ಯಾರು ಎಷ್ಟು ಆಹಾರ ಸೇವನೆ ಮಾಡುತ್ತಾರೆ ಎಂದು ಅಂದಾಜಿಸಿ ಅಡುಗೆ ಮಾಡುವುದು ಸುಲಭವಲ್ಲ. ಅದರಲ್ಲೂ ಹೆಚ್ಚು ಜನರಿಗೆ ಅಡುಗೆ ಮಾಡುವಾಗ ಆಹಾರ ಉಳಿಯುವುದು ಸಾಮಾನ್ಯ. ಉಳಿದ ಅಡುಗೆಯನ್ನು ಹಾಳಾಗದಂತೆ ರೆಫ್ರಿಜರೇಟರ್ನಲ್ಲಿ ಇಡುತ್ತೇವೆ. ಬೇಕಾದಾಗ ಬಿಸಿ ಮಾಡಿ ತಿನ್ನುತ್ತೇವೆ. ಆದರೆ, ಈ ಆಹಾರಗಳು ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ?. ಪದೇ ಪದೇ ಆಹಾರವನ್ನು ಬಿಸಿ ಮಾಡುವುದರಿಂದ ಆಗುವ ಪೋಷಕಾಂಶ ನಷ್ಟದ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಸಮುದ್ರದ ಆಹಾರ: ಶೀತಲೀಕರಿಸಿದ ಸಮುದ್ರದ ಆಹಾರಕ್ಕಿಂತ ತಾಜಾ ಸಮುದ್ರದ ಆಹಾರ ಉತ್ತಮ. ಆದರೆ, ಸಂರಕ್ಷಣಾ ವಿಧಾನವನ್ನು ಆಹಾರ ಸುರಕ್ಷತಾ ಸಂಸ್ಥೆಗಳು ಹೆಚ್ಚು ಬಿಗಿಯಾಗಿ ನಿಯಂತ್ರಿಸುತ್ತವೆ. ಶೀತಲೀಕರಿಸಿದ ಆಹಾರಗಳು ಸುರಕ್ಷಿತ. ಆದರೆ, ಈ ಸಮುದ್ರ ಆಹಾರಗಳಿಂದ ಅಡುಗೆ ಮಾಡಿ, ಅದನ್ನು ಫ್ರಿಜ್ನಲ್ಲಿಟ್ಟು ಪುನಃ ಪುನಃ ಬಿಸಿ ಮಾಡುವುದು ಆರೋಗ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.
ಅನ್ನ: ಅನ್ನವನ್ನೂ ಕೂಡ ಫ್ರಿಜ್ನಲ್ಲಿ ದೀರ್ಘಾವಧಿ ಕಾಲ ಇಟ್ಟು ಬಿಸಿ ಮಾಡುವುದರಿಂದ ಅದರಲ್ಲಿ ಬ್ಯಸಿಲುಸ್ ಸೆರೆಸ್ ಎಂಬ ಬ್ಯಾಕ್ಟೀರಿಯಾ ಬೆಳೆಯುತ್ತದೆ.
ಪಾಲಕ್: ಅತ್ಯುತ್ತಮ ಆಹಾರವಾದ ಪಾಲಕ್ ಕೂಡ ವಿಷವಾಗುತ್ತದೆ. ಇದನ್ನು ಬಿಸಿ ಮಾಡಿ ಪ್ರಿಜ್ನಲ್ಲಿಟ್ಟು ಬಳಿಕ ಮತ್ತೆ ಬಿಸಿ ಮಾಡಿದರೆ, ಇದರಿಂದ ಆರೋಗ್ಯಕ್ಕೆ ಅಪಾಯವೇ ಹೆಚ್ಚು. ಈ ಪಾಲಕ್ ಅನ್ನು ಅಧಿಕ ತಾಪಮಾನದಲ್ಲಿ ಮತ್ತೆ ಬಿಸಿ ಮಾಡಿದಾಗ ಅವು ನೈಟ್ರೊಸಮೈನ್‌ಗಳಾಗಿ ರೂಪಾಂತರಗೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಕಾರ್ಸಿನೋಜೆನಿಕ್ ಆಗಿರುತ್ತವೆ.
ಮೊಟ್ಟೆ: ಅಗಾಧ ಪ್ರೊಟೀನ್ ಅಂಶವಿರುವ ಮೊಟ್ಟೆಯನ್ನು ಬಿಸಿ ಮಾಡುವುದು ಅಪಾಯಕಾರಿಯೇ. ಫ್ರೈ ಮಾಡಿದ ಮೊಟ್ಟೆಗಳನ್ನು ತಕ್ಷಣ ತಿನ್ನಬೇಕು. ಅದನ್ನು ಮತ್ತೆ ಬಿಸಿ ಮಾಡಿದರೆ ನೈಟ್ರೋಜನ್ ಆಮ್ಲ ಬಿಡುಗಡೆಯಾಗಿ ಕ್ಯಾನ್ಸರ್ಗೆ ಕಾರಣವಾಗುತ್ತದೆ.
ಬೀಟ್ರೂಟ್: ಇದೂ ಕೂಡ ಪಾಲಕ್ ಸೊಪ್ಪಿನಂತೆ ಅಪಾಯಕಾರಿ.
ಮಶ್ರೂಮ್: ಬಿಳಿ ಮತ್ತು ಕಂದು ಬಟನ್ ಮಶ್ರೂಮ್ಗಳನ್ನು ಹಾಗೆಯೇ ತಿನ್ನಬಹುದು. ಉಳಿದ ಮಶ್ರೂಮ್ಗಳನ್ನು ಬೇಯಿಸಿಯೇ ತಿನ್ನಬೇಕು. ಅಡುಗೆ ಮಾಡಿದ ಮರುದಿನ ಇದನ್ನು ಮತ್ತೆ ಫ್ರಿಡ್ಜ್‌ನಲ್ಲಿಟ್ಟು ಬಿಸಿ ಮಾಡಬಾರದು. ಇದರಲ್ಲಿನ ಪ್ರೋಟಿನ್ಗಳು ಕಿಣ್ವ, ಬ್ಯಾಕ್ಟೀರಿಯಾಗಳಿಂದ ಹಾನಿಯಾಗುತ್ತದೆ. ಇದರಿಂದ ಹೊಟ್ಟೆಯೊಳಗೆ ಸಮಸ್ಯೆ ಕಾಡುತ್ತದೆ.
ಚಿಕನ್: ಚಿಕನ್ ಅನ್ನು ಕೂಡ ಫ್ರಿಡ್ಜ್‌ನಲ್ಲಿಟ್ಟು ನಂತರ ಬಿಸಿ ಮಾಡಿ ಸೇವಿಸುವುದರಿಂದ ಇದರಲ್ಲಿನ ಪ್ರೊಟೀನ್ಗಳು ಸಂಪೂರ್ಣವಾಗಿ ಬದಲಾಗುತ್ತವೆ. ಇದು ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಇದನ್ನು ಅಧಿಕ ತಾಪಮಾನದಲ್ಲಿ ಬಿಸಿ ಮಾಡಬಾರದು.
ಆಲೂಗಡ್ಡೆ: ಕೊಠಡಿಯ ತಾಪಮಾನದಲ್ಲಿ ಬೇಯಿಸಿದ ಆಲುಗಡ್ಡೆಯನ್ನು ಫ್ರಿಡ್ಜ್‌ನಲ್ಲಿಟ್ಟು ಬಳಿಕ ಬಿಸಿ ಮಾಡುವುದರಿಂದ ಇದು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವ ಆಹಾರವನ್ನು ತಿನ್ನುವುದು ಬಹಳ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: Benefits of Amla.. ಆಮ್ಲಾ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ; ವೈದ್ಯರ ವಿವರಣೆ ಇಲ್ಲಿದೆ..