ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರೆದಂತೆ ವೈದ್ಯಕೀಯ ವಿಜ್ಞಾನವೂ ಅಭಿವೃದ್ಧಿ ಕಾಣುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯದ್ಭುತ ಎನಿಸುವಂತಹ ಸಾಧನೆಯನ್ನು ಮಾನವ ಮಾಡಿದ್ದಾರೆ. ಅಂಗಾಂಗ ಕಸಿ ವಿಚಾರದಲ್ಲೂ ಮಾನವ ಸಂಶೋಧನೆ ಅಭೂತಪೂರ್ವಾಗಿದೆ. ಮನುಷ್ಯರಿಂದ ಮನುಷ್ಯರಿಗೆ ಈ ಮೊದಲು ಅಂಗಾಂಗ ಕಸಿ ಮಾಡಲಾಗುತ್ತಿತ್ತು. ಮನುಷ್ಯರ ಅಂಗಗಳ ಕೊರತೆಯಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಾಣಿಗಳ ಅಂಗಗಳನ್ನೂ ಮನುಷ್ಯನಿಗೆ ಕಸಿ ಮಾಡಲಾಗುತ್ತಿದೆ. ಅತ್ಯಪರೂಪ ಎನಿಸಿದರೂ, ಅಲ್ಲಲ್ಲಿ ಈ ರೀತಿಯ ಕಸಿ ನಡೆಯುತ್ತಿದೆ.
ಇತ್ತೀಚೆಗಷ್ಟೇ ಒಂದು ಘಟನೆ ನಡೆದಿತ್ತು. ಹಂದಿಯ ಹೃದಯವನ್ನು ಎರಡು ತಿಂಗಳ ಹಿಂದೆ ಕಸಿ ಮಾಡಿಸಿಕೊಂಡಿದ್ದ ಅಮೆರಿಕದ ಡೇವಿಡ್ ಬೆನೆಟ್ ಎಂಬಾತ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವೈದ್ಯಕೀಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಈ ನಂತರ ಕೆಲವು ತಜ್ಞರು ಪ್ರಾಣಿಗಳ ಅಂಗಗಳನ್ನು ಮುನುಷ್ಯರಿಗೆ ಕಸಿ ಮಾಡಲು ಸದ್ಯಕ್ಕೆ ಸ್ವಲ್ಪ ಕಷ್ಟ. ಆದರೆ, ಮುಂದಿನ 30 ರಿಂದ 40 ವರ್ಷಗಳ ನಂತರ ಈ ರೀತಿಯ ಕಸಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿದ್ದಾರೆ.
ಪ್ರಾಣಿಗಳಿಂದ ಮನುಷ್ಯರಿಗೆ ಮಾತ್ರವಲ್ಲದೇ, ಒಂದು ಪ್ರಭೇದದ ಜೀವಿಯಿಂದ ತೆಗೆದ ಅಂಗಗಳನ್ನು ಮತ್ತೊಂದು ಪ್ರಭೇದದ ಜೀವಿಗಳಿಗೆ ಕಸಿ ಮಾಡುವ ಪ್ರತಿಕ್ರಿಯೆಯನ್ನು ಕ್ಸೆನೋಟ್ರಾನ್ಸ್ಪ್ಲಾನ್ಟೇಷನ್(Xenotransplantation) ಎಂದು ಕರೆಯಲಾಗುತ್ತದೆ. ಆ ಪ್ರಕ್ರಿಯೆಯೇ ಇಲ್ಲಿಯವರೆಗೆ ಮುಂದುವರೆದುಕೊಂಡು ಬಂದಿದೆ. ಮುಂದಿನ 30 ರಿಂದ 40 ವರ್ಷಗಳಲ್ಲಿ ಕ್ಸೆನೋಟ್ರಾನ್ಸ್ಪ್ಲಾನ್ಟೇಷನ್ ವಿಭಾಗದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಆಗ ವಿವಿಧ ಪ್ರಾಣಿಗಳ ಅಂಗಗಳನ್ನು ಮಾನವನಿಗೆ ಯಶಸ್ವಿಯಾಗಿ ಕಸಿ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕ್ಸೆನೋಟ್ರಾನ್ಸ್ಪ್ಲಾನ್ಟೇಷನ್ ಇತಿಹಾಸ: ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ರಕ್ತವನ್ನು ಸೇರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. 17ನೇ ಶತಮಾನದಲ್ಲೇ ಮಾನವನ ರಕ್ತದ ಅಭಾವ ಹೆಚ್ಚಾದಾಗ ತಜ್ಞರು ಪ್ರಾಣಿಗಳಿಂದ ರಕ್ತವನ್ನು ಪಡೆದು, ಅದನ್ನು ಮನುಷ್ಯನಿಗೆ ನೀಡುವ ಪ್ರಯತ್ನ ಮಾಡಲಾಗಿತ್ತು. ಅಲ್ಲಿಂದಲೇ ಕ್ಸೆನೋಟ್ರಾನ್ಸ್ಪ್ಲಾನ್ಟೇಷನ್ ಪರಿಕಲ್ಪನೆ ಆರಂಭವಾಗಿತ್ತು.
