಲ್ನಲ್ಲಿ ಹೈಕೋರ್ಟ್ ಈ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡಿತ್ತು.
ಆರೋಗ್ಯ ಸಚಿವರು ಮತ್ತು ಕೇಂದ್ರ ಔಷಧ ನಿಯಂತ್ರಣ ಗುಣಮಟ್ಟ ಸಂಸ್ಥೆ ಈ ಸಂಬಂಧ ಅಫಿಡವಿಟ್ ಮೂಲಕ ಪ್ರತಿಕ್ರಿಯಿಸಿ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (ಡಿಎಎಚ್ಡಿ) ಮತ್ತು ತಜ್ಞರ ಅಭಿಪ್ರಾಯಕ್ಕಾಗಿ ಕೃಷಿ ತಜ್ಞರ ಸಲಹೆ ಪಡೆಯಲಾಗಿದೆ. ಡಿಎಎಚ್ಡಿ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ. ರಣಹದ್ದುಗಳ ಸಂರಕ್ಷಣೆಯ ದೃಷ್ಟಿಯಿಂದ ಜಾನುವಾರುಗಳಿಗೆ ಬಳಕೆ ಮಾಡುತ್ತಿರುವ ಕೆಟೊಪ್ರೊಫೆನ್ ಮತ್ತು ಅಸೆಕ್ಲೊಫೆನಕ್ ಅನ್ನು ನಿಷೇಧಿಸಲಾಗುವುದು ಎಂದು ತಿಳಿಸಿದೆ.
ರಣಹದ್ದುಗಳ ಸಂಖ್ಯೆ ಇಳಿಕೆ : ಪ್ರಾಣಿ ಮತ್ತು ಪರಿಸರದ ಮೇಲೆ ಪರಿಣಾಮ ಬೀರುತ್ತಿರುವ ಎಲ್ಲ ಔಷಧಗಳ ಮೇಲೂ ಕ್ರಮಕ್ಕೆ ಮುಂದಾಗಬೇಕು ಎಂಬ ಒತ್ತಾಯವೂ ಇದೆ. 2022ರಲ್ಲಿ ನ್ಯಾಯಾಲಯ, ಸಿಡಿಎಸ್ಸಿಒಗೆ ದೇಶದಲ್ಲಿ ರಣಹದ್ದುಗಳ ಸಂರಕ್ಷಣೆ ಮತ್ತು ಔಷಧದಿಂದ ದೇಶದಲ್ಲಿ ರಣಹದ್ದುಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲಿಸುವಂತೆ ನಿರ್ದೇಶಿಸಿತು. ಈ ಹಿನ್ನೆಲೆಯಲ್ಲಿ ಜಾನುವಾರುಗಳ ಔಷಧಗಳಲ್ಲಿ ಬಳಕೆ ಮಾಡುತ್ತಿರುವ ಡಿಸ್ಲೊಫೆನಕ್, ನಿಮೆಸುಲಿಡ್ ಕೆಟೊಪ್ರೊಫೆನ್ ಮತ್ತು ಅಸೆಕ್ಲೊಫೆನಕ್ ಔಷಧಗಳ ಪರಿಶೀಲನೆ ನಡೆಸಿದೆ. ಈ ಔಷಧಗಳು ಸೇವನೆಯಿಂದ ಶೇ 97ರಷ್ಟು ರಣಹದ್ದುಗಳ ಸಂಖ್ಯೆ ಕಡಿಮೆಯಾಗಿತ್ತು ಎಂದು ವರದಿ ಹೇಳುತ್ತದೆ.
3 ದಶಕದಲ್ಲಿ 40 ಮಿಲಿಯನ್ ರಣಹದ್ದು ಸಾವು: ಇದಕ್ಕೂ ಮೊದಲು ವಕೀಲರಾದ ಬನ್ಸಾಲ್, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ರಣಹದ್ದುಗಳ ಮೇಲೆ ಪರಿಣಾಮ ಉಂಟಾಗುತ್ತಿದ್ದು, ಕಳೆದ ಮೂರು ದಶಕದಲ್ಲಿ 40 ಮಿಲಿಯನ್ ಇದ್ದ ರಣಹದ್ದುಗಳ ಸಂಖ್ಯೆ 19,000ಕ್ಕೆ ಇಳಿದಿದೆ ಎಂದು ಮಾಹಿತಿ ನೀಡಿದ್ದಾರೆ. ಕಳೆದ 30 ವರ್ಷದಲ್ಲಿ 4 ಕೋಟಿ ರಣಹದ್ದುಗಳು ಸಾವನ್ನಪ್ಪಿರುವ ಅಂಕಿಅಂಶವನ್ನು ಅವರು ನೀಡಿದ್ದಾರೆ. ಅಂದರೆ ಪ್ರತಿ ವರ್ಷಕ್ಕೆ 13 ಲಕ್ಷ ರಣಹದ್ದುಗಳು ಸಾವನ್ನಪ್ಪುತ್ತಿವೆ. ವಿಷಕಾರಿ ಔಷಧದಿಂದ ಭಾರತದಲ್ಲಿ ಪ್ರತಿ ತಿಂಗಳು 1 ಲಕ್ಷ ರಣಹದ್ದುಗಳು ಸಾವನ್ನಪ್ಪುತ್ತಿದೆ ಎಂದು ವರದಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಬಂಡೀಪುರ, ನಾಗರಹೊಳೆಯಲ್ಲಿ 2 ದಿನಗಳ ರಣಹದ್ದು ಸಮೀಕ್ಷೆ ಪೂರ್ಣ