ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ವ್ಯವಸ್ಥೆಯಡಿ ಚಿಕಿತ್ಸೆಗಳನ್ನು ನೀಡಲು ಉದ್ದೇಶಿತ ಡೇ ಕೇರ್ ಥೆರಪಿ ಕೇಂದ್ರಗಳ ಸೌಕರ್ಯ ಒದಗಿಸುವ ಪ್ರಸ್ತಾವಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ.
ಈಗಾಗಲೇ ಕೇಂದ್ರ ಸರ್ಕಾರಿ ಆರೋಗ್ಯ ಸೇವೆಗಳು (ಸಿಜಿಎಚ್ ಎಸ್) ಅಡಿ ಹೆಸರಿಸಲಾದ (ಎಂಪ್ಯಾನಲ್) ಪಡೆದ ಸಾಂಪ್ರದಾಯಿಕ (ಅಲೋಪಥಿ) ವೈದ್ಯಕೀಯ ಕೇಂದ್ರಗಳ ಮಾದರಿಯಲ್ಲಿ ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ ಖಾಸಗಿ ಡೇ ಕೇರ್ ಕೇಂದ್ರಗಳ ಪಟ್ಟಿ ಮಾಡಲಾಗುತ್ತದೆ.
ಈ ಕೇಂದ್ರಗಳ ಪ್ರಯೋಜನವು ಈಗಾಗಲೇ ಸೇವೆ ಸಲ್ಲಿಸುತ್ತಿರುವ ಮತ್ತು ಪಿಂಚಣಿ ಪಡೆಯುತ್ತಿರುವ ಎಲ್ಲ ಸಿಜಿಎಚ್ಎಸ್ ಫಲಾನುಭವಿಗಳಿಗೆ ಲಭ್ಯವಾಗಲಿದೆ. ಸಿಜಿಎಚ್ಎಸ್, ಫಲಾನುಭವಿಗಳು ಮತ್ತು ಸಾರ್ವಜನಿಕರಲ್ಲಿ ಆಯುಷ್ ವೈದ್ಯ ಪದ್ದತಿಗಳ ಬಗ್ಗೆ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಗಮನದಲ್ಲಿ ಇರಿಸಿಕೊಂಡು ಸಚಿವಾಲಯ ಈ ತೀರ್ಮಾನ ತೆಗೆದುಕೊಂಡಿದೆ.
ಆರಂಭದಲ್ಲಿ ಪ್ರಾಯೋಗಿಕವಾಗಿ ದೆಹಲಿ ಮತ್ತು ಎನ್ಸಿಆರ್ ಪ್ರದೇಶದಲ್ಲಿ ಡೇ ಕೇರ್ ಥೆರಪಿ ಕೇಂದ್ರಗಳ ಪಟ್ಟಿಯನ್ನು ಒಂದು ವರ್ಷದ ಮಟ್ಟಿಗೆ ಪ್ರಕಟಿಸಲಾಗುವುದು. ಈ ಆನಂತರ ಇತರ ಪ್ರದೇಶಗಳಿಗೆ ಅದನ್ನು ವಿಸ್ತರಿಸಲಾಗುವುದು.
ಈ ಡೇ ಕೇರ್ ಥೆರಪಿ ಕೇಂದ್ರಗಳಲ್ಲಿ ಅಲ್ಪಾವಧಿ ಉಳಿದುಕೊಂಡು ಚಿಕಿತ್ಸೆ ಪಡೆಯುವ ಪ್ರಕ್ರಿಯೆಯ ನಿಯಮಗಳನ್ನು ಪ್ರಕಟಿಸಲಾಗಿದೆ. ಈ ಯೋಜನೆಯಡಿ ಸಿಜಿಎಚ್ಎಸ್ ಫಲಾನುಭವಿಗಳು ಒಂದು ದಿನಕ್ಕಿಂತ ಕಡಿಮೆ ಅವಧಿ ಅಂದರೆ ಕೆಲವು ಗಂಟೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಇದರ ಉದ್ದೇಶ, ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವುದಲ್ಲದೆ, ಆರೋಗ್ಯ ರಕ್ಷಣಾ ವೆಚ್ಚವನ್ನು ತಗ್ಗಿಸುವುದು ಮತ್ತು ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಸುಲಭವಾಗಿ ಪರಿಣಾಮಕಾರಿ ಆರೋಗ್ಯ ಸೇವೆಗಳನ್ನು ಒದಗಿಸುವುದಾಗಿದೆ.
ಈ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪರಿಚಯವಲ್ಲದ ಪರಿಸರದಲ್ಲಿ ರಾತ್ರಿ ವಾಸ್ತವ್ಯಕ್ಕೆ ಅವಕಾಶವಿರುವುದಿಲ್ಲ. ಇದು ಮಕ್ಕಳು ಮತ್ತು ವೃದ್ಧ ರೋಗಿಗಳಿಗೆ ತುಂಬಾ ಅಸಮಪರ್ಕವಾಗಿದೆ. ಆಯುಷ್ ವೈದ್ಯ ಪದ್ದತಿ ಪ್ರಯೋಜನ ದೊರಕಿಸಿಕೊಡುವಲ್ಲಿ ಕೇಂದ್ರ ಸರ್ಕಾರದ ಪ್ರಮುಖ ಹೆಜ್ಜೆಯಾಗಿದೆ.
ಪ್ರಸ್ತುತ ಅನುಮೋದಿಸಲ್ಪಟ್ಟಿರುವ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಪಂಚಕರ್ಮ ಮತ್ತು ಅಭ್ಯಂಗ ಮತ್ತಿತರ ಚಿಕಿತ್ಸೆಗಳು ಸಿಜಿಎಚ್ ಎಸ್ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ದಾಖಲಾದಾಗ ಮಾತ್ರ ನೀಡಲಾಗುವುದು. ಇದರಲ್ಲಿ ಸಿಜಿಎಚ್ ಎಸ್ ಗೆ ಹೆಚ್ಚುವರಿ ಶುಲ್ಕವಾಗಿ ಒಳಾಂಗಣ ಕೊಠಡಿ ಶುಲ್ಕ ಒಳಗೊಂಡಿದ್ದು, ಅದನ್ನು ಕಾರ್ಯವಿಧಾನ ವೆಚ್ಚ ಮಾತ್ರವಲ್ಲದೇ ಸಿಜಿಎಚ್ಎಸ್ ಪ್ರತ್ಯೇಕವಾಗಿ ಪಾವತಿಸಲಿದೆ. ಡೇ ಕೇರ್ ಕೇಂದ್ರಗಳಿಂದಾಗಿ ಆಸ್ಪತ್ರೆಗಳ ವೆಚ್ಚ ತಗ್ಗುವುದಲ್ಲದೆ, ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದೆ.