ಗರ್ಭಿಣಿಯರ ಆರೋಗ್ಯದ ಮೇಲೆ ಕೋವಿಡ್ ಪರಿಣಾಮಗಳ ಬಗೆಗಿನ ಮಾಹಿತಿ ಸೀಮಿತವಾಗಿದೆ. ಅವರಿಗೆ ಇನ್ನುಳಿದವರಿಗಿಂತ ಹೆಚ್ಚು ಅಪಾಯವಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೂ ಕೂಡ ಮುನ್ನೆಚ್ಚರಿಕೆ ಕ್ರಮ ಮರೆಯುವಂತಿಲ್ಲ. ಅದರಲ್ಲೂ ಗರ್ಭಿಣಿಯರು ತುಸು ಹೆಚ್ಚೇ ಜಾಗರೂಕರಾಗಿರಬೇಕು.
ಮೈಕ್ರೋಬಯಾಲಜಿ, ಇಮ್ಯುನೊಲಜಿ ಮತ್ತು ಮಾಲಿಕ್ಯುಲರ್ ಜೆನೆಟಿಕ್ಸ್ ವಿಭಾಗದ ಅಧ್ಯಕ್ಷರಾದ ಇಲ್ಹೆಮ್ ಮೆಸ್ಸೌದಿ ನೇತೃತ್ವದಲ್ಲಿ ನಡೆದ ಅಧ್ಯಯನದ ಪ್ರಕಾರ, ಲಕ್ಷಣರಹಿತ ಅಥವಾ ಸೌಮ್ಯ ಲಕ್ಷಣವುಳ್ಳ ಕೋವಿಡ್ ಕೂಡ ಗರ್ಭಿಣಿಯರಿಗೆ ತೊಂದರೆ ಉಂಟುಮಾಡುತ್ತದೆ ಮತ್ತು ಹೊಕ್ಕಳುಬಳ್ಳಿಯಲ್ಲಿ ಉರಿಯೂತ ಉಂಟು ಮಾಡಲಿದೆಯೆಂದು ತಿಳಿಸಿದೆ.
ಯಾವ ರೀತಿಯ ಸಮಸ್ಯೆ ಆಗುತ್ತೆ?: ಈ ಮೊದಲು ತೀವ್ರ ಲಕ್ಷಣವುಳ್ಳ ಕೋವಿಡ್ ಪ್ರಕರಣಗಳಲ್ಲಿ ಮಾತ್ರ ಈ ರೀತಿಯ ಸಮಸ್ಯೆ ಆಗಬಹುದು ಎಂದು ಭಾವಿಸಲಾಗಿತ್ತು. ಆದರೆ ಸೌಮ್ಯ ಸೋಂಕು ಪ್ರಕರಣಗಳನ್ನೂ ಸಹ ನಾವು ಅಲ್ಲಗೆಳೆಯುವಂತಿಲ್ಲ. ಹೊಕ್ಕಳುಬಳ್ಳಿಗೆ ಸೋಂಕು ತಗುಲಿದರೆ ಹುಟ್ಟಲಿರುವ ಮಗು ಮತ್ತು ತಾಯಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಹೊಕ್ಕಳುಬಳ್ಳಿಯ ಕ್ರಿಯೆ ಬಹಳ ಮಹತ್ವದ್ದು. ತಾಯಿ ಮತ್ತು ಮಗುವಿನ ನಡುವೆ ಸೋಂಕು ಹರಡುವುದು ಅತ್ಯಂತ ಅಪರೂಪ. ತಾಯಿಯ ರೋಗನಿರೋಧಕ/ಪ್ರತಿರಕ್ಷಣಾ ವ್ಯವಸ್ಥೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಇದು ತಾಯಿಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೇ ಮಗುವಿನ ರೋಗನಿರೋಧಕ ಶಕ್ತಿ ಮೇಲೂ ಪರಿಣಾಮ ಬೀರಲಿದೆ ಎಂದು ಇಲ್ಹೆಮ್ ಮೆಸ್ಸೌದಿ ತಿಳಿಸಿದ್ದಾರೆ.
ಅಧ್ಯಯನ ತಂಡ ಕಂಡುಕೊಂಡಿದ್ದೇನು?: ಈ ಅಧ್ಯಯನ ತಂಡವು ಜರಾಯು/ಹೊಕ್ಕಳುಬಳ್ಳಿ ಅಂಗಾಂಶದಲ್ಲಿನ ಪ್ರತಿರಕ್ಷಣಾ ಕೋಶಗಳನ್ನು ಮತ್ತು ಹೆರಿಗೆಯ ಮೊದಲು SARS-CoV-2 ಧನಾತ್ಮಕ ಪರೀಕ್ಷೆ ಮಾಡಿದ ಗರ್ಭಿಣಿ ತಾಯಂದಿರ ರಕ್ತವನ್ನು ವಿಶ್ಲೇಷಿಸಿತು. ಲಕ್ಷಣರಹಿತ/ಸೌಮ್ಯ ಕೋವಿಡ್ ಹೊಂದಿರುವ ಮಹಿಳೆಯರ ಮಾದರಿಗಳನ್ನು ಸೋಂಕು ಇಲ್ಲದವರಿಗೆ ಹೋಲಿಸಲಾಯಿತು.
ಧನಾತ್ಮಕ ಪರೀಕ್ಷೆಯ ರೋಗಿಗಳು ಟಿ-ಕೋಶಗಳನ್ನು(ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಿಳಿ ರಕ್ತಕಣಗಳ ಒಂದು ವಿಧ) ಸಕ್ರಿಯಗೊಳಿಸಿದ್ದರೆ, ಅಂಗಾಂಶವನ್ನು ನಿಯಂತ್ರಿಸುವ ವಿಶೇಷ ಮ್ಯಾಕ್ರೋಫೇಜ್ ಕೋಶಗಳ ಉತ್ಪಾದನಾ ಮಟ್ಟ ಕಡಿಮೆಯಾಗಿತ್ತು ಎಂದು ಫಲಿತಾಂಶ ತಿಳಿಸಿದೆ.
ಪ್ರತಿರಕ್ಷಣಾ ವ್ಯವಸ್ಥೆ ಕೋವಿಡ್ ತಡೆಗೆ ಎಷ್ಟು ಸಹಕಾರಿ?: ಸಂಶೋಧನೆಗಳು ತಾಯಿಯ ಪ್ರತಿರಕ್ಷಣಾ ವ್ಯವಸ್ಥೆ ಮತ್ತು SARS-CoV-2 ಕುರಿತು ವಿಜ್ಞಾನಿಗಳ ತಿಳಿವಳಿಕೆಯನ್ನು ಹೆಚ್ಚಿಸುತ್ತವೆ ಮತ್ತು ತಾಯಂದಿರು ಮತ್ತು ಶಿಶುಗಳಿಗೆ ಸಂಭಾವ್ಯ ದೀರ್ಘಕಾಲೀನ ಪರಿಣಾಮಗಳ ಕುರಿತು ಭವಿಷ್ಯದ ಅಧ್ಯಯನಗಳಿಗೆ ಸಹಾಯ ಮಾಡುತ್ತದೆ ಎಂದು ಮೆಸ್ಸೌದಿ ತಿಳಿಸಿದ್ದಾರೆ.
ಇದು ತಾಯಿಯ ಪ್ರತಿರಕ್ಷಣಾ ವ್ಯವಸ್ಥೆಯು ಎಷ್ಟು ಸಮರ್ಥವಾಗಿದೆ ಎಂದು ನಮಗೆ ಹೇಳುತ್ತದೆ. ಜೊತೆಗೆ ಸೋಂಕು ತೀವ್ರವಾಗಿರದಿದ್ದರೂ ಸಹ ಕೋವಿಡ್ ಗರ್ಭಿಣಿಯರಿಗೆ ಎಷ್ಟು ಹಾನಿಕಾರಕವಾಗಿದೆ ಎಂಬುದನ್ನು ತೋರಿಸುತ್ತದೆ. ಹಾಗಾಗಿ ಗರ್ಭಿಣಿಯರು ಲಸಿಕೆಯನ್ನು ಪಡೆಯುವುದು ಎಷ್ಟು ಪ್ರಮುಖ ವಿಷಯ ಎಂದು ಯೋಚಿಸಬೇಕಿದೆ ಅಂತಾ ಇಲ್ಹೆಮ್ ಮೆಸ್ಸೌದಿ ತಿಳಿಸಿದರು.