ಹಾಗೆಯೇ ಮಾನವ ಅಂಗಾಂಗಗಳ ಕೊರತೆಯಾದಾಗ ಉಳಿದ ಸಸ್ತನಿಗಳ ಅಂಗಾಂಗಗಳನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಯಿತು. ಕೋತಿಗಳು, ಚಿಂಪಾಂಜಿಗಳು, ಬಬೂನ್ಗಳು ಮತ್ತು ಹಂದಿಗಳ ಅಂಗಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳು ಆರಂಭವಾದವು. ಈ ಪ್ರಾಣಿಗಳಲ್ಲಿ ಹಂದಿಗಳ ಅಂಗಗಳು ಮಾನವ ಅಂಗಗಳಿಗೆ ಹೆಚ್ಚು ಹೋಲಿಕೆ ಕಂಡು ಬಂದಿದ್ದು, ಅವುಗಳನ್ನು ಹಲವು ಬಾರಿ ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ: ಹಂದಿ ಹೃದಯ ಕಸಿಗೆ ಒಳಗಾಗಿದ್ದ ಡೇವಿಡ್ ಬೆನೆಟ್ ನಿಧನ..ಸಂಶೋಧಕರಿಗೆ ನಿರಾಶೆ
'ಯಾವ ಕಸಿಯೂ ಸಂಪೂರ್ಣ ಯಶಸ್ವಿಯಾಗಿಲ್ಲ': ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಬಾರಿ ಹಲವಾರು ಅಂಗಗಳನ್ನು ಕಸಿ ಮಾಡಲಾಗಿದ್ದು, ಇದುವರೆಗೆ ಯಾವುದೇ ಕಸಿ ಪ್ರಕ್ರಿಯೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ ಎಂದು ಕೊಚ್ಚಿಯಲ್ಲಿರುವ ಅಮೃತಾ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ.ಸುಧೀಂದ್ರನ್ ಐಎಎನ್‌ಎಸ್‌ಗೆ ಮಾಹಿತಿ ನೀಡಿದ್ದಾರೆ. ಮುಂದಿನ 30 - 40 ವರ್ಷಗಳಲ್ಲಿ ನಾವು ಪ್ರಗತಿ ಸಾಧಿಸಬಹುದಾಗಿದೆ. ಈ ಪ್ರಕ್ರಿಯೆ ಸಂಕೀರ್ಣವಾದ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ ಎಂದು ಸುಧೀಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಯ ಸಿಟಿವಿಎಸ್‌ನ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಉದ್ಗೀತ್ ಧೀರ್ ಅವರ ಪ್ರಕಾರ ಪ್ರಾಣಿಗಳ ಅಂಗಗಳು ಮಾನವ ದೇಹಕ್ಕೆ ಹೆಚ್ಚು ಹೊಂದಿಕೆಯಾದರೆ, ಕ್ಸೆನೋಟ್ರಾನ್ಸ್ಪ್ಲಾನ್ಟೇಷನ್ ಅನ್ನು ಯಶಸ್ವಿಗೊಳಿಸಬಹುದು. ಪ್ರಾಣಿಗಳ ಅಂಗವನ್ನು ನಮ್ಮದೇ ದೇಹದ ಒಂದು ಭಾಗವಾಗಿ ಸ್ವೀಕರಿಸುವ ರೀತಿಯಲ್ಲಿ ಮಾರ್ಪಾಡುಗೊಳಿಸಿದರೆ, ಕ್ಸೆನೋಟ್ರಾನ್ಸ್ಪ್ಲಾನ್ಟೇಷನ್ ಅನ್ನು ಯಶಸ್ವಿಗೊಳಿಸುವುದು ಕಷ್ಟವೇನಲ್ಲ ಎಂದಿದ್ದಾರೆ.
ಈಗ ಹೊಸ ಸೆಲ್ಯುಲಾರ್ ತಂತ್ರಜ್ಞಾನದ ಮೂಲಕ ಜೀನ್ ಅನ್ನು ಮಾರ್ಪಾಡು ಮಾಡಬಹುದಾಗಿದೆ. ಇದರಿಂದಾಗಿ ಪ್ರಾಣಿಗಳ ಅಂಗಗಳನ್ನ ಬಳಸಬಹುದಾಗಿದೆ. ಅಮೆರಿಕದ ವೈದ್ಯರು ಜನವರಿಯಲ್ಲಿ ಹೃದ್ರೋಗದಿಂದ ಬಳಲುತ್ತಿದ್ದ 57 ವರ್ಷದ ಡೇವಿಡ್ ಬೆನೆಟ್‌ಗೆ ಹಂದಿ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡಿದರು. ಹಲವು ವಾರಗಳವರಗೆ ಆ ಹೃದಯ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿತ್ತು. ಆದರೆ, ಎರಡು ತಿಂಗಳ ನಂತರ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆತ ಮೃತಪಡಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.